ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ನಿರ್ಣಾಯಕ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ತಾಂತ್ರಿಕ ಸಮಿತಿಯು ಮೀಸಲಾತಿ ಹಂಚಿಕೆಯ ಪರಿಷ್ಕೃತ ವರದಿಯನ್ನು ಸಲ್ಲಿಸಲಿರುವುದು ಭಾರೀ ತೀವ್ರ ಕುತೂಹಲ ಮೂಡಿಸಿದೆ.

ಕುತೂಹಲ - ಸಿಎಂ ನೇತೃತ್ವದಲ್ಲಿ ಮಧ್ಯಾಹ್ನ ನಡೆಯಲಿರುವ ಸಭೆ । ಒಳ ಮೀಸಲು ಬಗ್ಗೆ ನಿರ್ಣಾಯಕ ತೀರ್ಮಾನ ನಿರೀಕ್ಷೆ

ಬೆಂಗಳೂರು (ಏ.24): ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ವಿವಿಧ ಗುಂಪುಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲು ಇಂದು ಮಹತ್ವದ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಭೆಯಲ್ಲಿ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ.

ಏ.16 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ತೀವ್ರ ಚರ್ಚೆ ನಡೆದಿತ್ತು. ಈ ವೇಳೆ ನ್ಯಾಯಾಲಯವು ಮೀಸಲಾತಿಯನ್ನು ಶೇ.56 ರ ಬದಲಿಗೆ ಶೇ.50ಕ್ಕೆ ಸೀಮಿತಗೊಳಿಸಿದೆ. ಹೀಗಾಗಿ ಎಸ್ಸಿ ಸಮುದಾಯಗಳಿಗೆ ಶೇ.17ರ ಬದಲಿಗೆ ಶೇ.15 ರಷ್ಟು ಮೀಸಲಾತಿ ಮಾತ್ರ ನೀಡಬಹುದು. ಹೀಗಾಗಿ ಈ ಹಿಂದೆ ತೆಗೆದುಕೊಂಡಿದ್ದ ಒಳ ಮೀಸಲಾತಿ ವರ್ಗೀಕರಣವನ್ನು ಪರಿಷ್ಕರಣೆ ಮಾಡಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಲಾಗಿತ್ತು.

ಆ ತಾಂತ್ರಿಕ ಸಮಿತಿಯು ಪರಿಶಿಷ್ಟ ಜಾತಿಯ ‘ಎ’ (ಎಡಗೈ ಸಂಬಂಧಿತ ಜಾತಿಗಳು) ಗುಂಪಿಗೆ ಶೇ.5.3, ‘ಬಿ’ (ಬಲಗೈ ಸಂಬಂಧಿತ ಜಾತಿಗಳು) ಗುಂಪಿಗೆ ಶೇ.5.3 ಹಾಗೂ ‘ಸಿ’ (ಅಲೆಮಾರಿ, ಅರೆ ಅಲೆಮಾರಿ, ಸ್ಪೃಶ್ಯ ಜಾತಿಗಳು) ಗುಂಪಿಗೆ ಶೇ.4.4 ರಷ್ಟು ಒಳ ಮೀಸಲಾತಿ ನಿಗದಿ ಮಾಡಬಹುದು ಎಂಬ ಕುರಿತು ತನ್ನ ವರದಿಯಲ್ಲಿ ಸಲಹೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಜತೆಗೆ ಮೀಸಲಾತಿ ಮರು ವಿಂಗಡಣೆ ಮಾಡಿ ಪೂರಕವಾಗಿ ರೋಸ್ಟರ್‌ ಬಿಂದು ಗುರುತಿಸಿಕೊಡಲಿದ್ದಾರೆ. ಸಂಪುಟ ಸಭೆಗೂ ಮುನ್ನ ಪರಿಶಿಷ್ಟ ಜಾತಿಯ ಸಚಿವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಸಭೆ ನಡೆಸಿ ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಮಾಡಲಿದ್ದಾರೆ. ಎಲ್ಲರ ಜತೆಗೂ ಚರ್ಚಿಸಿ ಅಳೆದು ತೂಗಿ ತೀರ್ಮಾನ ಮಾಡಲಿದ್ದಾರೆ ಎನ್ನಲಾಗಿದೆ.

ಕುತೂಹಲ ಮೂಡಿಸಿದ ಸಭೆ:

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಪೈಕಿ ಅವಕಾಶ ವಂಚಿತ ಉಪ ಜಾತಿಗಳಿಗೆ ಒಳಮೀಸಲು ಕಲ್ಪಿಸಬೇಕೆಂಬುದು ಮೂರು ದಶಕಗಳ ಹೋರಾಟ. ನ್ಯಾ.ನಾಗಮೋಹನ್‌ದಾಸ್‌ ಆಯೋಗದ ವರದಿ ಆಧಾರದ ಮೇಲೆ ಸರ್ಕಾರ ಪರಿಷ್ಕರಣೆ ಮಾಡಿ ಒಳ ಮೀಸಲಾತಿ ಜಾರಿಗೆ ತೀರ್ಮಾನಿಸಿತ್ತು. ಅದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಈಗ ಪರಿಷ್ಕೃತ ಒಳ ಮೀಸಲಾತಿ ಜಾರಿಗೆ ಮುಂದಾಗಿದ್ದಾರೆ. ಹೀಗಾಗಿ ಸಂಪುಟ ಸಭೆ ತೆಗೆದುಕೊಳ್ಳಲಿರುವ ಮಹತ್ವದ ತೀರ್ಮಾನ ಕುತೂಹಲ ಮೂಡಿಸಿದೆ.

ಹಲವು ಬಾರಿ ಅಪೂರ್ಣಗೊಂಡಿದ್ದ ಚರ್ಚೆ:

ಈ ಮೊದಲ ಹಲವು ಸಚಿವ ಸಂಪುಟ ಸಭೆಗಳಲ್ಲಿ ಒಳ ಮೀಸಲಾತಿ ಕುರಿತು ಚರ್ಚೆಯಾಗಿದ್ದರೂ ಈವರೆಗೂ ಅಂತಿಮ ತೀರ್ಮಾನ ಮಾಡಲು ಆಗಿಲ್ಲ. ಒಳಮೀಸಲು ಕುರಿತು ಚರ್ಚಿಸಲು ಮಾರ್ಚ್‌ 27ರಂದೇ ವಿಶೇಷ ಸಂಪುಟ ಸಭೆ ನಿಗದಿಯಾಗಿತ್ತು. ಆದರೆ, ಎರಡು ಕ್ಷೇತ್ರಗಳ ಉಪ ಚುನಾವಣೆ ಕಾರಣ ಆ ಸಭೆಯನ್ನು ಮುಂದೂಡಲಾಗಿತ್ತು.

ಏ.16ರಂದು ನಡೆದಿದ್ದ ಸಂಪುಟ ಸಭೆಯಲ್ಲೂ ಒಳಮೀಸಲು ವಿಚಾರ ಚರ್ಚೆಯಾಗಿತ್ತು. ಒಳಮೀಸಲು ಹಂಚಿಕೆ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಪರಿಶಿಷ್ಟ ಎಡಗೈ ಸಮುದಾಯದ ಸಚಿವರು ಅಂದಿನ ಸಭೆಯಲ್ಲಿ ಒತ್ತಾಯಿಸಿದ್ದರು.

ಹೀಗಾಗಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ನೇತೃತ್ವದಲ್ಲಿ ತಾಂತ್ರಿಕ ಮತ್ತು ಕಾನೂನಾತ್ಮಕ ಅಂಶಗಳ ಪರಾಮರ್ಶೆಗೆ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಕಾನೂನು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಅಡ್ವೊಕೇಟ್‌ ಜನರಲ್‌ ಈ ಸಮಿತಿಯಲ್ಲಿದ್ದರು. ಸಮಿಯ ವರದಿ ಶುಕ್ರವಾರದ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ.