ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚರಿಸಲಿದೆ. ಸೆ.30ರಂದು ರಾತ್ರಿ 11.55ಕ್ಕೆ ರೈಲು (06257) ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 11.15ಕ್ಕೆ ಮಂಗಳೂರು ತಲುಪಲಿದೆ
ಬೆಂಗಳೂರು : ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚರಿಸಲಿದೆ.
ಸೆ.30ರಂದು ರಾತ್ರಿ 11.55ಕ್ಕೆ ರೈಲು (06257) ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ವಾಪಸಾತಿ ಪ್ರಯಾಣದಲ್ಲಿ (06258) ಮಂಗಳೂರು ಜಂಕ್ಷನ್-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು ಅ.1ರಂದು ಮಧ್ಯಾಹ್ನ 2.35ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಅದೇ ದಿನ ರಾತ್ರಿ 11:30ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲ್ಲಲಿದೆ. 22 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ ಎರಡು ಎಸಿ 2-ಟೈರ್, ಮೂರು ಎಸಿ 3-ಟೈರ್, ಹನ್ನೊಂದು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ಎರಡನೇ ದರ್ಜೆ ಮತ್ತು ಎರಡು ಎಸ್ಎಲ್ಆರ್/ಡಿ ಬೋಗಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.
ಮೂರು ಹಂತದಲ್ಲಿ ಮೆಟ್ರೋ ನೀಲಿ ಮಾರ್ಗ ತೆರೆಯಲು ಬಿಎಂಆರ್ಸಿಎಲ್ ಯೋಜನೆ
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸಲಿರುವ ನಮ್ಮ ಮೆಟ್ರೋ ನೀಲಿ ಮಾರ್ಗವನ್ನು (58 ಕಿಮೀ) ಮೂರು ಹಂತಗಳಲ್ಲಿ ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮವು ಮುಂದಾಗಿದ್ದು, ಸಂಪೂರ್ಣ ಮಾರ್ಗ 2027ಕ್ಕೆ ಮುಗಿಯಲಿದೆ.
ಔಟರ್ ರಿಂಗ್ ರೋಡ್ ರಸ್ತೆ ಅಂದರೆ ಕೆ.ಆರ್.ಪುರ - ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಬರೋಬ್ಬರಿ 500ಕ್ಕೂ ಹೆಚ್ಚು ಐಟಿ ಕಂಪನಿಗಳಿದ್ದು, ಇಲ್ಲಿಯೇ ಸುಮಾರು 9.5 ಲಕ್ಷ ಉದ್ಯೋಗಿಗಳಿದ್ದಾರೆ. ನೀಲಿ ಮಾರ್ಗ ನಿರ್ಮಾಣದಿಂದ ಇಲ್ಲಿನ ಉದ್ಯೋಗಿಗಳಿಗೆ, ಕಂಪನಿಗಳಿಗೆ ಸಾಕಷ್ಟು ನೆರವಾಗುವ ಜತೆಗೆ ಈ ಭಾಗದ ಟ್ರಾಫಿಕ್ ದಟ್ಟಣೆ ಗಣನೀಯವಾಗಿ ತಗ್ಗುವ ನಿರೀಕ್ಷೆಯಿದೆ.
ಮೂರು ಹಂತ:
2021ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಕಳೆದ ವರ್ಷವೇ ಪೂರ್ಣಗೊಳ್ಳಬೇಕಿತ್ತು. ಆದರೆ, ಇದೀಗ ಡೆಡ್ಲೈನ್ನ್ನು ಪರಿಷ್ಕರಿಸಿ ಮೂರು ಹಂತದಲ್ಲಿ ಮುಗಿಸಲು ತೀರ್ಮಾನಿಸಲಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ.ಆರ್. ಪುರ ಮಾರ್ಗವನ್ನು 2026ರ ಸೆಪ್ಟೆಂಬರ್, ಹೆಬ್ಬಾಳದಿಂದ ಏರ್ಪೋರ್ಟ್ವರೆಗೆ 2027ರ ಜೂನ್ ಹಾಗೂ ಕೆ.ಆರ್.ಪುರದಿಂದ ಹೆಬ್ಬಾಳದವರೆಗೆ 2027ರ ಡಿಸೆಂಬರ್ನಲ್ಲಿ ಪೂರ್ಣಗೊಳಿಸಲು ಹಾಗೂ ಸಂಚಾರ ಆರಂಭಿಸಲು ಯೋಜಿಸಲಾಗಿದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ಸಂಪೂರ್ಣ ನೀಲಿ ಮಾರ್ಗವನ್ನು ಒಂದೇ ಹಂತದಲ್ಲಿ ತೆರೆಯಲು ಮುಂದಾದರೆ ಮೂರು ವರ್ಷ ತಗುಲಬಹುದು (2027-28). ಹೀಗಾಗಿ ಬಿಎಂಆರ್ಸಿಎಲ್ ಈ ಮಾರ್ಗವನ್ನು ಮೂರು ಹಂತದಲ್ಲಿ ತೆರೆಯಲು ಯೋಚಿಸುತ್ತಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.


