ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಹಾಗೂ ಅವರ ತಾಯಿ ತಮಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆಂದು ತಂದೆ ಬಾಲಕೃಷ್ಣ ನಾಯ್ಕ್ ನೀಡಿದ ದೂರಿನ ಅನ್ವಯ, ಉಡುಪಿಯ ಹಿರಿಯ ನಾಗರಿಕರ ನ್ಯಾಯಾಲಯವು ಚೈತ್ರಾ ಅವರಿಗೆ ತಂದೆಗೆ ಕಿರುಕುಳ ನೀಡದಂತೆ ಆದೇಶಿಸಿದೆ.
ಉಡುಪಿ(ಡಿ.20): ಉಡುಪಿಯ ಹಿರಿಯ ನಾಗರಿಕರ ನ್ಯಾಯಾಲಯವು ಚೈತ್ರಾ ಕುಂದಾಪುರ ಅವರಿಗೆ ಮಹತ್ವದ ಆದೇಶವೊಂದನ್ನು ನೀಡಿದೆ. ತನ್ನ ತಂದೆಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ನ್ಯಾಯಾಲಯವು ಚೈತ್ರಾ ಅವರಿಗೆ ಸ್ಪಷ್ಟವಾಗಿ ಸೂಚಿಸಿದೆ.
ಪತ್ನಿ ಮಗಳು ಸೇರಿ ಮಾನಸಿಕ ಕಿರುಕುಳ:
ನ್ಯಾಯಾಲಯದ ಮೊರೆ ಹೋಗಿದ್ದ ತಂದೆ ಬಾಲಕೃಷ್ಣ ನಾಯ್ಕ್ತನ್ನ ಮಗಳು ಚೈತ್ರಾ ಮತ್ತು ಪತ್ನಿ ಇಬ್ಬರೂ ಸೇರಿ ತನಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈಗ ತಂದೆಯ ಪರವಾಗಿ ತೀರ್ಪು ಪ್ರಕಟಿಸಿದೆ.
ರಕ್ಷಣೆ ನೀಡಲು ಪೊಲೀಸರಿಗೆ ಕೋರ್ಟ್ ಸೂಚನೆ
ಬಾಲಕೃಷ್ಣ ನಾಯ್ಕ್ ಅವರಿಗೆ ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯ ತಿಳಿಸಿದೆ. 'ಕರ್ನಾಟಕ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ನಿಯಮ'ಗಳ ಅಡಿಯಲ್ಲಿ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಕುಂದಾಪುರ ಪೊಲೀಸರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.
ವಿರೋಧದ ನಡುವೆಯೂ ವಿವಾಹವಾಗಿದ್ದ ಚೈತ್ರಾ
ತಂದೆಯ ಇಚ್ಛೆಗೆ ವಿರುದ್ಧವಾಗಿ ಚೈತ್ರಾ ಅವರು ಇತ್ತೀಚೆಗಷ್ಟೇ ಪ್ರೇಮ ವಿವಾಹವಾಗಿದ್ದರು. ಸದ್ಯ ಅವರು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್' ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿರುವ ಬೆನ್ನಲ್ಲೇ ಈ ಕಾನೂನು ಸಂಕಷ್ಟ ಎದುರಾಗಿದೆ.


