ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್, ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು (ಡಿ.24): ಚಂದನವನದ ಖ್ಯಾತ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ನಗರದ ಸಿಸಿಬಿ (CCB) ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಐಟಿ ಆಕ್ಟ್ ಹಾಗೂ ಬಿಎನ್ಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನೆಯ ಹಿನ್ನೆಲೆ
ಇತ್ತೀಚೆಗೆ ದಾವಣೆಗೆರೆಯಲ್ಲಿ ನಡೆದ 'ಡೆವಿಲ್' ಸಿನಿಮಾದ ಸಕ್ಸಸ್ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಅವರು ಭಾಗವಹಿಸಿದ್ದರು. ಈ ವೇಳೆ ವೇದಿಕೆಯ ಮೇಲೆ ಮಾತನಾಡಿದ್ದ ಅವರು, ತಮ್ಮ ಪತಿ ದರ್ಶನ್ ಮತ್ತು ಅವರ ನಟನೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದರು. ಅಲ್ಲದೆ, ದರ್ಶನ್ ಅವರು ಈ ಹಿಂದೆ ಹೇಳಿದಂತೆ "ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ" ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದರು. ಈ ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವು ವ್ಯಕ್ತಿಗಳು ಮತ್ತು ನಕಲಿ ಖಾತೆಗಳ ಮೂಲಕ ವಿಜಯಲಕ್ಷ್ಮಿ ಹಾಗೂ ಅವರ ಕುಟುಂಬದ ಬಗ್ಗೆ ಅತ್ಯಂತ ಅಶ್ಲೀಲವಾಗಿ ಕಾಮೆಂಟ್ ಮಾಡಲಾಗಿದೆ.
ದೂರಿನಲ್ಲಿ ಏನಿದೆ?
'ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ನನ್ನ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗಿದೆ. ಕೆಲವು ನಕಲಿ ಖಾತೆಗಳನ್ನು ಸೃಷ್ಟಿಸಿ ಉದ್ದೇಶಪೂರ್ವಕವಾಗಿ ಮನಸ್ಸಿಗೆ ನೋವುಂಟು ಮಾಡುವಂತಹ ಕೆಟ್ಟ ಪದಗಳನ್ನು ಬಳಸಲಾಗಿದೆ. ಇದರಿಂದ ಸಮಾಜದಲ್ಲಿ ನಮಗೆ ಮುಜುಗರ ಉಂಟಾಗುತ್ತಿದೆ' ಎಂದು ವಿಜಯಲಕ್ಷ್ಮಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು
ದೂರಿನ ಗಂಭೀರತೆಯನ್ನು ಪರಿಗಣಿಸಿರುವ ಸೈಬರ್ ಕ್ರೈಂ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ಸೆಕ್ಷನ್‌ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಮೆಂಟ್ ಮಾಡಿರುವ ಅಕೌಂಟ್‌ಗಳ ಐಪಿ ಅಡ್ರೆಸ್ ಮತ್ತು ಅವುಗಳ ಮೂಲವನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಸೆಲೆಬ್ರಿಟಿಗಳ ಕುಟುಂಬದ ಮೇಲೆ ಡಿಜಿಟಲ್ ದಾಳಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಪವಿತ್ರಾ ಗೌಡನಂತೆ ಮಾಡಲಿಲ್ಲ:
ಇನ್ನು ನಟ ದರ್ಶನ್ ಅವರ ಸ್ನೇಹಿತೆಯಾಗಿರುವ ಪವಿತ್ರಾ ಗೌಡ ಅವರಿಗೆ ಚಿತ್ರುರ್ಗದ ರೇಣುಕಾಸ್ವಾಮಿ ಅಶ್ಲೀಲ ಕಾಮೆಂಟ್ ಮಾಡಿದ್ದಾನೆಂದು ತುಂಬಾ ಕೋಪಗೊಂಡಿದ್ದರು. ಇದಾದ ಬಳಿಕ ಪವಿತ್ರಾ ಗೌಡ ಸ್ನೇಹಿತರ ಸಹಾಯದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿ, ಬೆಂಗಳೂರಿಗೆ ಕರೆತಂು ಭೀಕರವಾಗಿ ಥಳಿಸಿ ಕೊಲೆ ಮಾಡಿ, ಬೀದಿ ಹೆಣವಾಗಿ ಬೀಸಾಡಿದ್ದರು. ಇದೇ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಒಟ್ಟು 17 ಜನರು ಜೈಲಿನ ಹಿಂದೆ ಮುದ್ದೆ ಮುರಿಯುತ್ತಿದ್ದಾರೆ. ಹೀಗಿರುವಾಗ, ನಟ ದರ್ಶನ್ ಡೆವಿಲ್ ಸಿನಿಮಾ ಬಗ್ಗೆ ಪ್ರಚಾರ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಟ್ಟ ಕಾಮೆಂಟ್‌ಗಳ ಬಂದಿವೆ. ಇದೀಗ ವಿಜಯಲಕ್ಷ್ಮಿ ದರ್ಶನ್ ಅವರು ಪವಿತ್ರಾ ಗೌಡ ಅವರಂತೆ ಕಾನೂನು ಕೈಗೆತ್ತಿಕೊಳ್ಳದೆ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


