ಕನ್ನಡದ ಜನಪ್ರಿಯ ನಿರೂಪಕಿ ಆ್ಯಂಕರ್ ಅನುಶ್ರೀ, ಐಟಿ ಉದ್ಯೋಗಿ ರೋಷನ್ ರಾಮಮೂರ್ತಿ ಅವರೊಂದಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ನೆನಪು ಮಾಡಿಕೊಂಡು ಕೆಲವು ಪ್ರಮುಖ ವ್ಯಕ್ತಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಬೆಂಗಳೂರು (ಆ.28): ಕನ್ನಡದ ಜನಪ್ರಿಯ ನಿರೂಪಕಿ ಆ್ಯಂಕರ್ ಅನುಶ್ರೀ, ಐಟಿ ಉದ್ಯೋಗಿ ರೋಷನ್ ರಾಮಮೂರ್ತಿ ಅವರೊಂದಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಮತ್ತು ವಿವಾಹದ ಕುರಿತು ಮಾತನಾಡಿದ್ದು, ಪುನೀತ್ ರಾಜ್‌ಕುಮಾರ್ ಅವರ ನೆನಪು ಮತ್ತು ಕೆಲವು ಪ್ರಮುಖ ವ್ಯಕ್ತಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ರೋಷನ್ ಅವರು ಅನುಶ್ರೀ ಪರಿಚಯವಾದ ದಿನಗಳ ಬಗ್ಗೆ ಮಾತನಾಡಿದ್ದು, ನನಗೆ ಅನುಶ್ರೀ ಐದು ವರ್ಷಗಳಿಂದ ಪರಿಚಯ. ಪುನೀತ ಪರ್ವ ಕಾರ್ಯಕ್ರಮದ ನಂತರ ನಮ್ಮಿಬ್ಬರ ಆತ್ಮೀಯತೆ ಇನ್ನಷ್ಟು ಹೆಚ್ಚಾಯಿತು. ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಭೈರಪ್ಪ ನನ್ನ ಬಾಲ್ಯದ ಗೆಳತಿ. ಅವರ ಮೂಲಕವೇ ನಾನು ಅನುಶ್ರೀಯನ್ನು ಭೇಟಿಯಾಗಿದ್ದು. ಅನುಶ್ರೀ ಸೆಲೆಬ್ರಿಟಿ ಅಂತ ನನಗೆ ಎಂದಿಗೂ ಅನಿಸಿಲ್ಲ. ಆಕೆ ತುಂಬಾ ಸರಳ ವ್ಯಕ್ತಿ. ನಾನು ಚೆನ್ನಾಗಿ ಅಡುಗೆ ಮಾಡುತ್ತೇನೆ, ಆಕೆ ಚೆನ್ನಾಗಿ ತಿನ್ನುತ್ತಾಳೆ. ನಾನು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನಾನೇನೂ ಕೋಟ್ಯಾಧಿಪತಿ ವ್ಯಕ್ತಿ ಅಲ್ಲ ಎಂದು ಹೇಳಿದ್ದಾರೆ.
ಇನ್ನು ಪತಿ ರೋಷನ್ ಬಗ್ಗೆ ಮಾತನಾಡಿದ ಅನುಶ್ರೀ, ನಾವಿಬ್ಬರೂ ಸ್ನೇಹಿತರಾಗಿದ್ದೆವು, ಒಟ್ಟಿಗೆ ಕಾಫಿ ಕುಡಿಯುತ್ತಿದ್ದೆವು. ಅವರಿಗೆ ನಾನು ಇಷ್ಟವಾದೆ, ನನಗೆ ಅವರು ಇಷ್ಟವಾದರು. ಪ್ರೀತಿಸಿ ಮದುವೆಯಾಗಿದ್ದೇವೆ. ರೋಷನ್ ಅವರು ಪುನೀತ್ ಸರ್ ಅವರ ದೊಡ್ಡ ಅಭಿಮಾನಿ. ಪುನೀತ್ ಸರ್ ಕಾರ್ಯಕ್ರಮದ ಮೂಲಕವೇ ನಾವು ಹತ್ತಿರವಾದೆವು. ನಾವು ಪ್ರೇಮಿಗಳು ಅಥವಾ ಗಂಡ-ಹೆಂಡತಿ ಎಂಬುದಕ್ಕಿಂತ ಹೆಚ್ಚಾಗಿ, ಜೀವನವನ್ನು ಸರಳವಾಗಿ ನೋಡುವ ವ್ಯಕ್ತಿಗಳು. ಸಣ್ಣ ಸಣ್ಣ ವಿಷಯಗಳನ್ನೂ ಸಂಭ್ರಮಿಸುತ್ತೇವೆ. ಅವರಲ್ಲಿರುವ ಸಹಾಯ ಮಾಡುವ ಗುಣ ನನಗೆ ತುಂಬಾ ಇಷ್ಟವಾಯಿತು ಎಂದು ಗಂಡನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ನಮ್ಮ ಮದುವೆಯು ಬಹಳ ಸರಳವಾಗಿ, ಸುಂದರವಾಗಿ ನಡೆದಿದೆ. ಕಡಿಮೆ ಜನರ ಸಮ್ಮುಖದಲ್ಲಿ ಮದುವೆಯಾಗಬೇಕು ಎಂಬುದು ನಮ್ಮಿಬ್ಬರ ಆಸೆಯಾಗಿತ್ತು, ಅದು ಈಡೇರಿದೆ. ನನ್ನ ಪತಿಯ ಪೂರ್ಣ ಹೆಸರು ರೋಷನ್ ರಾಮಮೂರ್ತಿ. ಅವರು ಕುಶಾಲನಗರದವರು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೆ. ತುಂಬಾ ಸರಳ ವ್ಯಕ್ತಿ ಎಂದು ಮಾಧ್ಯಮದವರಿಗೆ ಪರಿಚಯ ಮಾಡಿಸಿದ್ದಾರೆ.
ರಿಯಾಲಿಟಿ ಶೋಗಳ ನಿರೂಪಣೆ ಮಾಡಿಯೇ ಕನ್ನಡ ಜನರಿಗೆ ಪರಿಚಯವಾಗಿರುವ ಅನುಶ್ರೀ ಅವರ ಮದುವೆಯ ಬಗ್ಗೆ ಸಾಕಷ್ಟು ವರ್ಷಗಳಿಂದ ಮಾತುಗಳಿದ್ದವು. ಆದರೆ, ಈ ವರ್ಷ ಮದುವೆ ಆಗುವುದಾಗಿ ಹೇಳಿದ್ದ ಅನುಶ್ರೀ ಅದರಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನಕಪುರದ ಬಳಿಕ ಖಾಸಗಿ ರೆಸಾರ್ಟ್‌ನಲ್ಲಿ ಕೊಡಗು ಮೂಲದ ರೋಷನ್ ಅವರನ್ನು ವಿವಾಹವಾಗಿದ್ದಾರೆ.
ಸಮಾರಂಭಕ್ಕೆ ಬಂದ ಎಲ್ಲಾ ಗಣ್ಯರಿಗೂ ಅನುಶ್ರೀ ಧನ್ಯವಾದ ಸಲ್ಲಿಸಿದ್ದಾರೆ."ನಮಗೆ ಆಶೀರ್ವಾದ ಮಾಡಿದ ಶಿವಣ್ಣ, ಗೀತಕ್ಕ, ಜಗ್ಗೇಶ್ ಸರ್, ಹಂಸಲೇಖ ಸರ್, ಪ್ರೇಮಾ ಮೇಡಂ, ತಾರಮ್ಮ, ತರುಣ್ ಸುಧೀರ್, ರಾಜ್ ಬಿ ಶೆಟ್ಟಿ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು. ನಮ್ಮ ಮದುವೆಗೆ ಸಾಕಷ್ಟು ಹೃದಯವಂತರು ಬಂದಿದ್ದರು. ಇನ್ನು ಒಂದೆರಡು ದಿನಗಳಲ್ಲಿ ನಾವು ಎಂದಿನಂತೆ ನಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದೇವೆ" ಎಂದು ಹೇಳಿಕೊಂಡಿದ್ದಾರೆ.


