ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಗರ್ಭಿಣಿಯಾಗಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ೪೦ರ ಹರೆಯದಲ್ಲಿ ಒಂಟಿ ತಾಯಿಯಾಗಲು ನಿರ್ಧರಿಸಿದ ಅವರು, ಹಲವು ಸವಾಲುಗಳನ್ನು ಎದುರಿಸಿದ್ದಾರೆ.

ಬೆಂಗಳೂರು (ಜು.4): ಚಂದ್ರಮುಖಿ ಪ್ರಾಣಸಖಿಯ ಭಾವನಾ, ಇಂತಿ ನಿನ್ನ ಪ್ರೀತಿಯ 'ಪರಿಮಳ' ಬಾಳಿನಲ್ಲಿ ಕೊನೆಗೂ ಸಂತಸ ಮೂಡಿದೆ. ಇನ್ ವಿಟ್ರೊ ಫರ್ಟಿಲೈಜೇಷನ್‌ ಅಥವಾ ಐವಿಎಫ್‌ ಮೂಲಕ ಅವರು ಗರ್ಭಿಣಿಯಾಗಿದ್ದಾರೆ. ಪ್ರಸ್ತುತ ತಮ್ಮ 6ನೇ ತಿಂಗಳಿನಲ್ಲಿರುವ ಭಾವನಾ ರಾಮಣ್ಣ ಅಕ್ಟೋಬರ್‌ ಅಥವಾ ನವೆಂಬರ್‌ ಪ್ರಾರಂಭದ ವೇಳೆಗೆ ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಇದರ ಬಗ್ಗೆ ಸಂಪೂರ್ಣವಾಗಿ ಮಾತನಾಡಿದ್ದಾರೆ.

ಇದರ ಬೆನ್ನಲ್ಲಿಯೇ ಇನ್ಸ್‌ಟಾಗ್ರಾಮ್‌ನಲ್ಲಿ ತಾವು ಗರ್ಭಿಣಿಯಾಗಿರುವ ಎರಡು ಫೋಟೋಗಳನ್ನು ಹಂಚಿಕೊಂಡಿರುವ ಭಾವನಾ ರಾಮಣ್ಣ, ತಮ್ಮ ಖುಷಿಯನ್ನು ಬರೆದುಕೊಂಡಿದ್ದಾರೆ.

ಹೊಸ ಅಧ್ಯಾಯ, ಹೊಸ ಲಯ

ನಾನು ಹೀಗೆ ಹೇಳುತ್ತೇನೆಂದು ಎಂದಿಗೂ ಊಹೆಯನ್ನೇ ಮಾಡಿರಲಿಲ್ಲ. ಆದರೆ ಇಲ್ಲಿದ್ದೇನೆ, ಅವಳಿ ಮಕ್ಕಳ ಆರು ತಿಂಗಳ ಗರ್ಭಿಣಿಯಾಗಿ, ಮತ್ತು ಕೃತಜ್ಞತೆಯಿಂದ ತುಂಬಿ ಹೋಗಿದ್ದೇನೆ.

ನನ್ನ 20 ಹಾಗೂ 30ನೇ ವಯಸ್ಸಿನಲ್ಲಿ ತಾಯಿಯಾಗಬೇಕು ಅನ್ನೋದು ನನ್ನ ಮನಸ್ಸಿನಲ್ಲಿಯೇ ಇದ್ದಿರಲಿಲ್ಲ. ಆದರೆ, ನನಗೆ 40 ವರ್ಷ ತುಂಬಿದಾಗ ಈ ಆಸೆಯನ್ನು ನಿರಾಕರಿಸುವ ಸ್ಥಿತಿಯಲ್ಲಿ ನಾನಿದ್ದಿರಲಿಲ್ಲ. ಒಂಟಿ ಮಹಿಳೆಯಾಗಿ, ನನ್ನ ದಾರಿ ಕೂಡ ಇದರಲ್ಲಿ ಸುಲಭವಾಗಿರಲಿಲ್ಲ. ನಗರದ ಅನೇಕ ಐವಿಎಫ್‌ ಕ್ಲಿನಿಕ್‌ಗಳು ನಾನು ಗರ್ಭಿಣಿಯಾಗೋದು ಸಾಧ್ಯವೇ ಇಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದವು.

ಆದರೆ ನಂತರ ನಾನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ರೇನ್ಬೋ ಆಸ್ಪತ್ರೆಯಲ್ಲಿ ಡಾ. ಸುಷ್ಮಾರನ್ನು ಭೇಟಿಯಾದೆ, ಅವರು ನನ್ನನ್ನು ಪ್ರೀತಿಯಿಂದ ಮತ್ತು ಯಾವುದೇ ಜಡ್ಜ್‌ಮೆಂಟ್‌ ಇಲ್ಲದೆ ಸ್ವಾಗತಿಸಿದರು. ಅವರ ಬೆಂಬಲದಿಂದ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾದೆ.

ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಬೆಂಬಲಕ್ಕೆ ನಿಂತರು. ಇನ್ನೂ ಕೆಲವರು ನನ್ನ ಆಯ್ಕೆಯನ್ನು ಪ್ರಶ್ನೆ ಮಾಡಿದ್ದರು. ಆದರೆ ನನ್ನ ಹೃದಯದಲ್ಲಿ ನನಗೆ ತಿಳಿದಿತ್ತು: ನಾನು ಸಿದ್ಧನಿದ್ದೇನೆ.

ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಷರತ್ತು ರಹಿತ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ಅವರು ದಯೆ, ಆತ್ಮವಿಶ್ವಾಸ ಮತ್ತು ಅವರು ಎಲ್ಲಿಂದ ಬಂದಿದ್ದಾರೆ ಎಂಬುದರ ಬಗ್ಗೆ ಹೆಮ್ಮೆಪಡುವಂತೆ ಬೆಳೆಸಲ್ಪಡುತ್ತಾರೆ.

ಬಂಡಾಯದ ಮಾರ್ಗವಾಗಿ ನಾನು ಇದನ್ನು ಆರಿಸಿಕೊಳ್ಳಲಿಲ್ಲ. ನನ್ನ ಸತ್ಯವನ್ನು ಗೌರವಿಸಲು ನಾನು ಇದನ್ನು ಆರಿಸಿಕೊಂಡೆ. ನನ್ನ ಕಥೆ ಒಬ್ಬ ಮಹಿಳೆಯಾದರೂ ತನ್ನ ಮೇಲೆ ನಂಬಿಕೆ ಇಡುವಂತೆ ಪ್ರೇರೇಪಿಸಿದರೆ ಅಷ್ಟೇ ನನಗೆ ಸಾಕು. ಶೀಘ್ರದಲ್ಲೇ, ಎರಡು ಪುಟಾಣಿಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ. ಅದೇ ನನ್ನ ಪಾಲಿಗೆ ಎಲ್ಲವೂ ಆಗಿರಲಿದೆ. ಡಾ. ಸುಷ್ಮಾ ಮತ್ತು ರೇನ್ಬೋ ಆಸ್ಪತ್ರೆ, ನನ್ನ ಜೊತೆಯಲ್ಲಿ ಪ್ರಯಾಣ ಮಾಡಿದ್ದಕ್ಕಾಗಿ ಧನ್ಯವಾದಗಳು.

ಭಾವನಾ ರಾಮಣ್ಣ ಅವರ ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ. 'ಭಾವನಾ, ನನ್ನ ವಿಚ್ಛೇದನದ ನಂತರ ನಾನು ಈ ಮಾರ್ಗದಲ್ಲಿ ಹೋಗಬೇಕೆಂದು ತೀರ್ಮಾನ ಮಾಡಿದ್ದೆ. ಆದರೆ ನನ್ನ ಹೆತ್ತವರು ಒಡನಾಟ ಮುಖ್ಯ ಮತ್ತು ನಾನು ಸ್ವಲ್ಪ ಹೆಚ್ಚು ಯೋಚನೆ ಮಾಡಬೇಕು ಎಂದು ಹೇಳಿದರು. ಆಗ ನಾನು ನನ್ನ ಗಂಡನನ್ನು ಭೇಟಿಯಾದೆ ಮತ್ತು ಈಗ ಅವರೊಂದಿಗೆ ಅವಳಿ ಮಕ್ಕಳನ್ನು ಹೊಂದಿದ್ದೇನೆ. ನನಗೂ ಈಗ 40 ವರ್ಷ. ಮತ್ತು ನಾನು ಸರಿಯಾದ ವ್ಯಕ್ತಿಯನ್ನು ಭೇಟಿಯಾಗದಿದ್ದರೆ ನೀವು ಪ್ರಸ್ತುತ ಮಾಡುತ್ತಿರುವುದನ್ನು ನಾನು ಆಗ ಮಾಡುತ್ತಿದ್ದೆ. ನಿಮ್ಮ ಹೊಟ್ಟೆಯಲ್ಲಿರುವ ನಿಮ್ಮ ಅವಳಿ ಮಕ್ಕಳಿಗೆ ಅಭಿನಂದನೆಗಳು. ಶುಭಾಶಯಗಳು' ಎಂದು ಒಬ್ಬ ಮಹಿಳೆ ಬರೆದಿದ್ದಾರೆ.

'ತಂದೆಯ ಪ್ರೀತಿಯನ್ನೇ ನೀಡದೇ ಮಕ್ಕಳಿಗೇಕೆ ಶಿಕ್ಷೆ ನೀಡುತ್ತಿದ್ದೀರಿ' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಹೆಚ್ಚಿನವರು ಭಾವನಾಗೆ ಶುಭ ಕೋರಿದ್ದು, ಮಕ್ಕಳು ನಿಮ್ಮ ಜೀವನದಲ್ಲಿ ಬದಲಾವಣೆ ತರಲಿದ್ದಾರೆ ಎಂದು ಹಾರೈಸಿದ್ದಾರೆ.

View post on Instagram