ಮೇ 9ರಂದು ಕಿರುತೆರೆ ನಟ-ನಟಿಯರ ಮದುವೆ ಸಂಭ್ರಮ. ಬಿಗ್‌ಬಾಸ್ ಖ್ಯಾತಿಯ ರಂಜಿತ್, ಚೈತ್ರಾ ಕುಂದಾಪುರ ಮತ್ತು 'ಸೀತಾ ವಲ್ಲಭ' ಧಾರಾವಾಹಿ ನಟಿ ಸುಪ್ರೀತಾ ಸತ್ಯನಾರಾಯಣ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೈತ್ರಾ, ಶ್ರೀಕಾಂತ್ ಕಶ್ಯಪ್‌ರನ್ನು, ರಂಜಿತ್, ಮಾನಸಾ ಗೌಡರನ್ನು ಮತ್ತು ಸುಪ್ರೀತಾ, ಚಂದನ್ ಶೆಟ್ಟಿಯವರನ್ನು ವಿವಾಹವಾಗಿದ್ದಾರೆ.
ಕನ್ನಡ ಕಿರುತೆರೆಯಲ್ಲೀಗ ಮದುವೆ ಸಂಭ್ರಮ ಶುರುವಾಗಿದೆ. ಇಂದು ಮೇ 9ರಂದು ಮೂವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೌದು, ಬಿಗ್ ಬಾಸ್ ಖ್ಯಾತಿಯ ರಂಜಿತ್, ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಹಾಗೂ ʼಸೀತಾ ವಲ್ಲಭʼ ಧಾರಾವಾಹಿ ನಟಿ ಸುಪ್ರೀತಾ ಸತ್ಯನಾರಾಯಣ್ ಕೂಡ ಮದುವೆ ಆಗುತ್ತಿದ್ದಾರೆ.
ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರು ಶ್ರೀಕಾಂತ್ ಕಶ್ಯಪ್ ಅವರನ್ನು ಮದುವೆ ಆಗ್ತಿದ್ದಾರೆ. ಕಾಲೇಜು ದಿನಗಳಿಂದಲೂ ಇವರಿಬ್ಬರು ಪ್ರೀತಿ ಮಾಡುತ್ತಿದ್ದರು. ಹನ್ನೆರಡು ವರ್ಷಗಳ ಪ್ರೀತಿಗೆ ಈಗ ಅಧಿಕೃತ ಮುದ್ರೆ ಸಿಕ್ಕಿದೆ. ಕುಟುಂಬಸ್ಥರು ಒಪ್ಪಿ ಈ ಮದುವೆ ಮಾಡುತ್ತಿದ್ದಾರೆ. ಚೈತ್ರಾ ಕುಂದಾಪುರ ಅವರ ವಾಹಿನಿಯಲ್ಲಿ ಕೆಲಸ ಮಾಡಿ, ಆನಂತರ ಭಾಷಣಗಳನ್ನು ಮಾಡಿ, ಆರೋಪ ಹೊತ್ತಿಕೊಂಡು ಜೈಲಿಗೆ ಹೋದಾಗಲೂ ಕೂಡ ಶ್ರೀಕಾಂತ್ ಕಶ್ಯಪ್ ಅವರು ಜೊತೆಗಿದ್ದರು. ಬಿಗ್ ಬಾಸ್ ಮನೆಯಿಂದಾಚೆ ಬರುತ್ತಿದ್ದಂತೆ ಇವರಿಬ್ಬರು ಹಸೆಮಣೆ ಏರುತ್ತಿದ್ದಾರೆ. ಅಂದಹಾಗೆ ಶ್ರೀಕಾಂತ್ ಕಶ್ಯಪ್ ಅವರು ಅಪಾರ ದೈವಭಕ್ತರು. ಶ್ರೀಕಾಂತ್ ಕಶ್ಯಪ್ ಅವರು ಹವ್ಯಾಸಿ ಖಗೋಳಶಾಸ್ತ್ರಜ್ಞ ಎನ್ನಲಾಗಿದೆ. ಈ ಬಗ್ಗೆ ಚೈತ್ರಾ ಅವರೇ ಮಾಹಿತಿ ಕೊಡಬೇಕಿದೆ.
ಈಗಾಗಲೇ ಅದ್ದೂರಿಯಾಗಿ ಮೆಹೆಂದಿ, ಅರಿಷಿಣ ಶಾಸ್ತ್ರ ಕೂಡ ನಡೆದಿದೆ. ಇಂದು ಚೈತ್ರಾ ಮದುವೆ ಕೆಲಸಗಳು ಆರಂಭವಾಗಿವೆ. ಬಂಗಾರದ ಬಣ್ಣದ ಸೀರೆಯಲ್ಲಿ ಅವರು ಕಂಗೊಳಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ಇವರ ಮದುವೆಗೆ ಬರುವ ಸಾಧ್ಯತೆ ಇದೆ.
ಬಿಗ್ ಬಾಸ್ ರಂಜಿತ್
ಬಿಗ್ ಬಾಸ್ ಖ್ಯಾತಿಯ ರಂಜಿತ್ ಹಾಗೂ ಮಾನಸಾ ಗೌಡ ಅವರು ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ದೊಡ್ಮನೆಯಿಂದ ಬರುತ್ತಿದ್ದಂತೆ ರಂಜಿತ್ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಮಾನಸಾ ಗೌಡ ಅವರು ಫ್ಯಾಷನ್ ಡಿಸೈನರ್ ಆಗಿಯೂ, ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಇವರದ್ದೇ ಆದ ಬ್ಯೂಟಿಕ್ ಕೂಡ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಮಾನಸಾ ಗೌಡ ಅವರು ಉದ್ಯಮಿ ಹೌದು. ಮಾನಸಾ ಬಗ್ಗೆ ರಂಜಿತ್ ಅವರು ಎಲ್ಲಿಯೂ ಮಾತನಾಡಿರಲಿಲ್ಲ.
ʼಅವನು ಮತ್ತೆ ಶ್ರಾವಣಿʼ, ʼಅಮೃತವರ್ಷಿಣಿʼ, ʼಮೀರಾ ಮಾಧವʼ ಧಾರಾವಾಹಿಯಲ್ಲಿ ರಂಜಿತ್ ಅವರು ವಿಲನ್ ಆಗಿ ನಟಿಸಿದ್ದರು. ಆಮೇಲೆ ಪೌರಾಣಿಕ ʼಶನಿʼ ಧಾರಾವಾಹಿ, ʼಚಿಟ್ಟೆಹೆಜ್ಜೆʼ ಧಾರಾವಾಹಿಯಲ್ಲಿಯೂ ನಟಿಸಿದ್ದರು. ʼಶನಿʼ ಧಾರಾವಾಹಿಯಲ್ಲಿ ರಂಜಿತ್ ಅವರು ನಿರ್ವಹಿಸಿದ್ದ ಸೂರ್ಯದೇವ ಪಾತ್ರವಂತೂ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಪಾಸಿಟಿವ್, ನೆಗೆಟಿವ್ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಮಿಂಚಿದ್ದ ರಂಜಿತ್ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಭಾಗವಹಿಸಿ, ಜೈ ಜಗದೀಶ್ ಮೇಲೆ ಕೈಮಾಡಿ ಹೊರಗಡೆ ಬಂದಿದ್ದಾರೆ. ಈಗಾಗಲೇ ಅದ್ದೂರಿಯಾಗಿ ಸಂಗೀತ ಶಾಸ್ತ್ರವು ನಡೆದಿದೆ. ಇಂದು ರಂಜಿತ್ ಅವರು ಮದುವೆ ಆಗಲಿದ್ದಾರಾ ಅಥವಾ ಅರಿಷಿಣ ಶಾಸ್ತ್ರ ಇರಲಿದೆಯಾ ಎಂಬ ಅನುಮಾನ ಶುರು ಆಗಿದೆ.
ಸುಪ್ರೀತಾ ಸತ್ಯನಾರಾಯಣ್!
ಸೀತಾವಲ್ಲಭ ಧಾರಾವಾಹಿ ಖ್ಯಾತಿಯ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಚಂದನ್ ಶೆಟ್ಟಿ ಎನ್ನುವ ಇಂಜಿನಿಯರ್ ಕೈಹಿಡಿಯಲು ರೆಡಿಯಾಗಿದ್ದಾರೆ. ಈಗಾಗಲೇ ಅದ್ದೂರಿಯಾಗಿ ಅರಿಷಿಣ, ಮೆಹೆಂದಿ ಶಾಸ್ತ್ರಗಳು ನಡೆದಿವೆ. ಇನ್ನು ಈ ಆರತಕ್ಷತೆಯಲ್ಲಿ ಚಂದನ್ ಗೌಡ, ನೇಹಾ ಗೌಡ, ರಶ್ಮಿ ಪ್ರಭಾಕರ್, ಸುಜಾತಾ ಅಕ್ಷಯ್, ವೀಣಾ ಸುಂದರ್ ಅವರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಅಂದಹಾಗೆ ಇದು ಅರೇಂಜ್ ಮ್ಯಾರೇಜ್ ಎನ್ನಲಾಗಿದೆ. ಇಂದು ಇವರಿಬ್ಬರ ಮದುವೆ ಎನ್ನಲಾಗಿದೆ. ʼಸರಸುʼ ಧಾರಾವಾಹಿಯಲ್ಲಿ ನಟಿಸಿದ್ದ ಸುಪ್ರೀತಾ ಒಂದೆರಡು ಸಿನಿಮಾಗಳಲ್ಲಿಯೂ ನಟಿಸಿದ್ದರು. ಆದರೆ ಅವರಿಗೆ ಹೇಳಿಕೊಳ್ಳುವಂತ ಯಶಸ್ಸಾಗಿರಲೀ ಅಥವಾ ಗುರುತಿಸುವಿಕೆಯಾಗಲಿ ಸಿಕ್ಕಿರಲಿಲ್ಲ. ಈಗ ಮದುವೆ ಬಳಿಕ ಅವರು ಮತ್ತೆ ನಟನೆಗೆ ಕಂಬ್ಯಾಕ್ ಮಾಡ್ತಾರಾ ಅಂತ ಕಾದು ನೋಡಬೇಕಿದೆ.


