ಬೆಂಗಳೂರಿನ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಅವರ ವರ್ತನೆಗೆ ಕನ್ನಡಿಗರ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಹಾಡುವಂತೆ ಒತ್ತಾಯಿಸಿದ್ದು ಬೆದರಿಕೆಯಂತೆ ಭಾಸವಾಯಿತೆಂದು ಸೋನು ಸಮರ್ಥಿಸಿಕೊಂಡಿದ್ದಾರೆ. "ಕನ್ನಡ" ಎಂದು ಕೂಗಿದವರನ್ನು ಗೂಂಡಾಗಳೆಂದೂ ಅವಹೇಳನ ಮಾಡಿದ್ದಾರೆ. ಕ್ಷಮೆ ಯಾಚಿಸದೆ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ. ಈ ವರ್ತನೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.
ಬೆಂಗಳೂರು (ಮೇ.3): ಉದ್ಯಾನಗರಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋನಿ ನಿಗಮ್ (Sonu Nigam) ಮಾಡಿದ ವರ್ತನೆಗೆ ಕನ್ನಡಿಗರ (Kannadiga) ಆಕ್ರೋಶ ವ್ಯಕ್ತವಾಗಿದೆ. ಸಿಕ್ಕ ಸಿಕ್ಕಲ್ಲಿ ಸೋನು ನಿಗಮ್‌ಗೆ ಜಾಡಿಸುತ್ತಿರುವ ಕನ್ನಡಾಭಿಮಾನಿಗಳು, ಕರ್ನಾಟಕಕ್ಕೆ ಮತ್ತೆ ಬಂದಲ್ಲಿ ಮಸಿ ಬಳಿಯುವ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಮೇಲೆ ಭಾರೀ ಆಕ್ರೋಶ ವ್ಯಕ್ತವಾಗಿದ್ದರೂ, ತನ್ನ ವರ್ತನೆಯನ್ನು ಸಮರ್ಥನೆ ಮಾಡಿಕೊಳ್ಳುವ ಯತ್ನದಲ್ಲಿ ಸೋನು ನಿಗಮ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಕನ್ನಡ.. ಕನ್ನಡ ಎಂದು ಕೂಗೋದರಲ್ಲಿ ಎರಡು ರೀತಿಯಲ್ಲಿದೆ. ಕೆಲವರು ಸೌಮ್ಯವಾಗಿ ಕನ್ನಡ.. ಕನ್ನಡ ಎಂದು ಹೇಳುತ್ತಾರೆ. ಆಗ ಅದು ನನಗೆ ಅದು ಅರ್ಥವಾಗುತ್ತದೆ. ಇನ್ನೂ ಕೆಲವರು ಕನ್ನಡ.. ಕನ್ನಡ ಎಂದು ಜೋರು ದನಿಯಲ್ಲಿ ಹೇಳುತ್ತಾರೆ. ಅವರು ಗೂಂಡಾಗಳು ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಮಾಡಿಕೊಂಡಿದ್ದಾರೆ.
ಈ ನಡುವೆ ಇಡೀ ವಿಡಿಯೋದಲ್ಲಿ ಎಲ್ಲಿಯೂ ಸೋನು ನಿಗಮ್ ಕನ್ನಡಿಗರ ಆಗ್ರಹಕ್ಕೆ ಮಣಿದಿಲ್ಲ. ಪಹಲ್ಗಾಮ್ ಪದ ಬಳಸಿದ ವಿಚಾರಕ್ಕೆ ಸೋನು ನಿಗಮ್ ಪ್ರತಿಕ್ರಿಯೆ ನೀಡಿದ್ದು, ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ವಿರೋಧ ವ್ಯಕ್ತವಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ ಸೋನು ನಿಗಮ್, ಕನ್ನಡ.. ಕನ್ನಡ ಅಂತಾ ಕೂಗಿ ಹೇಳೋಕು ಕಿರುಚೋದಕ್ಕೂ ವ್ಯತ್ಯಾಸವಿದೆ. ಕನ್ನಡ ಹಾಡು ಅಂತ ಕೇಳೋದಕ್ಕೂ, ಬೆದರಿಕೆ ಒಡ್ಡೋದಕ್ಕೂ ವ್ಯತ್ಯಾಸವಿದೆ. ಅವರು ನನಗೆ ಕೇಳಿದ್ದು ಬೆದರಿಕೆ ಹಾಕಿದ ರೀತಿ ಇತ್ತು. ಎಲ್ಲ ಕಡೆಯೂ ಇಂತಹ ನಾಲ್ಕೈದು ಕೆಟ್ಟ ಜನ ಎಲ್ಲ ಇದ್ದೇ ಇರ್ತಾರೆ. ಅವರು ನನಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಹಾಡುವಂತೆ ಡಿಮ್ಯಾಂಡ್ ಮಾಡಿದ್ದರು ಎಂದು ಹೇಳಿದ್ದಾರೆ.
ಪಹಲ್ಗಾಮ್ ನಲ್ಲಿ ಉಗ್ರರು ಭಾಷೆ ಕೇಳಲಿಲ್ಲ, ಧರ್ಮ ಕೇಳಿ ಹತ್ಯೆ ಮಾಡಿದ್ದರು. ಹಾಗಾಗಿ ನಾನು ಪಹಲ್ಗಾಮ್ ಘಟನೆಯನ್ನು ಉದಾಹರಣೆ ಕೊಟ್ಟಿದ್ದು ಎಂದು ಸೋನು ನಿಗಮ್ ಹೇಳಿದ್ದಾರೆ. ಆ ಮೂಲಕ ಘಟನೆಯ ಬಗ್ಗೆ ಕ್ಷಮೆ ಕೇಳದೆ.. ಕ್ಲಾರಿಟಿ ಕೊಟ್ಟು ವಿವಾದಕ್ಕೆ ಫುಲ್ ಸ್ಟಾಪ್ ಇಡೋದಕ್ಕೆ ಸೋನು ನಿಗಮ್ ಪ್ರಯತ್ನ ಮಾಡಿದ್ದಾರೆ.
ಇನ್ನು ಸೋನು ನಿಗಮ್ ಅವರ ಸ್ಪಷ್ಟನೆ ವಿಡಿಯೋಗೂ ಆಕ್ರೋಶ ವ್ಯಕ್ತವಾಗಿದ್ದು ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿರುವ ಪತ್ರಕರ್ತೆ ಶೋಭಾ ಮಳವಳ್ಳಿ, 'ಮತ್ತದೇ ಮಾತು. ಸಮರ್ಥನೆ ಹೆಸರಲ್ಲಿ ಮತ್ತೆ ಗಾಂಚಲಿ. ಕನ್ನಡ ಕನ್ನಡ ಎಂದು ಕಿರುಚಿದವರು ಗೂಂಡಾಗಳಂತೆ. ಹೇಗೆ ಕಿರುಚಿದರೂ, ಕೂಗಿದರೂ, ಗೂಂಡಾ ರೀತಿ ವರ್ತಸಿದರು ಅದು ನಿನ್ನ ಹಾಡು ಕೇಳೋದಿಕ್ಕಲ್ವಾ ? ಹಿಂದಿ ಹಾಡುವಾಗ ಕನ್ನಡ ಹಾಡು ಅಂದಿದ್ದಲ್ವಾ ? ನಿನ್ನ ಕಾಲರ್ ಹಿಡಿದು, ಜಗ್ಗಿ ಬಗ್ಗಿಸಿ ಹಾಡು ಅಂದ್ರಾ? ಇವನದ್ಯಾಕೋ ಅತಿಯಾಯ್ತು' ಎಂದು ಬರೆದುಕೊಂಡಿದ್ದಾರೆ.
'ಕನ್ನಡಿಗರ ಪ್ರೀತಿಯ ರುಚಿಯನ್ನಷ್ಟೇ ಬಲ್ಲ ಆತ ನಾವೆಲ್ಲ ಅಮಾಯಕರು ಎಂದುಕೊಂಡಿರಬೇಕು. ಸದ್ಯದಲ್ಲೇ ಮೆಟ್ಟಿನೇಟು ಬೀಳ್ತವೆ. ಕ್ಷಮೆ ಕೇಳಿ ಸರಿಹೋಗ್ತಾನೆ' ಎಂದು ಸೋನು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. 'ಈ ವಿಕೃತ ರೋಪಿಯನ್ನು ಮೊದಲು ಕನ್ನಡಕ್ಕೆ ಕರೆ ತಂದವರಿಗೆ ನಾಚಿಕೆಯಾಗಬೇಕು..' ಎಂದು ಮತ್ತೊಬ್ಬರು ಬರೆದಿದ್ದಾರೆ.
'ಕರ್ನಾಟಕದಲ್ಲಿ ಗಾಯಕರಿಲ್ಲವೆ? ಅವನ ಹೆಸರು ನೋಡಿ ಅವಕಾಶ ಕೊಟ್ಟಿದ್ದಕ್ಕೆ ಈ ಗಾಂಚಾಲಿ. ಆದಷ್ಟು ಕನ್ನಡ ಗಾಯಕ ಗಾಯಕಿಯರಿಗೆ ಅವಕಾಶ ಕೊಟ್ಟು ಇಂತಹವರನ್ನು ನಿರ್ಲಕ್ಷಿಸಿ' ಎಂದು ಬರೆದಿದ್ದಾರೆ. 'ಈತನ ದುರಹಂಕಾರ ಅತಿಯಾಯಿತು. Not demanding, threatening ಅನ್ನುತ್ತಾನೆ, ಪ್ರೇಕ್ಷಕ ದೂರದಲ್ಲಿ ಕುಳಿತವನು ಈತನನ್ನು threaten ಮಾಡಲು ಹೇಗೆ ಸಾಧ್ಯ?' ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.


