ಯುವ ರಾಜ್‌ಕುಮಾರ್ ಜೊತೆಗಿನ ವಿಚ್ಛೇದನದ ನಡುವೆ, ಶ್ರೀದೇವಿ ಭೈರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಯುವ ಹಾಗೂ ಮತ್ತೊಬ್ಬ ನಟಿಯ ಸಂಬಂಧದ ಬಗ್ಗೆ ಕೇಳಿದಾಗ, ಡಾ. ರಾಜ್‌ಕುಮಾರ್ ಅವರ ಹಾಡು ಹಾಕಿ ಗಮನಸೆಳೆದಿದ್ದಾರೆ.

ಬೆಂಗಳೂರು (ಡಿ.18): ಡಾ.ರಾಜ್‌ಕುಮಾರ್‌ ಅವರ ಮೊಮ್ಮಗ ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಭೈರಪ್ಪ ಬೇರೆ ಬೇರೆ ಆಗುವ ತೀರ್ಮಾನ ಮಾಡಿದ್ದಾರೆ ಅನ್ನೋದು ಗೊತ್ತಿರುವ ವಿಚಾರ. ಈಗಾಗಲೇ ಇವರಿಬ್ಬರೂ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಅದರ ವಿಚಾರಣೆಗಳು ನಡೆಯುತ್ತಿವೆ. ಇದರ ನಡುವೆ ಇಬ್ಬರೂ ಕೂಡ ತಮ್ಮ ನಿರ್ಧಾರ ಸರಿ ಎನ್ನುವ ನಿಟ್ಟಿನಲ್ಲಿ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಲೇ ಇದ್ದಾರೆ. ಇನ್ನೊಂದೆಡೆ ಶ್ರಿದೇವಿ ಭೈರಪ್ಪ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹಾರಿದ್ದರೆ, ಇನ್ನೊಂದೆ ಯುವರಾಜ್‌ ಕುಮಾರ್‌ ಹಾಗೂ ಕನ್ನಡದ ಪ್ರಮುಖ ನಟಿಯ ಜೊತೆ ರಿಲೇಷನ್‌ಷಿಪ್‌ ಇರೋದು ಗೊತ್ತಾಗಿತ್ತು. ಇದೇ ಕಾರಣಕ್ಕೆ ಇವರ ಮದುವೆ ವಿಚ್ಛೇದನದವರೆಗೆ ಹೋಗಿದೆ ಎಂದು ಗೊತ್ತಾಗಿತ್ತು.

ಈಗ ಸ್ವತಃ ಶ್ರೀದೇವಿ ಭೈರಪ್ಪ ಅವರಿಗೆ ಈ ವಿಚಾರದ ಬಗ್ಗೆ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ಆದರೆ, ಜಾಣ ಉತ್ತರ ನೀಡಿರುವ ಶ್ರೀದೇವಿ ಭೈರಪ್ಪ, ಡಾ.ರಾಜ್‌ಕುಮಾರ್‌ ಅವರ ಪ್ರೇಮದ ಕಾಣಿಕೆ ಚಿತ್ರದ 'ಬಾನಿಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆ ಇದೆ..' ಅನ್ನೋ ಹಾಡನ್ನು ಪೋಸ್ಟ್‌ ಮಾಡುವ ಮೂಲಕ ಉತ್ತರಿಸಿದ್ದಾರೆ.

ಶ್ರೀದೇವಿ ಅವರು ಇನ್​​ಸ್ಟಾಗ್ರಾಮ್​​ನಲ್ಲಿ ‘ಆಸ್ಕ್​ ಮಿ ಎನಿಥಿಂಗ್’ ಅನ್ನೋ ಸಣ್ಣ ಸೆಷನ್‌ ನಡೆಸಿದ್ದರು. ಈ ವೇಳೆ ಒಬ್ಬರು, 'ಯುವರಾಜ್‌ಕುಮಾರ್‌ ಬಗ್ಗೆ ಏನು ಹೇಳ್ತೀರಾ?' ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಶ್ರೀದೇವಿ, 'ಬಾನಿಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆ ಇದೆ. ಏಕೆ ಕನಸು ಕಾಣುವೆ, ನಿಧಾನಿಸು ನಿಧಾನಿಸು..' ಎನ್ನುವ ಹಾಡನ್ನು ಪೋಸ್ಟ್‌ ಮಾಡಿ, 'ಅಷ್ಟೇ..' ಎಂದು ಬರೆದಿದ್ದಾರೆ.

Scroll to load tweet…

ಅದಾದ ಬಳಿಕ ಮತ್ತೊಬ್ಬರು, ಯುವರಾಜ್‌ ಕುಮಾರ್‌ ಹಾಗೂ *** ಗೌಡ ಬಗ್ಗೆ ಏನು ಹೇಳ್ತೀರಾ ಎಂದು ಕೇಳಿದ್ದಕ್ಕೆ, 'ಮೋಸ ಮಾಡೋದು ಆಯ್ಕೆ, ಅದು ತಪ್ಪು ಆಗೋದಿಲ್ಲ' ಎನ್ನುವ ಪೋಸ್ಟ್‌ ಮಾಡಿದ್ದಾರೆ. ಅದರ ಪಕ್ಕದಲ್ಲಿ ಅವರು ಹಾಕಿರುವ ಇಮೇಜ್‌ ಕೂಡ ಗಮಸೆಳೆದಿದ್ದು, ಎಲೆಕ್ಟ್ರಿಕ್‌ ಕಂಬದ ಹಿಂದೆ ಅಡಗಿಕೊಂಡಿರುವ ಆನೆಯ ಚಿತ್ರ ಹಾಕಿದ್ದಾರೆ. ಅಂದರೆ, ಅವರ ಎಲ್ಲಾ ಕೆಲಸ ತಮಗೆ ಗೊತ್ತಿದೆ ಅನ್ನೋ ರೀತಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಪ್ರಶ್ನೆ ಕೇಳಿರುವ ಅಭಿಮಾನಿ ನಟಿಯ ಹೆಸರನ್ನು ಹಾಕಿದ್ದರೂ, ಶ್ರೀದೇವಿ ಬೈರಪ್ಪ ಮಾತ್ರ ನಟಿಯ ಕೊನೇ ಹೆಸರಿನ Gowda ಅನ್ನೋ ಪದದಲ್ಲಿ ಹೆಸರು ಹಾಗೂ G ಅನ್ನೋ ಅಕ್ಷರವನ್ನು ಮಾತ್ರ ಬ್ಲರ್‌ ಮಾಡಿದ್ದಾರೆ. 'owda' ಅನ್ನೋ ಪದ ಕಾಣುವ ಹಾಗೆ ಬಿಟ್ಟಿದ್ದಾರೆ. ಶ್ರೀದೇವಿ ಈ ಪೋಸ್ಟ್‌ನಲ್ಲಿ ನಟಿಯ ಹೆಸರನ್ನು ಹೇಗೆ ಹೈಡ್‌ ಮಾಡಿದ್ದಾರೋ ಅದೇ ರೀತಿಯಲ್ಲಿ ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಹೈಡ್‌ ಮಾಡಬೇಕು ಎಂದು ಮತ್ತೊಬ್ಬರು ಈ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ.

2019ರಲ್ಲಿ ವಿವಾಹವಾಗಿದ್ದ ಯುವ ಹಾಗೂ ಶ್ರೀದೇವಿ

ಸುಮಾರು ಏಳು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ಯುವ ಮತ್ತು ಶ್ರೀದೇವಿ, 2019ರಲ್ಲಿ ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಆದರೆ, ನಾಲ್ಕೇ ವರ್ಷಗಳಲ್ಲಿ ಇವರ ಸಂಸಾರದಲ್ಲಿ ಬಿರುಕು ಮೂಡಿತು. ಸದ್ಯ ಇಬ್ಬರೂ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಪ್ರಕರಣ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಪ್ರಕರಣ ಕೋರ್ಟ್‌ನಲ್ಲಿರುವ ನಡುವೆಯೇ ಶ್ರಿದೇವಿಗೆ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದಾರೆ.

Scroll to load tweet…