ಹೆಂಡತಿಯ ಹೆಣ ಹಾಕಿ 6 ತಿಂಗಳು ನಾಟಕ ಮಾಡಿದ್ದ! ಡಾ. ಕೃತಿಕಾ ರೆಡ್ಡಿ ಕೊಲೆಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್!

ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದ್ದ ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿ ಅವರದ್ದು ಸಹಜ ಸಾವಲ್ಲ, ಬದಲಿಗೆ ಕೊಲೆ ಎಂದು ಮರಣೋತ್ತರ ಪರೀಕ್ಷೆ ವರದಿಯಿಂದ ದೃಢಪಟ್ಟಿದೆ. ಪತ್ನಿಯ ಸಣ್ಣ ಕಾಯಿಲೆಗಳನ್ನು ಸಹಿಸದ ಆಕೆಯ ಸರ್ಜನ್ ಪತಿಯೇ, ಮಾಡಿದ ಕುಕೃತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಅ.17): ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದ ಡರ್ಮಟಾಲಜಿಸ್ಟ್ (ಚರ್ಮರೋಗ ತಜ್ಞೆ) ಕೃತಿಕಾ ರೆಡ್ಡಿ ಮಹಿಳೆಯ ಸಾವಿನ 6 ತಿಂಗಳ ನಂತರ ಬಂದ ಮರಣೋತ್ತರ ಪರೀಕ್ಷೆ (Post-Mortem) ವರದಿಯಿಂದ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ. ಹೆಂಡತಿಯ ಸಾಮಾನ್ಯ ಕಾಯಿಲೆಗಳನ್ನು ನೆಪ ಮಾಡಿ, ಆಕೆಯ ವೈದ್ಯ ಪತಿಯೇ ಅರಿವಳಿಕೆ (Anaesthesia) ಔಷಧಿಯನ್ನು ಮಿತಿಮೀರಿ (Overdose) ನೀಡಿ ಕೊಲೆ ಮಾಡಿರುವುದು ದೃಢಪಟ್ಟಿದೆ.

ಸರ್ಜನ್ ಆಗಿರುವ ಪತಿ ಮತ್ತು ಡರ್ಮಟಾಲಜಿಸ್ಟ್ ಆಗಿದ್ದ ಪತ್ನಿ ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ವೈದ್ಯರಾಗಿದ್ದರಿಂದ ಇವರ ಜೋಡಿಯನ್ನು 'ಹೇಳಿ ಮಾಡಿಸಿದ ಜೋಡಿ' ಎಂದೇ ಗುರುತಿಸಲಾಗಿತ್ತು. ಆದರೆ, ಮದುವೆಯಾಗಿ ಕೇವಲ ಒಂದು ವರ್ಷದಲ್ಲೇ ಪತ್ನಿ ಕೃತಿಕಾ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಅಕ್ಕನ ಅನುಮಾನದಿಂದ ಬಯಲಾಯ್ತು ಪಾಪಿ ಕೃತ್ಯ:

ಕೃತಿಕಾಳ ಸಾವಿನ ಬಗ್ಗೆ ಅನುಮಾನಗೊಂಡ ಆಕೆಯ ಅಕ್ಕ, ತಕ್ಷಣವೇ ಪೊಲೀಸರಿಗೆ ದೂರು ನೀಡಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದರು. ಆರು ತಿಂಗಳುಗಳ ನಂತರ ಬಂದ ಪಿ.ಎಂ. ವರದಿಯಲ್ಲಿ ಕೃತಿಕಾಳದ್ದು ಕೊಲೆ (Murder) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಡಾಕ್ಟರ್ ಗಂಡನ ಕರಾಳ ಮುಖ ಅನಾವರಣಗೊಂಡಿದೆ. ಡಾಕ್ಟರ್ ಪತಿ ತನ್ನನ್ನು ತಾನೇ ಸುಂದರನೆಂದು ಭಾವಿಸಿಕೊಂಡಿದ್ದ ಮತ್ತು ಈ ಭ್ರಮೆಯಲ್ಲಿ ಅಪ್ಸರೆಯಂತಿದ್ದ ಕೃತಿಕಾಳನ್ನು ಮದುವೆಯಾಗಿದ್ದ. ಮದುವೆಯಾದ 4 ತಿಂಗಳಲ್ಲಿ ಕೃತಿಕಾಳಿಗೆ ಲೋ ಶುಗರ್ (Low Sugar) ಮತ್ತು **ಗ್ಯಾಸ್ಟ್ರೈಟೀಸ್ (Gastritis) ಸಮಸ್ಯೆ ಕಾಣಿಸಿಕೊಂಡಿತ್ತು.

ಸಣ್ಣ ಕಾಯಿಲೆಗೆ ಹಿಂಸೆ, ಕೊನೆಗೆ ಕೊಲೆ

ಇಂದಿನ ದಿನಗಳಲ್ಲಿ ಸಾಮಾನ್ಯ ಎನಿಸಿರುವ ಈ ಸಣ್ಣ ಕಾಯಿಲೆಗಳನ್ನು ಡಾಕ್ಟರ್ ಪತಿ ಗಂಭೀರವಾಗಿ ಪರಿಗಣಿಸಿದ್ದ. ಮದುವೆಗೂ ಮುನ್ನ ತನಗೆ ಕಾಯಿಲೆ ಇದೆ ಎಂದು ಕೃತಿಕಾ ಹೇಳಲಿಲ್ಲ, ಆಕೆ ತನಗೆ ಮೋಸ ಮಾಡಿದ್ದಾರೆ ಎಂದು ಪತ್ನಿಯ ಮೇಲೆ ಹಿಂಸೆ ನೀಡಲು ಶುರುಮಾಡಿದ್ದ. ಮದುವೆಯಾದ 11 ತಿಂಗಳಿಗೇ ಆಕೆಯನ್ನು ತವರು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದ. ಆದರೆ, ಹೊರಗೆ ಏನೂ ಆಗಿಲ್ಲ ಎಂಬಂತೆ ನಟಿಸುತ್ತಿದ್ದ ಈ ಪಾಪಿ ಪತಿ, ತಾನೇ ಪತ್ನಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದ. ಇದೇ ನೆಪದಲ್ಲಿ ಒಂದು ದಿನ ಉದ್ದೇಶಪೂರ್ವಕವಾಗಿ ಓವರ್ ಡೋಸ್ ಅನೆಸ್ಥೇಷಿಯಾ ನೀಡಿ ಕೃತಿಕಾಳ ಕಥೆಯನ್ನು ಮುಗಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೂರಾರು ಕನಸುಗಳನ್ನು ಕಂಡಿದ್ದ ತಂದೆಯ ಕಣ್ಣ ಮುಂದೆ ತನ್ನ ಮಗಳ ಸಾವು ಅಸಹಾಯಕತೆ ಮೂಡಿಸಿದೆ. ಒಂದು ಸಣ್ಣ ಕಾಯಿಲೆಯನ್ನು ನೆಪ ಮಾಡಿಕೊಂಡು ಒಬ್ಬ ಡಾಕ್ಟರ್‌ ಈ ಮಟ್ಟಕ್ಕೆ ಇಳಿದಿರುವುದು ಅಕ್ಷಮ್ಯ. ನ್ಯಾಯಾಲಯದಿಂದ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ವೈದ್ಯ ಪತಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Related Video