
9 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
9 ವರ್ಷಗಳ ಹಿಂದೆ ಕುಡಿದು ಸತ್ತನೆಂದು ನಂಬಲಾಗಿದ್ದ ಭೀರಪ್ಪನ ಸಾವು ಸಹಜವಾಗಿರಲಿಲ್ಲ, ಅದೊಂದು ಪೂರ್ವಯೋಜಿತ ಕೊಲೆ. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು, ಪತ್ನಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದು, ಮೊಬೈಲ್ ಆಡಿಯೋ ದಾಖಲೆಯಿಂದ ಈ ರಹಸ್ಯ ಬಯಲಾಗಿದೆ.
ಕಲಬುರಗಿ (ಡಿ.02): ಸಾವಿನ ನಂತರ 'ಕುಡಿದು ಸತ್ತ' ಎಂದು ಇಡೀ ಊರನ್ನು ನಂಬಿಸಲಾಗಿದ್ದ ಒಂದು ಕೊಲೆಯ ರಹಸ್ಯವು ಬರೋಬ್ಬರಿ 9 ವರ್ಷಗಳ ಬಳಿಕ ಬಯಲಾಗಿದ್ದು, ಮರ್ಡರ್ ಮಿಸ್ಟರಿ ಹಿಂದೆ ಪತ್ನಿಯ ಅನೈತಿಕ ಸಂಬಂಧದ ಕರಾಳ ಕಥೆ ಅಡಗಿದೆ. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತ್ನಿಯೇ ತನ್ನ ಗೆಳೆಯನ ಜೊತೆ ಸೇರಿ ಪತಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿ, ಅದನ್ನು ಸಹಜ ಸಾವು ಎಂದು ಬಿಂಬಿಸಿದ್ದ ನಾಟಕಕ್ಕೆ ಈಗ ತೆರೆ ಬಿದ್ದಿದೆ.
9 ವರ್ಷದ ಹಿಂದಿನ ಕರಾಳ ಕಥೆ
ಕಥಾನಾಯಕ ಭೀರಪ್ಪ, 6 ಎಕರೆ ಜಮೀನು, ಪತ್ನಿ ಶಾಂತಾಬಾಯಿ ಮತ್ತು ಮೂವರು ಮಕ್ಕಳೊಂದಿಗೆ ಸುಂದರವಾದ ಸಂಸಾರ ನಡೆಸುತ್ತಿದ್ದರು. ಊರಿನಲ್ಲಿ ಒಳ್ಳೆಯ ಹೆಸರು, ದೇವರ ನುಡಿ ಹೇಳುವ ಗುಣ ಹೊಂದಿದ್ದ ಭೀರಪ್ಪನಿಗೆ ಇದ್ದ ಒಂದೇ ಒಂದು ದುಶ್ಚಟ ಎಂದರೆ ಅದು ಕುಡಿತ. ಸದಾ ನಶೆಯಲ್ಲೇ ಇರುತ್ತಿದ್ದ ಭೀರಪ್ಪ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಸಾವನ್ನಪ್ಪಿದ. ಆತ ಕುಡಿತದ ಚಟದಿಂದ ಸತ್ತಿರಬೇಕು ಎಂದು ಇಡೀ ಕುಟುಂಬ ಮತ್ತು ಊರಿನವರು ನಂಬಿ ಅಂತ್ಯಸಂಸ್ಕಾರ ನೆರವೇರಿಸಿದರು.
ಆದರೆ ಈ ಘಟನೆ ನಡೆದು 9 ವರ್ಷಗಳಾದ ಮೇಲೆ, ಹಠಾತ್ ಸಾವಿನ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಯಿತು. ಸೂಕ್ತ ತನಿಖೆ ನಡೆಸಿದಾಗ ಇದು ಸಹಜ ಸಾವಲ್ಲ, ಬದಲಿಗೆ ಪೂರ್ವಯೋಜಿತ ಕೊಲೆ ಎಂಬ ಸತ್ಯ ಬಯಲಾಗಿದೆ.
ರಹಸ್ಯ ಬಯಲಾಗಿದ್ದೇಗೆ?
ಕೊಲೆಯ ರಹಸ್ಯ ಬಯಲಾಗಲು ಪ್ರಮುಖ ಕಾರಣವಾದದ್ದು, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮಹೇಶ್‌ನ ಮೊಬೈಲ್‌ನಲ್ಲಿ ಸಿಕ್ಕ ಆಡಿಯೋ ದಾಖಲೆಗಳು. ಈ ಆಡಿಯೋ ತುಣುಕುಗಳು 9 ವರ್ಷದ ಹಿಂದಿನ ಕೊಲೆಯ ರಹಸ್ಯವನ್ನು ಅನಾವರಣಗೊಳಿಸಿದ್ದು, ಇದರಲ್ಲಿ ಹೆಂಡತಿಯೇ ತನ್ನ ಗಂಡನನ್ನು ಕೊಲ್ಲಲು ಮಹೇಶ್‌ಗೆ ಸುಪಾರಿ ನೀಡಿರುವುದು ದೃಢಪಟ್ಟಿದೆ.
ಅಕ್ರಮ ಸಂಬಂಧವೇ ಕೊಲೆಗೆ ಕಾರಣ
ತನಿಖೆಯಲ್ಲಿ ಬಯಲಾದ ಮಾಹಿತಿಯಂತೆ, ಮೃತ ಭೀರಪ್ಪನ ಪತ್ನಿ ಶಾಂತಾಬಾಯಿ ಅದೇ ಗ್ರಾಮದ ಸಿದ್ದು ಎಂಬುವವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ಸಂಬಂಧದ ಕುರಿತು ಪತಿ ಭೀರಪ್ಪನಿಗೆ ಗೊತ್ತಾಗಿ ಆಕೆಗೆ ಖಡಕ್ ವಾರ್ನ್ ಮಾಡಿದ್ದನು. ಇದರಿಂದ ಕೆರಳಿದ ಶಾಂತಾಬಾಯಿ ಮತ್ತು ಆಕೆಯ ಪ್ರೇಮಿ ಸಿದ್ದು, ಭೀರಪ್ಪನನ್ನು ಶಾಶ್ವತವಾಗಿ ಮುಗಿಸಲು ನಿರ್ಧರಿಸಿದರು. ಮೊದಲಿಗೆ, ಅವರು ಭೀರಪ್ಪನ ಊಟದಲ್ಲಿ ಸ್ಲೋ ಪಾಯ್ಸನ್ (ನಿಧಾನವಾಗಿ ವಿಷ) ಹಾಕಲು ಯತ್ನಿಸಿದರು, ಆದರೆ ಅದು ಪ್ರಯೋಜನವಾಗಲಿಲ್ಲ. ಕೊನೆಗೆ, ಶಾಂತಾಬಾಯಿ ಮತ್ತು ಸಿದ್ದು ಸೇರಿಕೊಂಡು ಮಹೇಶ್ ಮತ್ತು ಅವನ ತಂಡಕ್ಕೆ ಭೀರಪ್ಪನ ಕೊಲೆಗೆ ಸುಪಾರಿ ನೀಡಿದರು.
ಜಮೀನಿನಲ್ಲಿ ನಡೆದಿದ್ದೇನು?
ಸುಪಾರಿ ಪಡೆದ ಮಹೇಶ್ ಮತ್ತು ತಂಡವು ಭೀರಪ್ಪನನ್ನು ಪರಿಚಯಿಸಿಕೊಂಡು, ಒಂದು ದಿನ ಎಣ್ಣೆ ಪಾರ್ಟಿ ಮಾಡುವ ನೆಪದಲ್ಲಿ ಜಮೀನಿಗೆ ಕರೆದೊಯ್ದಿದ್ದಾರೆ. ಅಲ್ಲಿ ಭೀರಪ್ಪನನ್ನು ಕೊಂದು, ಸ್ಥಳದಿಂದ ಪರಾರಿಯಾಗಿದ್ದಾರೆ. ಕೊಲೆಯಾದ ನಂತರ ಪತ್ನಿ ಶಾಂತಾಬಾಯಿ, ಭೀರಪ್ಪ ಕುಡಿದು ಸಾವನ್ನಪ್ಪಿದ್ದಾನೆ ಎಂದು ಇಡೀ ಊರಿನವರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದಳು.
ಆದರೆ, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತಿನಂತೆ, 9 ವರ್ಷಗಳ ಬಳಿಕ ಮೊಬೈಲ್ ಆಡಿಯೋ ದಾಖಲೆಗಳಿಂದ ಈ ಕಿರಾತಕರ ನಾಟಕಕ್ಕೆ ತೆರೆ ಬಿದ್ದಿದೆ. ಸದ್ಯ ಪೊಲೀಸರು ಪ್ರಕರಣದಲ್ಲಿ ಶಾಂತಾಬಾಯಿ, ಸಿದ್ದು ಮತ್ತು ಸುಪಾರಿ ಪಡೆದ ಮಹೇಶ್ ಮತ್ತು ಇತರ ಮೂವರು ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅಪರಾಧ ಮಾಡಿದವರು ಎಷ್ಟೇ ಚಾಣಾಕ್ಷರಾದರೂ ಒಂದು ದಿನ ಶಿಕ್ಷೆ ಅನುಭವಿಸಬೇಕು ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ.