
ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್ಗೆ ನೆಪವಾದ ಲವ್ ಸ್ಟೋರಿ!
ಪ್ರೇಮಿಗಳಿಗೆ ಸಹಾಯ ಮಾಡಲು ಹೋದ ಇಬ್ಬರು ಸ್ನೇಹಿತರನ್ನು ಹತ್ಯೆ ಮಾಡಲಾಗಿದೆ. ಮನೆಯವರ ವಿರೋಧದ ನಡುವೆ ಮದುವೆಯಾದ ಜೋಡಿಗೆ ರಕ್ಷಣೆ ನೀಡಲು ಮುಂದಾದ ಕಿರಣ್ ಮತ್ತು ಮಂಜುನಾಥ್, ಯುವತಿಯ ಅಣ್ಣನ ಗ್ಯಾಂಗ್ನಿಂದ ಕೊಲೆಯಾಗಿದ್ದಾರೆ.
ಬೆಂಗಳೂರು (ಡಿ.17): 'ನಾವಿದ್ದೇವೆ ಬಾ ಗೆಳೆಯ' ಎಂದು ಪ್ರೇಮಿಗಳ ರಕ್ಷಣೆಗೆ ನಿಂತ ಇಬ್ಬರು ಸ್ನೇಹಿತರು, ಇಂದು ಕ್ರೂರ ಹಂತಕರ ಮಚ್ಚಿಗೆ ಬಲಿಯಾಗಿ ಹೆಣವಾಗಿ ಬಿದ್ದಿದ್ದಾರೆ. ಯಾರದ್ದೋ ಪ್ರೇಮ ಪುರಾಣಕ್ಕೆ ಇನ್ನಾರೋ ಬಲಿಯಾದ ಈ ಭೀಕರ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಪ್ರೇಮಿಗಳನ್ನು ರಕ್ಷಿಸಲು ಹೋದ ಕಿರಣ್ ಮತ್ತು ಮಂಜುನಾಥ್ ಎಂಬುವವರೇ ಕೊಲೆಯಾದ ದುರ್ದೈವಿಗಳು.
ಘಟನೆಯ ಹಿನ್ನೆಲೆ
ಒಂದೇ ಏರಿಯಾದ ಯುವಕ ಮತ್ತು ಯುವತಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಮನೆಯವರ ವಿರೋಧದ ನಡುವೆಯೂ ಈ ಜೋಡಿ ಮದುವೆಯಾಗಿ ಊರು ಬಿಟ್ಟು ಪರಾರಿಯಾಗಿತ್ತು. ಎರಡು ದಿನಗಳ ಕಾಲ ದೂರದ ಊರಿನಲ್ಲಿದ್ದ ಪ್ರೇಮಿಗಳಿಗೆ ಧೈರ್ಯ ತುಂಬಿದ ಹುಡುಗನ ಸ್ನೇಹಿತರು, 'ಭಯಪಡಬೇಡಿ, ನಾವು ನಿಮ್ಮ ಜೊತೆಗಿದ್ದೇವೆ. ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಪಡೆಯೋಣ' ಎಂದು ಕರೆಸಿಕೊಂಡಿದ್ದರು.
ಠಾಣೆಯ ಮುಂದೆ ಶುರುವಾದ ಕಿಡಿ
ಪೊಲೀಸ್ ಠಾಣೆಯಲ್ಲಿ ಪ್ರೇಮಿಗಳ ರಾಜೀ ಸಂಧಾನ ನಡೆಯುತ್ತಿದ್ದಾಗ, ಹುಡುಗನ ಸ್ನೇಹಿತರಾದ ಸುರೇಶ ಮತ್ತು ಕಿರಣ್ ಹೊರಗೆ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹುಡುಗಿಯ ಅಣ್ಣ ಮತ್ತು ಆತನ ತಂಡ, ಈ ಪ್ರೇಮಿಗಳು ಓಡಿಹೋಗಲು ಸುರೇಶನೇ ಮುಖ್ಯ ಕಾರಣ ಎಂದು ಭಾವಿಸಿ ಆವಾಜ್ ಹಾಕಿದ್ದರು. ಅಲ್ಲಿ ಶುರುವಾದ ಜಗಳ ಸಂಜೆ ವೇಳೆಗೆ ರಕ್ತಪಾತಕ್ಕೆ ತಿರುಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಸಿನಿಮಾ ಶೈಲಿಯ ಅಟ್ಯಾಕ್
ರಾತ್ರಿ ವೇಳೆ ಸುರೇಶ ಮತ್ತು ಕಿರಣ್ ತಮ್ಮ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದಾಗ, ಮಾರಕಾಸ್ತ್ರಗಳೊಂದಿಗೆ ನುಗ್ಗಿದ ಹುಡುಗಿಯ ಅಣ್ಣನ ಗ್ಯಾಂಗ್ ಏಕಾಏಕಿ ದಾಳಿ ನಡೆಸಿದೆ. ಟಾರ್ಗೆಟ್ ಆಗಿದ್ದ ಸುರೇಶ ಹೇಗೋ ತಪ್ಪಿಸಿಕೊಂಡು ಓಡಿ ಬಚಾವ್ ಆಗಿದ್ದಾನೆ. ಆದರೆ, ಹಂತಕರ ಕೈಗೆ ಸಿಕ್ಕ ಕಿರಣ್ ಮೇಲೆ ಮಚ್ಚಿನಿಂದ ಮನಬಂದಂತೆ ಇರಿಯಲಾಗಿದೆ. ಇದೇ ವೇಳೆ ಗಲಾಟೆ ಬಿಡಿಸಲು ಬಂದ ಸಂಬಂಧಿಕ ಮಂಜುನಾಥ್ (ಮಂಜಣ್ಣ) ಮೇಲೂ ಹಂತಕರು ಅಟ್ಯಾಕ್ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಕಿರಣ್ ಮತ್ತು ಮಂಜುನಾಥ್ ಇಬ್ಬರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಪರಾರಿಯಾದ ಹಂತಕರು
ಇಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಂದ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರೇಮಿಗಳಿಗೆ ಸಹಾಯ ಮಾಡಲು ಹೋದ ಅಮಾಯಕರು ಇಂದು ಮಸಣ ಸೇರುವಂತಾಗಿದೆ. 'ಗೆಳೆಯನ ಸಂಸಾರ ಉಳಿಸಲು ಹೋದವರು ತಮ್ಮ ಸಂಸಾರವನ್ನೇ ಬೀದಿಗೆ ತಂದಿದ್ದಾರೆ' ಎಂದು ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.