ಹೈದರಾಬಾದ್ನ ಎಕ್ಸ್ಪ್ರೆಸ್ ವೇಯಲ್ಲಿ ಕುಡಿದ ವ್ಯಕ್ತಿಯೊಬ್ಬ ಒಂಟೆ ಸವಾರಿ ಮಾಡುತ್ತಾ ತನ್ನ ಮತ್ತು ಒಂಟೆಯ ಜೀವಕ್ಕೆ ಅಪಾಯ ತಂದೊಡ್ಡಿದ್ದ. ದಾರಿಹೋಕರು ಮಧ್ಯಪ್ರವೇಶಿಸಿ ಒಂಟೆಯನ್ನು ತಡೆದು ಅನಾಹುತ ತಪ್ಪಿಸಿದರು.
ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಹೈದರಾಬಾದ್ನ ಎಕ್ಸ್ಪ್ರೆಸ್ ವೇಯಲ್ಲಿ ಒಂಟೆ ಸವಾರಿ ಮಾಡುತ್ತಾ ತನ್ನ ಹಾಗೂ ಒಂಟೆಯ ಜೀವಕ್ಕೂ ಅಪಾಯ ತಂದೊಡ್ಡಿದಂತಹ ಘಟನೆ ನಡೆದಿದೆ. ಅದೃಷ್ಟವಶಾತ್ ಈತನ ಅವತಾರವನ್ನು ಗಮನಿಸಿದ ಕೆಲ ಜನರು ಈತನನ್ನು ಹಿಂಬಾಲಿಸಿ ಮಧ್ಯದಲ್ಲೇ ತಡೆಯುವ ಮೂಲಕ ಆತನಿಗೂ ಆತ ಸವಾರಿ ಮಾಡುತ್ತಿದ್ದ ಒಂಟೆಯ ಜೀವಕ್ಕೂ ಹಾನಿಯಾಗದಂತೆ ತಡೆದಿದ್ದಾರೆ. ಮುತ್ತಿನ ನಗರಿ ಹೈದರಾಬಾದ್ನಲ್ಲಿ ಈ ಘಟನೆ ನಡೆದಿದೆ.
ವೈರಲ್ ಆದ ವೀಡಿಯೋದಲ್ಲಿ ಆತ ಕಂಠಪೂರ್ತಿ ಕುಡಿದು ಒಂಟೆಯ ಮೇಲೆರಿದ್ದು, ಒಂಟೆಯನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗದೇ ಒಂಟೆಯ ಮೇಲೆಯೇ ತೂರಾಡುತ್ತ ಬಿದ್ದುಕೊಂಡೆ ಸಾಗುತ್ತಿರುವುದನ್ನು ಕಾಣಬಹುದಾಗಿದೆ. ಒಂದು ವೇಳೆ ದಾರಿಯಲ್ಲಿ ಸಾಗುತ್ತಿದ್ದವರು ತಡೆಯದೇ ಹೋಗಿದ್ದರೆ ಈತ ಒಂಟೆ ಮೇಲಿಂದ ಕೆಳಗೆ ಬಿದ್ದು, ಇತರ ವಾಹನಗಳ ಅಡಿಗೆ ಸಿಲುಕುತ್ತಿದ್ದಿದ್ದಂತು ಪಕ್ಕಾ ಆದರೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಯುವಕರು ಮಾನವೀಯತೆ ಮೆರೆದು ಕುಡುಕ ಒಂಟೆ ಸವಾರ ಹಾಗೂ ಆತನ ಒಂಟೆಯನ್ನು ಅನಾಹುತದಿಂದ ರಕ್ಷಿಸಿದ್ದಾರೆ.
ಈ ವೀಡಿಯೋವನ್ನು ikshorts ಎಂಬ ಇನ್ಸ್ಟಾ ಪೇಜ್ನಿಂದ ಪೋಸ್ಟ್ ಮಾಡಲಾಗಿದ್ದು, ಆರಂಭದಲ್ಲಿ ವಾಹನ ಸವಾರರಿಗೂ ಈ ಒಂಟೆಯನ್ನು ಹಿಡಿಯಲು ಸಾಧ್ಯವಾಗಿಲ್ಲ, ಸುಮಾರು ದೂರ ಹಿಂಬಾಲಿಸಿದ ನಂತರ ಅವರು ಕಡೆಗೂ ಒಂಟೆಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
'ಪಿ.ವಿ. ನರಸಿಂಹ ರಾವ್ ಫ್ಲೈಓವರ್ ಮೇಲೆ ಒಂಟೆಯೊಂದು ಹತ್ತಿತ್ತು. ಸಾರ್ವಜನಿಕರು ಸುಮ್ಮನೆ ನಿಂತು ನೋಡುತ್ತಿದ್ದಾಗ, ಅಲ್ಲಾಹನ ದಯೆಯಿಂದ ನಾನು ಮಧ್ಯಪ್ರವೇಶಿಸಿ ಅದನ್ನು ತಡೆಯುವಲ್ಲಿ ಯಶಸ್ವಿಯಾದೆ. ಜನರು ಅದನ್ನು ಕೇವಲ ಒಂದು ಪ್ರದರ್ಶನದಂತೆ ನೋಡುತ್ತಿದ್ದರು ಎಂಬುದು ದುಃಖಕರ ಆದರೆ ಅದು ಮುಖ್ಯವಾದಾಗ ಕಾರ್ಯನಿರ್ವಹಿಸಲು ಅಲ್ಲಾಹನು ನನ್ನನ್ನು ಆರಿಸಿಕೊಂಡಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ' ಎಂದು ಬರೆದು ಯುವಕನೋರ್ವ ಈ ವೀಡಿಯೋ ಪೋಸ್ಟ್ ಮಾಡಿದ್ದಾನೆ.
ಒಂಟೆ ಫ್ಲೈವರ್ ಏರಿದ ಮೇಲೆ ಕುಡಿದಿದ್ದ ಒಂಟೆ ಸವಾರ ಪೂರ್ತಿ ಅಮಲಿನಿಂದ ಒಂಟೆ ಮೇಲೆ ಬಿದ್ದುಕೊಂಡಿದ್ದರೆ ಅತ್ತ ವಾಹನಗಳ ಹಾರ್ನ್ ಸದ್ದಿಗೆ ಒಂಟೆ ವೇಗ ಹೆಚ್ಚಿಸಿಕೊಂಡಿದೆ. ಇದರಿಂದ ಒಂಟೆ ಮೇಲಿದ್ದ ಸವಾರ ಇನ್ನೇನು ಕೆಳಗೆ ಬೀಳುವ ಸಾಧ್ಯತೆ ಹೆಚ್ಚಾಗಿತ್ತು. ಇತ್ತ ಆ ವ್ಯಕ್ತಿಯನ್ನು ನಿಲ್ಲಿಸಲು ಪ್ರಯತ್ನಿಸುತ್ತಾ ಯುವಕ ಕೂಗಿದ್ದಾನೆ. ಜೊತೆಗೆ ಹತ್ತಿರದ ವಾಹನಗಳನ್ನು ಸ್ವಲ್ಪ ದೂರದಲ್ಲಿ ಸಾಗುವಂತೆ ಎಚ್ಚರಿಸಿದ್ದಾನೆ. ಒಂದು ಹಂತದಲ್ಲಿ ಷಾ ಸವಾರನ ಮೇಲೆ ಬಾಟಲಿಯಿಂದ ನೀರನ್ನು ದೂರದಿಂದಲೇ ಚಿಮುಕಿಸಿದ್ದಾನೆ. ಕಡೆಗೂ ಈ ಯುವಕರು ಹೋಗಿ ಒಂಟೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಆ ಒಂಟೆಯನ್ನು ರಸ್ತೆ ನಡುವೆ ಇದ್ದ ಕರೆಂಟ್ ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಾಹನವಿಲ್ಲದೇ ಈತ ಡ್ರಿಂಕ್ & ಡ್ರೈವ್ ಮಾಡಿ ಸಿಕ್ಕಿಬಿದ್ದಿದ್ದಾನೆ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ.


