ಅಮೆರಿಕದ FBI ನಿರ್ದೇಶಕ ಭಾರತೀಯ ಮೂಲದ ಕಾಶ್ ಪಟೇಲ್‌ ವಜಾಗೆ ಟ್ರಂಪ್ ಸಿದ್ಧತೆ, ಕುಡಿತ, ಕರ್ತವ್ಯದಲ್ಲಿ ಲೋಪ ಮತ್ತು ಅಧಿಕಾರ ದುರ್ಬಳಕೆಯಂತಹ ಆರೋಪಗಳಿಂದ ಡೋನಾಲ್ಡ್ ಟ್ರಂಪ್ ಗರಂ ಆಗಿದ್ದಾರೆ.

ವಾಷಿಂಗ್ಟನ್ (ಏ.26) : ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐನ ನಿರ್ದೇಶಕ ಕಾಶ್ ಪಟೇಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಕಾಶ್ ಪಟೇಲ್ ಅವರ ಅತಿಯಾದ ಕುಡಿತದ ಚಟ ಮತ್ತು ಅಧಿಕೃತ ಕರ್ತವ್ಯಗಳಲ್ಲಿನ ಲೋಪಗಳ ಬಗ್ಗೆ ಹೊರಬರುತ್ತಿರುವ ವರದಿಗಳಿಂದ ಟ್ರಂಪ್ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಳು ವರದಿ ಮಾಡಿದೆ. ಶ್ವೇತಭವನದ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಈ ವರದಿ ಪ್ರಕಟವಾಗಿದ್ದು, ಕಾಶ್ ಪಟೇಲ್ ಅವರ ನಿರ್ಗಮನ ಶೀಘ್ರದಲ್ಲೇ ಆಗಲಿದೆ ಎಂದು ಹೇಳಲಾಗುತ್ತಿದೆ.

ಕುಡಿದ ಮತ್ತಿನಲ್ಲೇ ಸಭೆಗೆ ಹಾಜರ್

ಕಾಶ್ ಪಟೇಲ್ ಕುಡಿದು ಮತ್ತಿನಲ್ಲಿ ಇರುವುದರಿಂದ ಹಲವು ಬಾರಿ ಅಧಿಕೃತ ಸಭೆಗಳಿಗೆ ಗೈರಾಗುತ್ತಾರೆ. ಭದ್ರತಾ ಸಿಬ್ಬಂದಿಗೆ ಅವರನ್ನು ಎಬ್ಬಿಸುವುದೇ ಕಷ್ಟದ ಕೆಲಸ ಎಂದು 'ದಿ ಅಟ್ಲಾಂಟಿಕ್' ಮ್ಯಾಗಝೀನ್ ವರದಿ ಮಾಡಿತ್ತು. ಆದರೆ, ಈ ಆರೋಪಗಳನ್ನು ಕಾಶ್ ಪಟೇಲ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲ, ಆ ಮ್ಯಾಗಝೀನ್ ವಿರುದ್ಧ 250 ಮಿಲಿಯನ್ ಡಾಲರ್ (ಸುಮಾರು 2000 ಕೋಟಿ ರೂಪಾಯಿ) ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದೆಲ್ಲಾ ಕಟ್ಟುಕಥೆ, ತನ್ನ ವರ್ಚಸ್ಸಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಷಡ್ಯಂತ್ರ ಎಂದು ಅವರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಇಟಲಿಯಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್ ವೇಳೆ ಕಾಶ್ ಪಟೇಲ್ ಮದ್ಯಪಾನ ಮಾಡಿ ಸಂಭ್ರಮಿಸುತ್ತಿದ್ದ ವಿಡಿಯೋ ಕೂಡಾ ಟ್ರಂಪ್ ಕೋಪಕ್ಕೆ ಕಾರಣವಾಗಿದೆ.

ಕಾಶ್ ಪಟೇಲ್ ವಿರುದ್ದ ಟೀಕೆ

ಆಡಳಿತಾತ್ಮಕ ವಿಚಾರಗಳಲ್ಲೂ ಕಾಶ್ ಪಟೇಲ್ ದೊಡ್ಡ ಮಟ್ಟದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಚಾರ್ಲಿ ಕಿರ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪು ಮಾಹಿತಿ ನೀಡಿದ್ದರು. ಬ್ರೌನ್ ವಿಶ್ವವಿದ್ಯಾಲಯದ ಗುಂಡಿನ ದಾಳಿ ಪ್ರಕರಣದ ಆರೋಪಿ ಬಗ್ಗೆಯೂ ಅವರು ತಪ್ಪು ಹೇಳಿಕೆ ನೀಡಿ ತಮ್ಮ ಇಮೇಜ್‌ಗೆ ಧಕ್ಕೆ ತಂದುಕೊಂಡಿದ್ದರು. ಇದಲ್ಲದೆ, ತಮ್ಮ ಗರ್ಲ್‌ಫ್ರೆಂಡ್ ಹಾಗೂ ಗಾಯಕಿ ಅಲೆಕ್ಸಿಸ್ ವಿಲ್ಕಿನ್ಸ್‌ಗೆ ಭದ್ರತೆ ಒದಗಿಸಲು ಎಫ್‌ಬಿಐನ ವಿಶೇಷ ಸ್ವಾಟ್ ತಂಡವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಪಟೇಲ್ ಮೇಲಿದೆ.

ಅಧಿಕಾರಿಗಳ ವಜಾ

ಕಾಶ್ ಪಟೇಲ್ ಅವರು ಎಫ್‌ಬಿಐನಲ್ಲಿ ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳನ್ನು ವಜಾಗೊಳಿಸಿದ್ದರು. ಟ್ರಂಪ್ ವಿರುದ್ಧದ ತನಿಖೆಗಳಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನೂ ಅವರು ತೆಗೆದುಹಾಕಿದ್ದರು. ಶ್ವೇತಭವನದ ವಕ್ತಾರೆ ಕರೋಲಿನ್ ಲೀವಿಟ್ ಅವರು ಕಾಶ್ ಪಟೇಲ್‌ಗೆ ಬಹಿರಂಗ ಬೆಂಬಲ ನೀಡುತ್ತಿದ್ದರೂ, ಆಡಳಿತದೊಳಗೆ ಅಸಮಾಧಾನ ಹೆಚ್ಚಾಗಿದೆ. ಕ್ರಿಸ್ಟಿ ನೋಮ್, ಪಾಮ್ ಬಾಂಡಿ ಅವರಂತಹ ಉನ್ನತ ಅಧಿಕಾರಿಗಳು ಈಗಾಗಲೇ ಹುದ್ದೆಯಿಂದ ಹೊರನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ, ಟ್ರಂಪ್ ಆಡಳಿತದ ಮುಂದಿನ 'ವಿಕೆಟ್' ಕಾಶ್ ಪಟೇಲ್ ಅವರದ್ದೇ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.