ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. 7.6ರ ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ ಜಪಾನ್ ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ಸುನಾಮಿ ವಾರ್ನಿಂಗ್ ಕೊಡಲಾಗಿದೆ. ಜಪಾನ್ ಸುನಾಮಿ ಭೀತಿ ಭಾರತದ ಮೇಲೆ ಪರಿಣಾಮ ಬೀರುತ್ತಾ?
ಟೊಕಿಯೋ (ಡಿ.08) ಜಪಾನ್ ನಾರ್ತ್‌ಈಸ್ಟರ್ನ್ ತೀರ ಪ್ರದೇಶದಲ್ಲಿ 7.6ರ ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಪರಿಣಾಮ ಜಪಾನ್ ಕರಾವಳಿ ಭಾಗದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜಪಾನ್ ಹವಾಮಾನ ವರದಿ ಪ್ರಕಾರ ಕರಾವಳಿ ಪ್ರದೇಶದಲ್ಲಿನ ಭೂಕಂಪನದಿಂದ ಕರಾವಳಿ ಸಮುದ್ರ ಭಾಗದಲ್ಲಿ 40 ಸೆಂಟಿಮೀಟರ್ ಎತ್ತರದ ಸುನಾಮಿ ಅಲೆಗಳು ಸೃಷ್ಟಿಯಾಗಿದೆ. ಹೀಗಾಗಿ ಭೀಕರ ಸುನಾಮಿ ಅಲೆಗಳಲ್ಲ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಜಪಾನ್ ಹವಾಮಾನ ಸಂಸ್ಥೆ (JMA) ಎಚ್ಚರಿಕೆ ನೀಡಿದೆ.
10 ಅಡಿ ಎತ್ತರದ ಸುನಾಮಿ ಸಾಧ್ಯತೆ
ಭೂಕಂಪನದ ವೇಳೆ ಸೃಷ್ಟಿಯಾದ ಸುನಾಮಿ ಅಲೆಗಳು ಉರಕವಾ, ಅವುಮೊರಿ, ಒಗವರಾ ಸೇರಿದಂತೆ ಕೆಲ ತೀರ ಪ್ರದೇಶಗಳಿಗೆ ಅಪ್ಪಳಿಸಿದೆ. ಆದರೆ ಭೀಕರ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಯನ್ನು ಹವಾಮಾನ ಸಂಸ್ಥೆ ಎಚ್ಚರಿಸಿದೆ. ಭೂಕಂಪನದ ತೀವ್ರತೆಯಿಂದ ಸುಮಾರು 10 ಅಡಿ ಎತ್ತರದ ಸುನಾಮ ಅಲೆಗಳು ಅಪ್ಪಳಿಸುವ ಸಾಧ್ಯತೆಯನ್ನು ವರದಿ ಮಾಡಲಾಗಿತ್ತು.
ಭೂಕಂಪನದ ಕೇಂದ್ರ ಬಿಂದು ಉತ್ತರ ಜಪಾನ್‌ನ ಮಿಸಾವದಿಂದ ಪೂರ್ವ ಈಶಾನ್ಯದ ಕಡೆಯಾಗಿತ್ತು. ಮಿಸಾವ ನಗರದಿಂದ 73 ಕಿಲೋಮೀಟರ್ ದೂರದಲ್ಲಿ ಈ ಕಂಪನ ಕೇಂದ್ರಬಿಂದುವಾಗಿದ್ದರೆ, ಆಳ 53.1 ಕಿಲೋಮೀಟರ್ ಎಂದು JMA ಹೇಳಿದೆ. ಭೂಕಂಪನದಲ್ಲಿ ಜಪಾನ್‌ನ ಉತ್ತರ ಹಾಗೂ ಪೂರ್ವ ಪ್ರದೇಶಗಳು ಅಲುಗಾಡಿದೆ. ಜಪಾನ್‌ನ ನಾರ್ತ್ ಈಸ್ಟರ್ನ್ ಭಾಗದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಜಪಾನ್ ಸುನಾಮಿಯಿಂದ ಭಾರತಕ್ಕಿದೆಯ ಆತಂಕ
ಹವಾಮಾನ ವರದಿಗಳ ಪ್ರಕಾರ, ಸದ್ಯ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿ ಎಚ್ಚರಿಕೆಯಿಂದ ಭಾರತದ ಕರಾವಳಿ ತೀರ ಪ್ರದೇಶಗಳ ಮೇಲೆ ಪರಿಣಾಮ ಬೀರುವುದಿಲ್ಲ. ದಕ್ಷಿಣ ಭಾರತದಲ್ಲಿ ಸದ್ಯ ದಿತ್ವ ಚಂಡಮಾರುತ ಸಮಸ್ಯೆಗಳು ಉದ್ಭವಿಸಿದೆ.
ಭೂಕಂಪನದ ವೇಳೆ ಬಯಲು ಪ್ರದೇಶಗಳಲ್ಲಿ ಆಶ್ರಯ ಪಡೆಯುವುದು ಉತ್ತಮ. ಮರದ ಕೆಳಗೆ, ಕಟ್ಟಡ, ಕೌಂಪೌಂಡ್, ಮನೆಗಳ ಬಳಿ ಆಶ್ರಯ ಪಡೆಯುವುದು ಉತ್ತಮವಲ್ಲ. ಮನೆ, ಕಟ್ಟಡಗಳ ಒಳಗಿದ್ದವರು, ಡೆಸ್ಕ್, ಟೇಬಲ್ ಕೆಳಗೆ ಆಶ್ರಯ ಪಡೆಯುವುದು ಉತ್ತಮ.ಕಂಪನ ನಿಲ್ಲುವರಗೆ ಆಶ್ರಯ ಪಡೆದು ತಕ್ಷಣವೇ ಹೊರಬರುವ ಪ್ರಯತ್ನ ಮಾಡಬೇಕು. ಲಿಫ್ಟ್ ಬಳಕೆ ಬದಲು ಮೆಟ್ಟಿಲು ಮೂಲಕ ಕೆಳಕ್ಕೆ ಇಳಿದು ಬಯಲು ಪ್ರದೇಶಗಳಲ್ಲಿ ಆಶ್ರಯ ಪಡೆಯುವುದು ಉತ್ತಮ. ಲಘು ಭೂಕಂಪನದ ವೇಳೆ ರಕ್ಷಣೆಗಾಗಿ ಓಡುವ ಬದಲು ಮೇಜು ಸೇರಿದಂತೆ ಇತರ ಪ್ರಾಣ ಉಳಿಸಬಲ್ಲ ವಸ್ತುಗಳ ಕೆಳಗೆ ಆಶ್ರಯ ಉತ್ತಮವಾಗಿದೆ.


