ದಕ್ಷಿಣ ಕೊರಿಯಾದಲ್ಲಿ, 20 ವರ್ಷ ಹಳೆಯ ಎಲ್‌ಜಿ ವಿಸೆನ್ ಏರ್ ಕಂಡೀಷನರ್‌ಗಳ ಲೋಗೋ 24 ಕ್ಯಾರಟ್ ಚಿನ್ನದಿಂದ ಮಾಡಲ್ಪಟ್ಟಿದೆ ಎಂಬ ವೈರಲ್ ವಿಡಿಯೋ ಸಂಚಲನ ಸೃಷ್ಟಿಸಿದೆ. ಈ ವಿಡಿಯೋದಿಂದಾಗಿ, ಜನರು ತಮ್ಮ ಹಳೆಯ ಎಸಿಗಳಲ್ಲಿರುವ ಈ ಚಿನ್ನದ ಲೋಗೋವನ್ನು ಹುಡುಕಲು ಆರಂಭಿಸಿದ್ದಾರೆ.
ನವದೆಹಲಿ (ಡಿ.22): ದಕ್ಷಿಣ ಕೊರಿಯಾದ ಜನರಿಗೆ ಹಳೆಯ ಎಲ್‌ಜಿ ಏರ್ ಕಂಡೀಷನರ್ ಈಗ ಭಾಗ್ಯದ ಬಾಗಿಲು ತೆಗೆದಿದೆ. 20 ವರ್ಷದ ಹಿಂದೆ ರಿಲೀಸ್‌ಆಗಿ ಎಸಿಯ ಲೋಗೋ ಶುದ್ದ 24 ಕ್ಯಾರಟ್ ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ವಿಡಿಯೋ ವೈರಲ್ ಆದ ಬಳಿಕ ಅಲ್ಲಿನ ಜನರು ತಮ್ಮ ಮನೆಯಲ್ಲಿನ ಎಸಿಯ ಲೋಗೋ ಹುಡುಕಾಟ ಆರಂಭಿಸಿದ್ದಾರೆ. ಇಡೀ ದೇಶದ ಜನರಲ್ಲಿ ಅತ್ಯಂತ ಬಯಕೆಯ ವಸ್ತುವಾಗಿ ಮಾರ್ಪಟ್ಟಿದೆ. ವಿಡಿಯೋ ವೈರಲ್ ಬೆನ್ನಲ್ಲಿಯೇ ದಶಕಗಳ ಕಾಲ ಮನೆಯಲ್ಲಿ, ಅಜ್ಜಿ ಅಥವಾ ಅಜ್ಜನ ಮನೆಯ ಸ್ಟೋರ್ ರೂಮ್‌ನಲ್ಲಿರುವ ಎಸಿ ಯುನಿಟ್‌ನ ಹುಡುಕಾಟವನ್ನು ಅಲ್ಲಿನ ಜನರು ಆರಂಭಿಸಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ಬಿಡುಗಡೆಯಾದ ಕೆಲವು LG Whisen ಎಸಿ ಯುನಿಟ್‌ಗಳ ಮೇಲೆ ಮಾತ್ರ ಈ ಆಸಕ್ತಿ ಹುಟ್ಟಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಯೂಟ್ಯೂಬ್ ವಿಡಿಯೋ ಬೆನ್ನಲ್ಲಿಯೇ ವೈರಲ್ ಆದ ಎಲ್‌ಜಿ ಯುನಿಟ್
ಸಿಯೋಲ್ ಮೂಲದ ಆಭರಣ ಅಂಗಡಿ ಮಾಲೀಕ ಮತ್ತು ಆನ್‌ಲೈನ್‌ನಲ್ಲಿ ರಿಂಗ್ರಿಂಗ್ ಉನ್ನಿ ಎಂದು ಕರೆಯಲ್ಪಡುವ ಯೂಟ್ಯೂಬರ್ "ಏರ್ ಕಂಡಿಷನರ್‌ಗಳಲ್ಲಿ ಚಿನ್ನವಿದೆಯೇ?" ಎಂಬ ಶೀರ್ಷಿಕೆಯ ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರ ಈ ಹುಡುಕಾಟ ಆರಂಭವಾಗಿದೆ. ಕ್ಲಿಪ್‌ನಲ್ಲಿ ಗ್ರಾಹಕರು ಹಳೆಯ LG Whisenನಿಂದ ತೆಗೆದ ಸುಕ್ಕುಗಟ್ಟಿದ ಲೋಹದ ಅಕ್ಷರಗಳನ್ನು ಅವರ ಬಳಿಗೆ ತಂದಿದ್ದಾರೆ.
43 ಸಾವಿರದ ಚಿನ್ನ
'ಏನಿದು?' ಎಂದು ಶಾಪ್‌ನ ಮಾಲೀಕ ವಿಡಿಯೋದಲ್ಲಿ ಪ್ರಶ್ನೆ ಮಾಡಿದ್ದಾರೆ. 'ಇದನ್ನು LG Whisen ಏರ್ ಕಂಡೀಷನರ್‌ನಿಂದ ತೆಗೆಯಲಾಗಿದೆ. ಇದು ಎಸಿಯ ಮುಂಭಾಗದಲ್ಲಿ ಇರುವ ಲೋಗೋದಿಂದ ತೆಗೆಯಲಾಗಿದೆ' ಎಂದು ಗ್ರಾಹಕ ಉತ್ತರಿಸಿದ್ದಾರೆ. 'ಇದನ್ನು ಡೆಲಿವರಿ ನೀಡಿದ್ದ ವ್ಯಕ್ತಿ ಈ ಲೋಗೋದಲ್ಲಿರುವ ಅಕ್ಷರ 'Whisen' ಅನ್ನು ಶುದ್ದಚಿನ್ನದಿಂದ ಮುದ್ರಿಸಲಾಗಿದೆ ಎಂದಿದ್ದ' ಎಂದು ಹೇಳಿದ್ದಾರೆ. ಇದನ್ನು ನೀವು ತೆಗೆದುಕೊಟ್ಟಲ್ಲಿ ನಾವು 10 ಸಾವಿರ ವೊನ್ ನೀಡುತ್ತೇವೆ ಎಂದಿದ್ದಾರೆ.
ಈ ಹಂತದಲ್ಲಿ ರಿಂಗ್ರಿಂಗ್ ಉನ್ನಿ ಮುಂದುವರಿದು, Whisen ಎನ್ನುವ ಅಕ್ಷರದಲ್ಲಿದ್ದ ಚಿನ್ನವನ್ನು ತೆಗೆಯುತ್ತಾರೆ. ಬಳಿಕ ತಮ್ಮ ತೀರ್ಮಾನವನ್ನು ಕ್ಯಾಮೆರಾ ಎದುರಲ್ಲಿಯೇ ನೀಡಿದ್ದಾರೆ. 'ಇದು 18 ಕ್ಯಾರಟ್ ಚಿನ್ನವಲ್ಲ, ಇದು ಶುದ್ಧ ಚಿನ್ನ. ಇದು ಬಹುಶಃ ಒಂದು ಡಾನ್‌ಗಿಂತ ಕಡಿಮೆ ತೂಕವಿರಬಹುದು. ಇದಕ್ಕೆ ನಾವು 7,13,000 ವೊನ್ (43 ಸಾವಿರ ರೂಪಾಯಿ) ನೀಡುತ್ತೇವೆ' ಎಂದು ಹೇಳಿದ್ದಾರೆ.
ಡಾನ್ ಅನ್ನೋದು ಸಾಂಪ್ರದಾಯಿಕವಾಗಿ ದಕ್ಷಿಣ ಕೊರಿಯಾದಲ್ಲಿ ಒಂದು ಯುನಿಟ್ ಚಿನ್ನಕ್ಕೆ ಹೇಳುವ ಅಳತೆ. ಭಾರತದಲ್ಲಿ 1 ಡಾನ್ ತೂಕ 3.75 ಗ್ರಾಮ್. ಈ ವಿಡಿಯೋ ತಕ್ಷಣವೇ ವೈರಲ್ ಆಗಿದ್ದು, ಕ್ಷಣ ಮಾತ್ರದಲ್ಲಿ ವಿಲಿಯನ್ ವೀವ್ ಸಂಪಾದಿಸಿದೆ. ಸಾವಿರಾರು ಕಾಮೆಂಟ್‌ಗಳು ವೀವರ್‌ಗಳಿಂದ ಬಂದಿದ್ದು, ಬಹುಶಃ ತಮ್ಮ ಮನೆಯಲ್ಲಿರುವ ಏರ್ ಕಂಡೀಷ್‌ನಲ್ಲೂ ಈ ನಿಧಿ ಇರಬಹುದು ಎಂದು ಅಂದಾಜಿಸಿದ್ದಾರೆ.
ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ ಯೂಟ್ಯೂಬರ್
ಕೆಲವು ದಿನಗಳ ನಂತರ ರಿಂಗ್ರಿಂಗ್ ಉನ್ನಿ ಅವರು ಮೂಲ ಕ್ಲಿಪ್ ನೋಡಿದ ನಂತರ Whisen ಲೋಗೋವನ್ನು ತಂದಿದ್ದ ಮತ್ತೊಬ್ಬ ಗ್ರಾಹಕರನ್ನು ಒಳಗೊಂಡ ಎರಡನೇ ವೀಡಿಯೊವನ್ನು ಪೋಸ್ಟ್ ಮಾಡಿದಾಗ ಈ ಸಂಚಲನ ತೀವ್ರಗೊಂಡಿದೆ. 'ನಾನು ಒಮ್ಮೆ ಇದರಲ್ಲಿನ ಚಿನ್ನವನ್ನು ತೆಗೆದು,ಸ್ಥಳೀಯ ಗೋಲ್ಡ್ ಎಕ್ಸ್‌ಚೇಂಜ್‌ಗೆ ನೀಡಿದ್ದೆ. ಆದರೆ, ಅವರು, 'ಇದಕ್ಕೆ ಯಾವುದೇ ಸರ್ಟಿಫಿಕೇಟ್ ಇಲ್ಲ. ಇದು ಚಿನ್ನದ ರೀತಿಯಲ್ಲಿ ಕಾಣೋದಿಲ್ಲ ಎಂದಿದ್ದರು' ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ. ಅಂದು ನಾನು ಅಕ್ಷರವನ್ನು ಎಸೆಯಲು ಮುಂದಾಗಿದೆ. ಈ ಹಂತದಲ್ಲಿ ನಿಮ್ಮ ವಿಡಿಯೋ ನೋಡಿದೆ' ಎಂದು ಗ್ರಾಹಕ ಹೇಳಿದ್ದಾನೆ. ಅಕ್ಷರಗಳು ಉತ್ತಮ ಸ್ಥಿತಿಯಲ್ಲಿದ್ದ ಕಾರಣ, ಎರಡನೇ ಲೋಗೋ 748,000 ವೋನ್ (₹45,000) ಹೆಚ್ಚಿನ ಮೌಲ್ಯ ಪಡೆದುಕೊಂಡಿದೆ.
ಚಿನ್ನದ ಬೆಲೆ ಅಂದು-ಇಂದು
2005 ರಲ್ಲಿ, LG ಎಲೆಕ್ಟ್ರಾನಿಕ್ಸ್ ದಕ್ಷಿಣ ಕೊರಿಯಾದ ಅಗ್ರ ಎಸಿ ಮಾರಾಟಗಾರರಾಗಿ ಸತತ ಐದು ವರ್ಷ ಪೂರೈಸಿದ ಹಿನ್ನಲೆಯಲ್ಲಿ, ಅದನ್ನು ಸಂಭ್ರಮಿಸಲು 10,000 ವಿಶೇಷ ವಿಸೆನ್ ಘಟಕಗಳನ್ನು ಬಿಡುಗಡೆ ಮಾಡಿತು. ಪ್ರತಿಯೊಂದು ಮಾದರಿಯು ಮುಂಭಾಗದ ಫಲಕದಲ್ಲಿ 24-ಕ್ಯಾರೆಟ್ ಚಿನ್ನದ ಲೋಗೋವನ್ನು ಒಳಗೊಂಡಿತ್ತು. 2005 ರಲ್ಲಿ ಚಿನ್ನದ ಬೆಲೆಗಳು ಪ್ರತಿ ಡಾನ್‌ಗೆ 50,000 ರಿಂದ 70,000 ವೋನ್‌ಗಳ ನಡುವೆ ಇದ್ದವು ಎಂದು ದಿ ಕೊರಿಯಾ ಟೈಮ್ಸ್ ವರದಿ ಮಾಡಿದೆ. ಸುಮಾರು ಎರಡು ದಶಕಗಳ ನಂತರ, ಚಿನ್ನದ ಬೆಲೆ ಆ ಮಟ್ಟಕ್ಕಿಂತ ಸುಮಾರು ಹತ್ತು ಪಟ್ಟು ಹೆಚ್ಚಾಗಿದೆ.
2005 ರಲ್ಲಿ, ಭಾರತದಲ್ಲಿ 24 ಕ್ಯಾರೆಟ್ (ಪ್ರತಿ 10 ಗ್ರಾಂ) ಚಿನ್ನದ ಬೆಲೆ ಸುಮಾರು ₹7,000 ಇತ್ತು. ಇಂದು, 10 ಗ್ರಾಂ ಚಿನ್ನದ ಬೆಲೆ ₹1.34 ಲಕ್ಷ.


