ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ 50 ಲಕ್ಷ ಸೀಟುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಟಿಕೆಟ್‌ಗಳು ಕ್ರಮವಾಗಿ ₹1,279 ಮತ್ತು ₹4,279 ರಿಂದ ಆರಂಭವಾಗುತ್ತವೆ. ಈ ಆಫರ್ ಆಗಸ್ಟ್ 10 ರಿಂದ 15 ರವರೆಗೆ ಮಾತ್ರ ಲಭ್ಯ.
ದುಬೈ/ನವದೆಹಲಿ (ಆ.10): ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಟಿಕೆಟ್ ದರದಲ್ಲಿ ಭರ್ಜರಿ ಆಫರ್ ನೀಡಿದೆ. ಬರೋಬ್ಬರಿ 50 ಲಕ್ಷ ಸೀಟುಗಳನ್ನು ಬುಕಿಂಗ್ ಮಾಡುವುದಕ್ಕೆ ಗ್ರಾಹಕರಿಗೆ ಈ ಆಫರ್ ಅನ್ನು ನೀಡುತ್ತಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಈ ಆಫರ್‌ಗಳು ಅನ್ವಯ ಆಗಲಿವೆ.
ಹೌದು, 'ಫ್ರೀಡಂ ಸೇಲ್' ಅಡಿಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ 50 ಲಕ್ಷ ಸೀಟುಗಳನ್ನು ಆಫರ್ ಮಾಡುತ್ತಿದೆ. ದೇಶೀಯ ಪ್ರಯಾಣದ ಟಿಕೆಟ್ ದರಗಳು ₹1,279 ರಿಂದ ಆರಂಭವಾಗುತ್ತವೆ. ಅಂತರರಾಷ್ಟ್ರೀಯ ಟಿಕೆಟ್ ದರಗಳು ₹4,279 ರಿಂದ ಆರಂಭ. ಯುಎಇಯ ಸ್ಥಳಗಳಿಗೂ ಆಫರ್ ದರದಲ್ಲಿ ಟಿಕೆಟ್ ಲಭ್ಯ. ಭಾರತದಿಂದ ಅಬುಧಾಬಿ, ದುಬೈ, ಶಾರ್ಜಾ, ರಾಸ್ ಅಲ್ ಖೈಮಾ ಮುಂತಾದ ಸ್ಥಳಗಳಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ ಆಫರ್ ಲಭ್ಯ.
ಆಗಸ್ಟ್ 10 ಭಾನುವಾರದಿಂದ ಏರ್‌ಲೈನ್ಸ್ ವೆಬ್‌ಸೈಟ್ ಮತ್ತು ಆಪ್ ಮೂಲಕ ಆಫರ್ ಲಭ್ಯವಿದೆ. ಫ್ರೀಡಂ ಸೇಲ್ ಬುಕಿಂಗ್ ಮಾಡಿವ ಆಫರ್ ಅವಧಿ ಆಗಸ್ಟ್ 15ಕ್ಕೆ ಕೊನೆಗೊಳ್ಳಲಿದೆ. ಜೊತೆಗೆ, ನೀವು ಫ್ರೀಡಂ ಸೇಲ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡಿದ ಪ್ರಯಾಣ ಇದೇ ಆಗಸ್ಟ್ 19 ರಿಂದ 2026ರ ಮಾರ್ಚ್ 31 ರವರೆಗಿನ ಪ್ರಯಾಣಕ್ಕೆ ಅನ್ವಯ ಆಗುತ್ತದೆ. ನೀವು ಈಗ ಒಂದು ವರ್ಷಕ್ಕಿಂತ ಮೊದಲೇ ವಿಮಾನದ ಟಿಕೆಟ್ ಬುಕ್ ಮಾಡಬಹುದು. ಓಣಂ, ಪೂಜಾ ರಜೆ, ಕ್ರಿಸ್‌ಮಸ್ ಸೇರಿದಂತೆ ಹಲವು ರಜಾದಿನಗಳು ಈ ಅವಧಿಯಲ್ಲಿ ಬರುವುದು ಪ್ರಯಾಣಿಕರಿಗೆ ಅನುಕೂಲ.
ವಿಮಾನಯಾನ ಸಂಸ್ಥೆಯ ಎಕ್ಸ್‌ಪ್ರೆಸ್ ಮೌಲ್ಯ ದರಗಳು ದೇಶೀಯ ಪ್ರಯಾಣಕ್ಕೆ ₹1,379 ರಿಂದ ಮತ್ತು ಅಂತರರಾಷ್ಟ್ರೀಯ ಪ್ರಯಾಣಕ್ಕೆ ₹4,479 ರಿಂದ ಆರಂಭವಾಗುತ್ತವೆ. ಈ ದರಗಳಲ್ಲಿ ಸಾಮಾನ್ಯ ಚೆಕ್-ಇನ್ ಬ್ಯಾಗೇಜ್ ಅಲವೆನ್ಸ್ ಸೇರಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ ವಿಶೇಷ ದರಗಳು ಮತ್ತು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಒಮ್ಮೆಯಾದರೂ ವಿಮಾನ ಹತ್ತಬೇಕು ಎನ್ನೋರು ಟಿಕೆಟ್ ಬುಕ್ ಮಾಡಿ:
ನಮ್ಮ ದೇಶದಲ್ಲಿ ಇನ್ನೂ ಶೇ.85ಕ್ಕೂ ಅಧಿಕ ಜನರು ವಿಮಾನ ಪ್ರಯಾಣವನ್ನು ಮಾಡಿಲ್ಲ. ತೀರಾ ಇತ್ತೀಚಿನ ವರ್ಷಗಳವರೆಗೆ ಅಂದರೆ ಉಡಾನ್ ಯೋಜನೆ ಜಾರಿಗೆ ಬರುವವರೆಗೂ ವಿಮಾನ ಪ್ರಯಾಣ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತ ಎಂಬಂತಾಗಿತ್ತು. ಇದೀಗ ಎಲ್ಲ ಬಡ ಮತ್ತು ಮಧ್ಯಮ ಕುಟುಂಬದವರೂ ಕೂಡ ವಿಮಾನದಲ್ಲಿ ಸುಲಭವಾಗಿ ಸಂಚಾರ ಮಾಡಬಹುದು. ಕಾರಣ, ವಿಮಾನ ಪ್ರಯಾಣದ ಟಿಕೆಟ್ ದರಗಳು ಭಾರೀ ಕಡಿಮೆ ಆಗಿವೆ. ಇನ್ನು ನಾವು ಒಮ್ಮೆಯೂ ವಿಮಾನದಲ್ಲಿ ಪ್ರಯಾಣ ಮಾಡಿಯೇ ಇಲ್ಲ ಎನ್ನುವವರು ಕೂಡ ಈ ಫ್ರೀಡಂ ಸೇಲ್ ಆಫರ್ ಅನ್ನು ಉಪಯೋಗಿಸಿಕೊಂಡು ವಿಮಾನದಲ್ಲಿ ಹೋಗುವುದಕ್ಕೆ ಟಿಕೆಟ್ ಬುಕಿಂಗ್ ಮಾಡಬಹುದು. ಈ ಆಫರ್ ಕೇವಲ 5 ದಿನಗಳು ಮಾತ್ರ ಚಾಲ್ತಿಯಲ್ಲಿದ್ದು, ಕೂಡಲೇ ನಿಮ್ಮ ಟಿಕೆಟ್ ಬುಕಿಂಗ್ ಮಾಡಬಹುದು.


