ಐಪಿಎಲ್ 2026ರಲ್ಲಿ ಸತತ ನಾಲ್ಕನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಪಂಜಾಬ್ ವಿರುದ್ಧದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದ್ದು, ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸುಳಿವನ್ನು ಪಾಂಡ್ಯ ನೀಡಿದ್ದಾರೆ. ಈ ಸೋಲಿನಿಂದಾಗಿ ಮುಂಬೈ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.
ಮುಂಬೈ: ಐಪಿಎಲ್ 2026 ಸೀಸನ್ನಲ್ಲಿ ಸತತ ನಾಲ್ಕನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಂತರಿಕ ಕಲಹ ಶುರುವಾದಂತಿದೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ರೆ ಎಲ್ಲವೂ ಸರಿಯಿಲ್ವಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಹೌದು, ಪಂಜಾಬ್ ಕಿಂಗ್ಸ್ ವಿರುದ್ಧದ ಹೀನಾಯ ಸೋಲಿನ ಬಳಿಕ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮತ್ತು ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ನಡುವಿನ ವಾಗ್ವಾದದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪಂದ್ಯದಲ್ಲಿ ಮುಂಬೈ ನೀಡಿದ್ದ 196 ರನ್ಗಳ ಗುರಿಯನ್ನು ಪಂಜಾಬ್ ತಂಡ ಕೇವಲ 16.3 ಓವರ್ಗಳಲ್ಲಿ, 3 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿ ಗೆದ್ದಿತ್ತು.
ಮುಂಬೈ ಇಂಡಿಯನ್ಸ್ನಲ್ಲಿ ಶುರುವಾಯ್ತಾ ಆಂತರಿಕ ಕಲಹ
ಪಂದ್ಯದ ಒಂದು ನಿರ್ಣಾಯಕ ಹಂತದಲ್ಲಿ, ಬುಮ್ರಾ ಅವರ ಇಷ್ಟಕ್ಕೆ ವಿರುದ್ಧವಾಗಿ ಹಾರ್ದಿಕ್ ಫೀಲ್ಡ್ ಸೆಟ್ ಮಾಡಿದ್ದೇ ಈ ಜಗಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಬುಮ್ರಾ ಕ್ಯಾಪ್ಟನ್ ಜೊತೆ ವಾದಕ್ಕಿಳಿದು, ಕೊನೆಗೆ ಇಷ್ಟವಿಲ್ಲದಿದ್ದರೂ ಬೌಲಿಂಗ್ ಮಾಡಲು ಹೋಗುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಪಂದ್ಯದ ನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ, ತಂಡದ ಆಟಗಾರರ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ತಂಡದಲ್ಲಿ ದೊಡ್ಡ ಬದಲಾವಣೆಗಳ ಅವಶ್ಯಕತೆ ಇದೆ ಎಂಬ ಸುಳಿವನ್ನು ಕೂಡ ನೀಡಿದ್ದಾರೆ.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸದ್ಯಕ್ಕೆ ನನಗೇನೂ ಹೇಳಲು ತೋಚುತ್ತಿಲ್ಲ. ನಾವು ಎಲ್ಲಿ ತಪ್ಪು ಮಾಡಿದೆವು ಎಂದು ಪರಿಶೀಲಿಸಬೇಕಿದೆ. ಇದು ವೈಯಕ್ತಿಕ ತಪ್ಪೋ ಅಥವಾ ನಮ್ಮ ಪ್ಲಾನಿಂಗ್ನಲ್ಲಿ ಆದ ತಪ್ಪೋ ಎಂದು ಕಂಡುಹಿಡಿಯಬೇಕು. ಮುಂದಿನ ದಿನಗಳಲ್ಲಿ ನಾವು ಇದರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತೇವೆ.' ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಮತ್ತು ತಂಡವಾಗಿ ನಾವೆಲ್ಲರೂ ಜವಾಬ್ದಾರಿ ಹೊರಬೇಕು' ಎಂದು ಅವರು ಹೇಳಿದರು.
ಪಾಯಿಂಟ್ ಪಟ್ಟಿಯಲ್ಲಿ ಕುಸಿತ
ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕ (112*) ಮತ್ತು ನಮನ್ ಧೀರ್ ಅವರ ಅರ್ಧಶತಕ (50) ಮುಂಬೈ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ದರೂ, ಬೌಲಿಂಗ್ ವೈಫಲ್ಯದಿಂದ ತಂಡ ಸೋಲನುಭವಿಸಿತು. ಬುಮ್ರಾ ತಮ್ಮ ನಾಲ್ಕು ಓವರ್ಗಳಲ್ಲಿ 41 ರನ್ ನೀಡಿ ಒಂದೂ ವಿಕೆಟ್ ಪಡೆಯಲಿಲ್ಲ. ಇತ್ತ ಹಾರ್ದಿಕ್ ಬ್ಯಾಟಿಂಗ್ನಲ್ಲಿ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದರು. ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯ ಮುಂಬೈಗೆ ಅತ್ಯಂತ ನಿರ್ಣಾಯಕವಾಗಿದೆ. ಟೂರ್ನಿಯಲ್ಲಿ ಉಳಿಯಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿತ್ತು. ಆದರೆ ಇದಾದ ಬಳಿಕ ಸತತ ನಾಲ್ಕನೇ ಸೋಲು ಅನುಭವಿಸಿದೆ ಈ ಮೂಲಕ ಅಂಕಪಟ್ಟಿಯಲ್ಲಿ ಕೇವಲ ಎರಡು ಅಂಕಗಳ ಸಹಿತ ಒಂಬತ್ತನೇ ಸ್ಥಾನಕ್ಕೆ ಜಾರಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದಲ್ಲಿ ಇನ್ನುಳಿದ ಒಂಬತ್ತು ಪಂದ್ಯಗಳ ಪೈಕಿ ಕನಿಷ್ಠ ಆರರಿಂದ ಏಳು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇನ್ನೊಂದೆಡೆ ತಂಡದ ಪ್ರೀಮಿಯರ್ ವೇಗಿ ಕಳೆದ ಐದು ಪಂದ್ಯಗಳಿಂದ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗದೇ ಹೋಗಿರುವುದು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.


