ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಜಡೇಜಾ ಮತ್ತು ಸುಂದರ್ ಶತಕಗಳ ನೆರವಿನಿಂದ ಭಾರತ ಡ್ರಾ ಸಾಧಿಸಿದೆ. ನಾಲ್ಕು ಭಾರತೀಯ ಆಟಗಾರರು 400ಕ್ಕೂ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. 35 ವರ್ಷಗಳ ನಂತರ ಓಲ್ಡ್ ಟ್ರಾಫರ್ಡ್ನಲ್ಲಿ ಮೂರು ಭಾರತೀಯ ಶತಕಗಳು ದಾಖಲಾಗಿವೆ.
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಕ್ರಿಕೆಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಶತಕಗಳ ನೆರವಿನಿಂದ ಪಂದ್ಯ ಡ್ರಾ ಆಗಿದೆ. ನಾಲ್ಕು ಭಾರತೀಯ ಆಟಗಾರರು 400ಕ್ಕೂ ಹೆಚ್ಚು ರನ್ ಗಳಿಸಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಭಾರತದ 91 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ನಾಲ್ಕು ಆಟಗಾರರು ಒಂದೇ ಸರಣಿಯಲ್ಲಿ ೪೦೦ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಕೆಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಭಾರತೀಯ ಆಟಗಾರರೇ ಪಡೆದಿದ್ದಾರೆ. 722 ರನ್ಗಳೊಂದಿಗೆ ಶುಭ್ಮನ್ ಗಿಲ್ ಮೊದಲ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ ಒಂದು ದ್ವಿಶತಕ ಸೇರಿದಂತೆ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.
ರಾಹುಲ್ 511 ರನ್ಗಳೊಂದಿಗೆ ರನ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆಂಡರ್ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. 479 ರನ್ಗಳೊಂದಿಗೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮೂರನೇ ಸ್ಥಾನದಲ್ಲಿದ್ದಾರೆ. ಎಡಗೈ ಸ್ಪೋಟಕ ಬ್ಯಾಟರ್ ಪಂತ್ ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಗಾಯದಿಂದಾಗಿ ಕೊನೆಯ ಟೆಸ್ಟ್ನಲ್ಲಿ ಆಡಲು ಸಾಧ್ಯವಾಗದ ಕಾರಣ 500 ರನ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಪಂದ್ಯದಲ್ಲಿ ಆಡಿದ್ದರೆ ಒಂದು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಬಹುದಿತ್ತು. 1965ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 525 ರನ್ ಗಳಿಸಿದ ಬುಧಿ ಕುಂದೇರನ್ ಈ ದಾಖಲೆಯನ್ನು ಹೊಂದಿದ್ದಾರೆ.
ನಿನ್ನೆ ಮ್ಯಾಂಚೆಸ್ಟರ್ನಲ್ಲಿ ಶತಕ ಗಳಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್ನ ಜಾಮಿ ಸ್ಮಿತ್ ಅವರನ್ನು ಹಿಂದಿಕ್ಕಿ ರನ್ ಗಳಿಕೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 454 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ಮೊದಲ ಟೆಸ್ಟ್ನಲ್ಲಿ ಶತಕ ಗಳಿಸಿದ ಯಶಸ್ವಿ ಜೈಸ್ವಾಲ್ ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಲ್ಕು ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 291 ರನ್ ಗಳಿಸಿದ್ದಾರೆ. ಈ ಸರಣಿಯ ರನ್ ಗಳಿಕೆಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
35 ವರ್ಷದ ಕಾಯುವಿಕೆ ಬಳಿಕ ಒಂದೇ ಪಂದ್ಯದಲ್ಲಿ ಭಾರತದಿಂದ 3 ಶತಕ!
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಬರೋಬ್ಬರಿ 35 ವರ್ಷಗಳ ಬಳಿಕ ಭಾರತೀಯ ಬ್ಯಾಟರ್ಗಳು ಶತಕ ಬಾರಿಸಿದರು. 1990ರಲ್ಲಿ ಸಚಿನ್ ತೆಂಡುಲ್ಕರ್ ತಮ್ಮ 17ನೇ ವರ್ಷದಲ್ಲಿ ಈ ಕ್ರೀಡಾಂಗಣದಲ್ಲಿ ಸೆಂಚುರಿ ಸಿಡಿಸಿದ್ದರು. ಸಚಿನ್ ತಮ್ಮ ಟೆಸ್ಟ್ ವೃತ್ತಿಬದುಕಿನಲ್ಲಿ ಮೊದಲ ಶತಕ ಸಿಡಿಸಿದ್ದರು. ಇದಾದ ಬಳಿಕ ಈವರೆಗೂ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಶತಕ ದಾಖಲಾಗಿರಲಿಲ್ಲ. ಆದರೆ ಈಗ ಒಂದೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಶತಕ ಗಳಿಸಿದ್ದಾರೆ.
ಶುಭ್ಮನ್ ಗಿಲ್ 238 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 103 ರನ್ ಗಳಿಸಿ ಜೋಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ರವೀಂದ್ರ ಜಡೇಜಾ 185 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 107 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಮತ್ತೋರ್ವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 101 ರನ್ ಸಿಡಿಸಿದರು.

