ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಗುಜರಾತ್ ಟೈಟಾನ್ಸ್. ಡಕ್ವರ್ತ್ ಲೂಯಿಸ್ ನಿಯಮದನ್ವಯ 3 ವಿಕೆಟ್‌ಗಳ ಜಯದೊಂದಿಗೆ ಪ್ಲೇಆಫ್ ಹಂತಕ್ಕೆ ಒಂದು ಹೆಜ್ಜೆ ಇಟ್ಟ ಗಿಲ್ ಪಡೆ.
ಮುಂಬೈ: ಆತಿಥೇಯ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟ್ ಮಾಡಿ 155 ರನ್‌ಗೆ ತನ್ನ ಇನ್ನಿಂಗ್ಸ್ ಮುಗಿಸಿದಾಗ, ಪಂದ್ಯ ಸುಲಭವಾಗಿ ಗುಜರಾತ್ ಟೈಟಾನ್ಸ್ ತೆಕ್ಕೆಗೆ ಬೀಳ ಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮಳೆ ಯಿಂದಾಗಿ, ಪಂದ್ಯ ಮಧ್ಯರಾತ್ರಿ 12.40ಕ್ಕೆ ನಿರ್ಧಾರ ವಾಯಿತು. ಅದೂ ಕೊನೆಯ ಎಸೆತದಲ್ಲಿ, ರೋಚಕ ಜಯ ಸಾಧಿಸುವಲ್ಲಿ ಗಿಲ್ ಪಡೆ ಯಶಸ್ವಿಯಾಗಿದೆ
ಮಳೆ, ಡಕ್ವರ್ತ್ ಲೂಯಿಸ್ ಸ್ಕೋರ್ ಒತ್ತಡ, ಜಸ್ಪ್ರೀತ್ ಬುಮ್ರಾ ಜಾದೂ, ಮುಂಬೈನ ತಾರಾ ಪಡೆ ಇದೆಲ್ಲವನ್ನೂ ಸಮರ್ಥ ವಾಗಿ ಎದುರಿಸಿದ ಗುಜರಾತ್, ಡಕ್ವರ್ತ್ ಲೂಯಿಸ್ ನಿಯಮದನ್ವಯ 3 ವಿಕೆಟ್‌ಗಳಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಜೊತೆಗೆ ಪ್ಲೇ ಆಫ್ ಹಂತದಲ್ಲಿ ಒಂದು ಕಾಲಿರಿಸಿತು.
ಗೆಲ್ಲಲು 156 ರನ್ ಗುರಿ ಬೆನ್ನತ್ತಿದ ಗುಜರಾತ್, ಆರಂಭಿಕ ಆಟಗಾರ ಸಾಯಿ ಸುದರ್ಶನ್‌ರ ವಿಕೆಟನ್ನು ಬೇಗನೆ ಕಳೆದುಕೊಂಡರೂ, ಗಿಲ್ (43) ಹಾಗೂ ಬಟ್ಲರ್ (30)ರ ಆಕರ್ಷಕ ಆಟದ ನೆರವಿನಿಂದ ಜಯದತ್ತ ಮುನ್ನುಗುತ್ತಿತ್ತು. ರಾತ್ರಿ 10.40ರ ಸಮಯಕ್ಕೆ ಮಳೆ ಶುರುವಾ ದಾಗ, ಗುಜರಾತ್‌ಗೆ ಗೆಲ್ಲಲು 36 ಎಸೆತದಲ್ಲಿ 49 ರನ್ ಬೇಕಿತ್ತು. ಇನ್ನೂ 8 ವಿಕೆಟ್ ಕೈಯಲ್ಲಿತ್ತು. 20 ನಿಮಿಷ ಮಳೆ ಯಿಂದಾಗಿ ಆಟ ಸ್ಥಗಿತಗೊಂಡು ಬಳಿಕ ಪುನಾರಂಭವಾಗುತ್ತಿದ್ದಂತೆ ಬುಮ್ರಾ, ಗಿಲ್‌ರನ್ನು ಬೌಲ್ಡ್ ಮಾಡಿದರು. ಅಲ್ಲಿಂದಾಚೆಗೆ 2.3 ಓವರ್‌ಗಳ ಅಂತರದಲ್ಲಿ ಗುಜರಾತ್ 3 ವಿಕೆಟ್ ಕಳೆದುಕೊಂಡಿತು. ತಂಡದ ರನ್ ಗಳಿಕೆಯೂ ವೇಗ ಕಳೆದುಕೊಂಡ ಕಾರಣ, ಡೆಕ್ವರ್ಥ್ ಲೂಯಿಸ್ ನಿಯಮದ ನ್ವಯ ಗಳಿಸಬೇಕಾದ ಮೊತ್ತದಲ್ಲಿ ಹಿಂದೆ ಬಿತ್ತು. ಆನಂತರ ಮತ್ತೆ ಮಳೆ ಶುರುವಾಗಿ ಕೆಲ ಕಾಲ ಆಟ ನಿಂತಿತ್ತು. ಆಗ 18 ಓವರಲ್ಲಿ ಗುಜರಾತ್ 6 ವಿಕೆಟ್‌ಗೆ 132 ರನ್ ಗಳಿಸಿತ್ತು. ಬಳಿಕ ಪಂದ್ಯವನ್ನು 19 ಓವರ್‌ಗೆ ಇಳಿಸಿ, ಗುಜರಾತ್‌ಗೆ 147 ರನ್ ಗುರಿ ನೀಡಲಾಯಿತು. ಮಧ್ಯ ರಾತ್ರಿ 12.30ಕ್ಕೆ ಆಟ ಪುನಾರಂಭಗೊಂಡಾಗ ಗುಜರಾತ್‌ಗೆ 6 ಎಸೆತದಲ್ಲಿ 15 ರನ್ ಬೇಕಿತ್ತು. ದೀಪಕ್ ಚಹರ್ ಎಸೆದ ಓವರಲ್ಲಿ ತೇವಾಟಿಯಾ ಹಾಗೂ ಕೋಟ್ಜಿ ತಂಡವನ್ನು ಗೆಲುವಿನ ಅಂಚಿಗೆ ತಂದರು. 2 ಎಸೆತದಲ್ಲಿ 1 ರನ್ ಬೇಕಿದ್ದಾಗ, ಕೋಟ್ಟಿ ಔಟಾದರು. ಕೊನೆ ಎಸೆತದಲ್ಲಿ 1 ರನ್ ಬೇಕಿತ್ತು. ಅರ್ಷದ್ ಖಾನ್‌ರನ್ನು ರನೌಟ್ ಮಾಡುವ ಅವಕಾಶವನ್ನು ಹಾರ್ದಿಕ್ ಕೈಚೆಲ್ಲಿದರು. ಪರಿಣಾಮ ಗುಜರಾತ್ ಸಂಭ್ರ
ಮಿಸಿತು.
ಸತತ 6 ಗೆಲುವಿನ ನಾಗಾಲೋಟಕ್ಕೆ ಬ್ರೇಕ್: ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಸತತ 6 ಗೆಲುವು ದಾಖಲಿಸಿ ಅಜೇಯವಾಗಿ ಮುನ್ನುಗ್ಗುತ್ತಿತ್ತು. ಆದರೆ ಮುಂಬೈ ಗೆಲುವಿನ ಓಟಕ್ಕೆ ಇದೀಗ ಗುಜರಾತ್ ಟೈಟಾನ್ಸ್ ಬ್ರೇಕ್ ಹಾಕಿದೆ. ಇದರ ಜತೆಗೆ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಮುಂಬೈ ಎದುರು ಗುಜರಾತ್ ಗೆದ್ದು ಬೀಗಿದೆ.
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಮೊದಲು ಬ್ಯಾಟ್ ಮಾಡಿದರೂ ಆರಂಭಿಕ ಆಘಾತ ಅನುಭವಿಸಿತು. ರಿಯಾನ್ ರಿಕೆಲ್ಟನ್(2) ಹಾಗೂ ರೋಹಿತ್ ಶರ್ಮಾ(7) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು
ವಿಲ್ ಜ್ಯಾಕ್ಸ್ (56) ಹಾಗೂ ಸೂರ್ಯಕುಮಾರ್ ಯಾದವ್ (35)ರ ಹೋರಾಟದ ನೆರ ವಿನಿಂದ ಚೇತರಿಕೆ ಕಂಡಿತು. ಕೊನೆಯಲ್ಲಿ ಕಾರ್ಬಿನ್ ಬಾಷ್ (27)ರ ಹೋರಾಟ ಮಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ತಿಲಕ್ ವರ್ಮಾ(7), ನಾಯಕ ಹಾರ್ದಿಕ್ ಪಾಂಡ್ಯ(1) ಹಾಗೂ ನಮನ್ ಧಿರ್(7) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು ಮುಂಬೈಗೆ ಹಿನ್ನಡೆ ಎನಿಸಿತು. ಅಂತಿಮವಾಗಿ ಮುಂಬೈ 20 ಓವರಲ್ಲಿ 8 ವಿಕೆಟ್‌ಗೆ 155 ರನ್‌ಗೆ ಹೆಚ್ಚಿಸಿತು.


