ಐಪಿಎಲ್ 2024ರಲ್ಲಿ 54 ಪಂದ್ಯಗಳು ಮುಕ್ತಾಯಗೊಂಡರೂ ಯಾವ ತಂಡವೂ ಪ್ಲೇ ಆಫ್‌ಗೆ ಅಧಿಕೃತವಾಗಿ ಪ್ರವೇಶ ಪಡೆದಿಲ್ಲ. ಆರ್‌ಸಿಬಿ ಮತ್ತು ಪಂಜಾಬ್ ಪ್ಲೇ ಆಫ್‌ಗೆ ಹತ್ತಿರವಾಗಿದ್ದರೂ, ಉಳಿದ ತಂಡಗಳಿಗೂ ಅವಕಾಶಗಳಿವೆ.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ದಿನದಿಂದ ದಿನಕ್ಕೆ ರೋಚಕತೆ ಕಾಯ್ದುಕೊಳ್ಳುತ್ತಾ ಸಾಗುತ್ತಿದೆ. ಹಲವು ಪಂದ್ಯಗಳು ಕ್ಲೋಸ್ ಕಾಂಟೆಸ್ಟ್‌ನಲ್ಲಿ ಕೊನೆಗೊಳ್ಳುತ್ತಿದ್ದು, ಅಭಿಮಾನಿಗಳು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತಿವೆ. ಕೆಲವು ಪಂದ್ಯಗಳಂತೂ ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ಫಲಿತಾಂಶಕ್ಕಾಗಿ ಕಾಯುವಂತೆ ಮಾಡುತ್ತಿದೆ.
ಟೂರ್ನಿಯಲ್ಲಿ ಇದುವರೆಗೂ 54 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯವಾಗಿವೆ. ಇನ್ನು 2024ರ ಐಪಿಎಲ್ ಟೂರ್ನಿಯಲ್ಲಿ ಕೇವಲ 20 ಪಂದ್ಯಗಳು ಬಾಕಿ ಉಳಿದಿವೆ. ಹೀಗಿದ್ದೂ, ಇದುವರೆಗೂ ಯಾವುದೇ ತಂಡವು ಅಧಿಕೃತವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆದಿಲ್ಲ. ಲೀಗ್ ಹಂತ ಮುಕ್ತಾಯದ ಬಳಿಕ ಪ್ಲೇ ಆಫ್‌ಗೆ ಪ್ರವೇಶಿಸಬಲ್ಲ 4 ತಂಡಗಳು ಯಾವುವು ಎನ್ನುವ ಕುತೂಹಲಕ್ಕೆ ಇನ್ನೂ ಯಾವುದೇ ತೆರೆ ಬಿದ್ದಿಲ್ಲ.
ಸದ್ಯ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಿದ್ದು, ಈ ಪೈಕಿ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಗಳು ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿವೆ. ಇನ್ನುಳಿದ 8 ತಂಡಗಳು ಪ್ಲೇ ಆಫ್ ಪ್ರವೇಶಿಸಲು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ಸದ್ಯ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ 11 ಪಂದ್ಯಗಳಲ್ಲಿ 8 ಗೆಲುವು ಹಾಗೂ 3 ಸೋಲು ಸಹಿತ 16 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ 15 ಅಂಕಗಳ ಸಹಿತ ಎರಡನೇ ಸ್ಥಾನದಲ್ಲಿದ್ದು, ಈ ಎರಡು ತಂಡಗಳು ಪ್ಲೇ ಆಫ್‌ಗೆ ಹತ್ತಿರವಾಗಿವೆ. ಆದರೆ ಇಷ್ಟು ಅಂಕ ಹೊಂದಿದ್ದರೂ ಈ ಎರಡು ತಂಡಗಳು ಇನ್ನೂ ಪ್ಲೇ ಆಫ್‌ಗೆ ಎಂಟ್ರಿ ಪಡೆದುಕೊಂಡಿಲ್ಲ. ಯಾಕೆ ಹೀಗೆ ಎನ್ನುವುದನ್ನು ನಾವಿಂದು ಎಳೆಎಳೆಯಾಗಿ ವಿವರಿಸುತ್ತೇವೆ ನೋಡಿ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತಲಾ 11 ಪಂದ್ಯಗಳನ್ನಾಡಿವೆ. ಇನ್ನು ಟೂರ್ನಿಯ ಲೀಗ್ ಹಂತದಲ್ಲಿ ಈ ಎರಡು ತಂಡಗಳು ಇನ್ನೂ ತಲಾ 3 ಪಂದ್ಯಗಳನ್ನಾಡುವುದು ಬಾಕಿ ಇವೆ. ಈ ಎರಡು ತಂಡಗಳು ತಲಾ ಒಂದು ಪಂದ್ಯ ಜಯಿಸಿದರೂ ಅಧಿಕೃತವಾಗಿ ಎಂಟ್ರಿಕೊಡಲಿವೆ. ಒಂದು ವೇಳೆ ಈ ಎರಡು ತಂಡಗಳು ಇನ್ನುಳಿದ ಎಲ್ಲಾ ಪಂದ್ಯಗಳನ್ನು ಸೋತರೇ ಪ್ಲೇ ಆಫ್ ರೇಸ್‌ನಿಂದ ಹೊರಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದು ಹೇಗೆ ಎನ್ನುವುದನ್ನು ನಾವೀಗ ನೋಡೋಣ.
ಇನ್ನುಳಿದಂತೆ ಮುಂಬೈ ಇಂಡಿಯನ್ಸ್ 11 ಪಂದ್ಯಗಳನ್ನಾಡಿ 14 ಅಂಕ ಗಳಿಸಿದೆ. ಮುಂಬೈ ಇನ್ನುಳಿದ ಮೂರು ಪಂದ್ಯಗಳನ್ನು ಜಯಿಸಿದರೆ ಹಾರ್ದಿಕ್ ಪಾಂಡ್ಯ ಪಡೆಯ ಖಾತೆಯಲ್ಲಿ 20 ಅಂಕಗಳಾಗಲಿವೆ. ಅದೇ ರೀತಿ ಗುಜರಾತ್ ಟೈಟಾನ್ಸ್ 10 ಪಂದ್ಯಗಳನ್ನಾಡಿ 14 ಅಂಕ ಹೊಂದಿದೆ. ಗುಜರಾತ್ ಇನ್ನುಳಿದ 4 ಪಂದ್ಯಗಳನ್ನು ಜಯಿಸಿದರೆ ಗಿಲ್ ಪಡೆಯ ಬಳಿ 22 ಅಂಕಗಳು ಇರಲಿವೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 10 ಪಂದ್ಯಗಳನ್ನಾಡಿ 12 ಅಂಕ ಹೊಂದಿದ್ದು, ಇನ್ನೂ 4 ಪಂದ್ಯ ಆಡುವುದು ಬಾಕಿ ಇದೆ. ಹೀಗಾಗಿ ಡೆಲ್ಲಿ ಇನ್ನುಳಿದ 4 ಪಂದ್ಯ ಗೆದ್ದರೆ ಅಕ್ಷರ್ ಪಟೇಲ್ ಪಡೆಯ ಖಾತೆಯಲ್ಲಿ 20 ಅಂಕಗಳಾಗಲಿವೆ. ಇನ್ನು ಕೋಲ್ಕತಾ ನೈಟ್ ರೈಡರ್ಸ್ 11 ಪಂದ್ಯಗಳನ್ನಾಡಿ 11 ಅಂಕ ಗಳಿಸಿವೆ. ಕೆಕೆಆರ್ ಇನ್ನುಳಿದ 3 ಪಂದ್ಯ ಗೆದ್ದರೇ 17 ಅಂಕಗಳಾಗಲಿವೆ. ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ 11 ಪಂದ್ಯಗಳನ್ನಾಡಿ 10 ಅಂಕ ಹೊಂದಿದ್ದು, ಇನ್ನುಳಿದ ಮೂರು ಪಂದ್ಯ ಜಯಿಸಿದರೆ 16 ಅಂಕಗಳನ್ನು ಹೊಂದಲಿವೆ.


