ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಬುಕ್ ಮಾಡಿದ ಪ್ರಯಾಣಿಕರೊಬ್ಬರು, ಸವಾರನ ಬೇಜವಾಬ್ದಾರಿತನದಿಂದ ಅಪಘಾತಕ್ಕೀಡಾಗಿದ್ದಾರೆ. ರಾಂಗ್ ರೂಟ್ನಲ್ಲಿ ಚಲಿಸಿದ ಪರಿಣಾಮ ಎದುರಿನಿಂದ ಬಂದ ಬುಲೆಟ್ಗೆ ಡಿಕ್ಕಿಯಾಗಿ, ಪ್ರಯಾಣಿಕನ ಮಂಡಿ ಚಿಪ್ಪು ಪುಡಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು (ಡಿ.25): ನಗರದ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಜನರು ಹೆಚ್ಚಾಗಿ ಅವಲಂಬಿತರಾಗುವ Rapido Bike ಸೇವೆ ಇದೀಗ ಗ್ರಾಹಕನೊಬ್ಬನ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಬೈಕ್ ಸವಾರನ ಬೇಜವಾಬ್ದಾರಿತನಕ್ಕೆ ಮಂತ್ರಾಲಯದಿಂದ ಬಂದಿದ್ದ ವ್ಯಕ್ತಿಯೊಬ್ಬರು ಮನೆಗೆ ತಲುಪದೇ ಸೀದಾ ಆಸ್ಪತ್ರೆ ಪಾಲಾಗಿದ್ದಾರೆ.
ಮನೆಗೆ ಮರಳುವಾಗ ನಡೆದ ದುರ್ಘಟನೆ:
ಮಂತ್ರಾಲಯಕ್ಕೆ ದರ್ಶನಕ್ಕೆ ಹೋಗಿದ್ದ ಕಾರ್ತಿಕ್ ಎಂಬುವವರು ಬೆಂಗಳೂರಿಗೆ ವಾಪಸ್ ಬಂದಿದ್ದರು. ರೇಸ್ ಕೋರ್ಸ್ ಬಳಿ ಬಸ್ ಇಳಿದು ಮನೆಗೆ ಹೋಗಲು ಅವರು Rapido Bike ಬುಕ್ ಮಾಡಿದ್ದರು. ಆದರೆ, ಈ ಪಯಣ ಸುಖಕರವಾಗಿರುವ ಬದಲು ಕರಾಳವಾಗಿ ಪರಿಣಮಿಸಿತು. ಕಸ್ತೂರಿ ನಗರದ ಸಮೀಪ ಬರುತ್ತಿದ್ದಂತೆ ರೈಡರ್ ಮಾಡಿದ ಒಂದು ತಪ್ಪು ಕಾರ್ತಿಕ್ ಅವರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ.
ಬೇಡ ಅಂದರೂ ರಾಂಗ್ ರೂಟ್ನಲ್ಲಿ ಸವಾರಿ!
ಬೈಕ್ ಸವಾರ ಬೇಗ ತಲುಪಬೇಕೆಂಬ ಧಾವಂತದಲ್ಲಿ ಅಥವಾ ಶಾರ್ಟ್ಕಟ್ ಹುಡುಕುವ ಭರದಲ್ಲಿ ರಾಂಗ್ ರೂಟ್ ನಲ್ಲಿ ಬೈಕ್ ಚಲಾಯಿಸಲು ಮುಂದಾಗಿದ್ದಾನೆ. ಈ ವೇಳೆ ಹಿಂಬದಿ ಕುಳಿತಿದ್ದ ಕಾರ್ತಿಕ್ ಅವರು 'ಬೇಡ, ಸರಿಯಾದ ದಾರಿಯಲ್ಲೇ ಹೋಗು' ಎಂದು ಎಚ್ಚರಿಸಿದ್ದರೂ ಸವಾರ ಕೇಳಲಿಲ್ಲ. ಅಜಾಗರೂಕತೆಯಿಂದ ರಾಂಗ್ ರೂಟ್ನಲ್ಲಿ ನುಗ್ಗಿದ ಪರಿಣಾಮ ಎದುರಿಗೆ ಬಂದ ಬುಲೆಟ್ ಬೈಕ್ ಡಿಕ್ಕಿ ಹೊಡೆದಿದೆ.
ಕ್ಷಣಮಾತ್ರದಲ್ಲಿ ಪುಡಿಯಾಯ್ತು ಮಂಡಿ ಚಿಪ್ಪು
ಅಪಘಾತದ ತೀವ್ರತೆಗೆ ಕಾರ್ತಿಕ್ ಅವರ ಮೊಣಕಾಲಿಗೆ ಬಲವಾದ ಏಟು ಬಿದ್ದಿದ್ದು, ಮಂಡಿ ಚಿಪ್ಪು ಪುಡಿ ಪುಡಿಯಾಗಿದೆ. ಒಂದು ಕ್ಷಣದ ಅಜಾಗರೂಕತೆಗೆ ಅವರ ಕಾಲಿನ ಮೂಳೆ ಕಟ್ ಆಗಿದೆ. ನೂರು ರೂಪಾಯಿ ಪ್ರಯಾಣದ ದರ ಉಳಿಸಲು ಹೋಗಿ ಸವಾರನ ಎಡವಟ್ಟಿನಿಂದಾಗಿ, ಈಗ ಕಾರ್ತಿಕ್ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯುವಂತಾಗಿದೆ.
Rapido Bike ಕಂಪನಿಗೆ ಪತ್ನಿ ಮನವಿ:
ಸದ್ಯ ಕಾರ್ತಿಕ್ ಆಸ್ಪತ್ರೆಯಲ್ಲಿ ನರಳುತ್ತಿದ್ದು, ಅವರ ಪತ್ನಿ ಧರಣಿ ಅವರು Rapido Bike ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಕಂಪನಿಯು ಗಾಯಾಳು ಕಾರ್ತಿಕ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ. ದಿನಕ್ಕೆ ಹೆಚ್ಚು ಬುಕಿಂಗ್ ಪಡೆಯುವ ಮತ್ತು ಹಣ ಗಳಿಸುವ ದುರಾಸೆಯಿಂದ ರೈಡರ್ಗಳು ಗ್ರಾಹಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
ಗ್ರಾಹಕರ ಸುರಕ್ಷತೆ ಎಲ್ಲಿ? ಜನರ ಪ್ರಶ್ನೆ
ಈ ಘಟನೆಯು Rapido Bike ಬಳಸುವ ಗ್ರಾಹಕರಲ್ಲಿ ಭೀತಿ ಹುಟ್ಟಿಸಿದೆ. ಅತಿ ವೇಗವಾಗಿ ಚಲಿಸುವುದು ಮತ್ತು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಚಾಲನೆ ಮಾಡುವುದು ರೈಡರ್ಗಳಿಗೆ ಹವ್ಯಾಸವಾಗಿ ಬಿಟ್ಟಿದೆ. ಬದುಕಿದ್ದರೆ ಮನೆಗೆ ತೆವಳಿಕೊಂಡಾದರೂ ಹೋಗಬಹುದು, ಆದರೆ ಈ ರೀತಿ Rapido Bike ಬುಕ್ ಮಾಡಿ ಆಸ್ಪತ್ರೆ ಸೇರಿ ಜೀವನ ನರಕ ಮಾಡಿಕೊಳ್ಳುವುದು ಯಾರಿಗೂ ಬೇಡ ಎಂದು ಜನರು ಈ ಘಟನೆ ಕಂಡು ಆತಂಕ ವ್ಯಕ್ತಪಡಿಸುತ್ತಿದ್ದಾರೆ.


