ಧಾರವಾಡದ ಚಿಕ್ಕಮಲ್ಲಿಗವಾಡದಲ್ಲಿ, ಆರ್ಥಿಕ ಸಂಕಷ್ಟ ಹಾಗೂ ಕೌಟುಂಬಿಕ ಕಲಹದಿಂದ ನೊಂದ ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ತಂದೆ, ಇಬ್ಬರು ಮಕ್ಕಳು ಹಾಗೂ ಅಜ್ಜ ಮೃತಪಟ್ಟಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
ಧಾರವಾಡ (ನ.22): ಆರ್ಥಿಕ ಸಂಕಷ್ಟ ಹಾಗೂ ಕೌಟುಂಬಿಕ ಕಲಹದಿಂದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮ1ಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಮಲ್ಲಿಗವಾಡದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಗ್ರಾಮದ ವಿಠ್ಠಲ್ ಶಿಂಧೆ (80) ಅವರ ಪುತ್ರ ನಾರಾಯಣ ಶಿಂಧೆ (42), ಮಕ್ಕಳಾದ ಶಿವರಾಜ (12), ಶ್ರೀನಿಧಿ (10) ಮೃತರು. ನಾರಾಯಣ ಧಾರವಾಡದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನಿತ್ಯ ಮಕ್ಕಳನ್ನು ಶಾಲೆ ಬಿಟ್ಟು ತನ್ನ ಕೆಲಸಕ್ಕೆ ಹೋಗುತ್ತಿದ್ದರು. ಶುಕ್ರವಾರ ಸಹ ಬೆಳಗ್ಗೆ ಎಂದಿನಂತೆ ತನ್ನಿಬ್ಬರು ಮಕ್ಕಳೊಂದಿಗೆ ತಂದೆಯನ್ನು ಕರೆದುಕೊಂಡು ಹೋಗಿದ್ದ. ಆದರೆ, ಶಾಲೆಗೆ ಹೋಗುವ ಬದಲು ಬಾವಿಯಲ್ಲಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿ ಬಳಿಯ ಜಾನುವಾರು ಮೇಯಿಸುತ್ತಿದ್ದವರು ಮಧ್ಯಾಹ್ನ ಮೃತದೇಹಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಮವಸ್ತ್ರದಲ್ಲಿ ಮಕ್ಕಳ ಸಾವು:
ಮಕ್ಕಳಿಬ್ಬರು ಶಾಲಾ ಸಮವಸ್ತ್ರದಲ್ಲಿಯೇ ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ನಾರಾಯಣ ವಿವಿಧೆಡೆ ₹15 ಲಕ್ಷದಷ್ಟು ಸಾಲ ಮಾಡಿಕೊಂಡಿರುವ ಜತೆಗೆ ಇತ್ತೀಚೆಗೆ ಪತ್ನಿ ಜೊತೆ ಜಗಳ ಸಹ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ವಿಚಾರವಾಗಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಗ್ರಾಮೀಣ ಠಾಣೆ ಪೊಲೀಸರು ಘಟನೆಗೆ ಬರೀ ಆರ್ಥಿಕ ಸಂಕಷ್ಟವೋ ಅಥವಾ ಮತ್ತಾವ ಕಾರಣವಿದೆಯೇ ಎಂಬುದರ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

