ಕೋಲಾರ ಜಿಲ್ಲೆಯ ಮಾಲೂರು ಬಳಿ ಚೆನ್ನೈ-ಬೆಂಗಳೂರು ಕಾರಿಡಾರ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿದ್ರೆ ಮಂಪರಿನಿಂದ ನಿಯಂತ್ರಣ ತಪ್ಪಿದ ಕಾರು ಸೇತುವೆಯಿಂದ ಕೆಳಗೆ ಬಿದ್ದು, ಚೆನ್ನೈ ಮೂಲದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೋಲಾರ (ನ.24): ಚೆನ್ನೈ-ಬೆಂಗಳೂರು ಕಾರಿಡಾರ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಅಬ್ಬೇನಹಳ್ಳಿ ಬ್ರಿಡ್ಜ್‌ನಿಂದ ಕೆಳಗೆ ಬಿದ್ದ ಕಾರು!
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ಬ್ರಿಡ್ಜ್ ಬಳಿ ತಡರಾತ್ರಿ 2 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಚೆನ್ನೈ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ವರ್ಣಾ ಕಾರು, ಚಾಲಕನ ನಿದ್ರೆ ಮಂಪರಿನಿಂದ ನಿಯಂತ್ರಣ ತಪ್ಪಿದೆ. ವೇಗವಾಗಿದ್ದ ಕಾರು ಅಬ್ಬೇನಹಳ್ಳಿ ಬ್ರಿಡ್ಜ್ ಮೇಲಿಂದ ಕೆಳಗೆ ಬಿದ್ದಿದೆ.
ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತ ದುರ್ದೈವಿಗಳ ವಿವರ:
ಮೃತಪಟ್ಟ ನಾಲ್ವರೂ ಯುವಕರು ಚೆನ್ನೈ ಮೂಲದವರಾಗಿದ್ದು, ಅವರನ್ನು ಗೋಪಿ (38), ಗೌತಮ್ ರಮೇಶ್ (28), ಹರಿಹರನ್ (27), ಮತ್ತು ಜಯಶಂಕರ್ (30) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಸಂಬಂಧ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.


