ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ, ಪೋಷಕರ ವಿಚ್ಛೇದನ (ತಲಾಖ್) ಮತ್ತು ನಿರಂತರ ಕುಟುಂಬ ಕಲಹದಿಂದ ಮನನೊಂದ 26 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಬಂಧಿಕರೊಂದಿಗೆ ನಡೆದ ಜಗಳದ ನಂತರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೋಲಾರ: ಕುಟುಂಬದ ಒಳಗಿರುವ ಕಲಹ ಮತ್ತು ವೈಯಕ್ತಿಕ ಬದುಕಿನ ಒತ್ತಡ, ಅಪ್ಪ ಅಮ್ಮನ ವಿಚ್ಚೇದನದ ನೋವು ತಾಳಲಾರದ ಸ್ಥಿತಿಯಲ್ಲಿ 26 ವರ್ಷದ ಯುವಕನು ಆತ್ಮ*ಹತ್ಯೆಗೆ ಶರಣಾದ ದಾರುಣ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿ ನಡೆದಿದೆ. ರೆಹಮತ್ ನಗರ ಪ್ರದೇಶದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಈ ಪ್ರಕರಣ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ತಾಯಿಗೆ ತಂದೆ ನೀಡಿದ ತಲಾಖ್ ಹಿನ್ನಲೆಯಲ್ಲಿ ಮನನೊಂದ ಪುತ್ರ
ಮೃತನನ್ನು ಅಪ್ನಾನ್ (26) ಎಂದು ಗುರುತಿಸಲಾಗಿದೆ. ಕುಟುಂಬ ಕಲಹಗಳು, ತಾಯಿಗೆ ತಂದೆ ನೀಡಿದ ವಿಚ್ಛೇದನ (ತಲಾಖ್) ಮತ್ತು ಬಳಿಕ ತಂದೆಯ ಮರುಮದುವೆ. ಇವೆಲ್ಲವೂ ಆತನನ್ನು ಒಬ್ಬಂಟಿಯಾಗಿಸಿತು. ಮತ್ತು ಮಾನಸಿಕವಾಗಿ ಬಹಳ ನೊಂದಿದ್ದ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಪ್ನಾನ್‌ನ ತಾಯಿ ಜಬೀನ್ ತಾಜ್ ಮತ್ತು ತಂದೆ ಅಕ್ಬರ್ ಆಲಿ ನಡುವಿನ ವೈವಾಹಿಕ ಕಲಹ ವಿಚ್ಚೇದನದವರೆಗೆ ಬಂತು. ಬಳಿಕ ತಂದೆ ಅಕ್ಬರ್ ಆಲಿ ಅಧಿಕೃತವಾಗಿ ತಲಾಖ್ ನೀಡಿ ಹೊಸ ಮದುವೆ ಮಾಡಿಕೊಂಡಿದ್ದ. ಈ ಬೆಳವಣಿಗೆಗಳು ಮಗನ ಮನಸ್ಸಿನಲ್ಲಿ ಆಳವಾದ ಪರಿಣಾಮ ಬೀರಿದ ಪರಿಣಾಮವಾಗಿ ಅಪ್ನಾನ್ ಹಲವು ಬಾಋಇ ಈ ಬಗ್ಗೆ ಬೇಸರಗೊಂಡಿದ್ದ. ಸಂಬಂಧಿಕರೊಂದಿಗೆ ಇತ್ತೀಚೆಗೆ ನಡೆದ ಗಲಾಟೆಯೂ ಅಪ್ನಾನ್‌ನ ಮನಸ್ಸನ್ನು ಮತ್ತಷ್ಟು ಕುಗ್ಗಿಸಿತ್ತಂತೆ.
ಮನೆಯಲ್ಲಿ ನೇಣು ಬಿಗಿದು ಆತ್ಮ*ಹತ್ಯೆ
ಸಂಬಂಧಿಕರೊಂದಿಗೆ ಮಾತಿನ ಚಕಮಕಿ ನಡೆದ ಕೆಲವೇ ಗಂಟೆಗಳ ಬಳಿಕ ಅಪ್ನಾನ್ ಮನೆಯಲ್ಲಿ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಕುಟುಂಬದವರು ಗಮನಿಸುವ ವೇಳೆ ಆತನ ಪ್ರಾಣಪಕ್ಷ ಹಾರಿ ಹೋಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದೆ.
ಪೋಲೀಸ್ ಪ್ರಕರಣ ದಾಖಲು
ಈ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ. ತಲಾಖ್, ಕುಟುಂಬದ ಕಲಹ ಮತ್ತು ಇತ್ತೀಚಿನ ಗಲಾಟೆಗಳು ಆತ್ಮ*ಹತ್ಯೆಗೆ ಕಾರಣವಾಗಿದೆಯೇ ಎಂಬ ದಿಕ್ಕಿನಲ್ಲಿ ಪೊಲೀಸ್ ಇಲಾಖೆ ತನಿಖೆ ಮುಂದುವರೆಸಿದೆ.
ವೈವಾಹಿಕ ಕಲಹ, ಕುಟುಂಬ ಬಿರುಕು ಮತ್ತು ಭಾವನಾತ್ಮಕ ಒತ್ತಡಗಳು ಯಾವ ರೀತಿಯಾಗಿ ಯುವಕರ ಜೀವನವನ್ನು ಪ್ರಭಾವಿಸುತ್ತವೆ ಎಂಬುದಕ್ಕೆ ಈ ಘಟನೆ ಸಾಖ್ಷಿ. ಸಮಾಜದಲ್ಲಿ ಕುಟುಂಬ ಕಲಹಗಳ ಪರಿಣಾಮದಿಂದ ಮನನೊಂದು ಆತ್ಮ*ಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

