ಶಿವಮೊಗ್ಗದಲ್ಲಿ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೇವಸ್ಥಾನವೊಂದರ ಬಳಿ ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ (ಜೂ.27) : ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ ಡಾ.ಅಶ್ವಿನ್ ಹೆಬ್ಬಾರ್ ನನ್ನು ಕರಾವಳಿ ಪ್ರದೇಶದ ದೇವಸ್ಥಾನವೊಂದರ ಸಮೀಪ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ವೈದ್ಯೆ ವಿದ್ಯಾರ್ಥಿನಿ ಡಾ.ಅಶ್ವಿನ್ ಹೆಬ್ಬಾರ್ ಎಂಬಾತನ ವಿರುದ್ದ ಶಿವಮೊಗ್ಗ ಮಹಿಳಾ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾದ ನಂತರ ವೈದ್ಯ ತಲೆಮರೆಸಿಕೊಂಡಿದ್ದ. ಡಾ.ಅಶ್ವಿನ್ ಹೆಬ್ಬಾರ್ ಬಂಧಿಸಬೇಕು ಮತ್ತು ಅಮಾನತುಗೊಳಿಸಬೇಕು ಎಂದು ಲಾಯರ್ಸ್ ಗೀಲ್ಡ್ ಸರ್ಕಾರಕ್ಕೆ ಒತ್ತಾಯಿಸಿತ್ತು. ಅಲ್ಲದೆ, ವೈದ್ಯ ವಿದ್ಯಾರ್ಥಿಗಳು ಕೂಡ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯನ್ನು ಕೂಡ ನಡೆಸಿದ್ದರು.
ಪ್ರಕರಣ ಸಂಬಂಧ ಮಹಿಳಾ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಆರೋಪಿ ಡಾ.ಅಶ್ವಿನ್ ಹೆಬ್ಬಾರ್ ರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಶಿವಮೊಗ್ಗಕ್ಕೆ ಕರೆ ತರಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.


