ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ಬಂದೋಬಸ್ತ್ ವೇಳೆ, ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಅಧಿಕಾರಿ ಸ್ಥಳದಲ್ಲೇ ಕಣ್ಣೀರು ಹಾಕಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಶಿವಮೊಗ್ಗ(ಡಿ.18): ಕಾಂಗ್ರೆಸ್ ಪಕ್ಷದ ಪ್ರತಿಭಟನೆ ವೇಳೆ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಕೊರಳಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರವನ್ನೇ ಕಳ್ಳರು ಎಗರಿಸಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಬಿಜೆಪಿ ಕಚೇರಿ ಮುತ್ತಿಗೆ ವೇಳೆ ನಡೆದ ಕೈಚಳಕ:
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬದ ವಿರುದ್ಧದ ಪಿತೂರಿ ಕಾನೂನುಬಾಹಿರ ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದರು. ಈ ವೇಳೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಎಸ್‌ಐ ಅಮೃತಾ ಅವರು ಪ್ರತಿಭಟನಾಕಾರರನ್ನು ಬಂಧಿಸುವ ವೇಳೆ ಈ ಘಟನೆ ನಡೆದಿದೆ.
ಮಾಂಗಲ್ಯ ಸರ ಕಳೆದುಕೊಂಡು ಕಣ್ಣೀರಿಟ್ಟ ಅಧಿಕಾರಿ:
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಬಂದೋಬಸ್ತ್‌ನಲ್ಲಿ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಎಎಸ್ಐ ಆಗಿರುವ ಅಮೃತಾ ಬಂದೋಬಸ್ತ್ ಕರ್ತವ್ಯದಲ್ಲಿದ್ದರು. ಚಿನ್ನದ ಮಾಂಗಲ್ಯ ಸರ ಕಳುವಾಗಿರುವುದು ತಿಳಿಯುತ್ತಿದ್ದಂತೆಯೇ ಎಎಸ್‌ಐ ಅಮೃತಾ ಅವರು ಸ್ಥಳದಲ್ಲೇ ಕಣ್ಣೀರು ಹಾಕಿದ ಘಟನೆ ನಡೆಯಿತು. ಕರ್ತವ್ಯ ನಿರತ ಅಧಿಕಾರಿಯೊಬ್ಬರ ಸರವೇ ಕಳುವಾಗಿರುವುದು ಇಲಾಖೆಗೆ ಮತ್ತು ಸಹೋದ್ಯೋಗಿಗಳಿಗೆ ಭಾರೀ ಮುಜುಗರ ಹಾಗೂ ಆತಂಕ ತಂದಿದೆ. ಕೂಡಲೇ ಸ್ಥಳದಲ್ಲಿದ್ದ ಇತರೆ ಪೊಲೀಸ್ ಅಧಿಕಾರಿಗಳು ಅಮೃತಾ ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಖದೀಮರ ಪತ್ತೆಗೆ ಮುಂದಾದ ಪೊಲೀಸರು
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ. ಪ್ರತಿಭಟನೆಯ ವೇಳೆ ಸೆರೆಹಿಡಿಯಲಾದ ವಿಡಿಯೋ ತುಣುಕುಗಳು ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ. ಕಾಂಗ್ರೆಸ್ ಪ್ರತಿಭಟನೆಯ ಗದ್ದಲದ ನಡುವೆ ಈ ದುಷ್ಕೃತ್ಯ ಎಸಗಿದವರು ಯಾರು ಎಂಬುದು ಪೊಲೀಸರ ತನಿಖೆಯಿಂದಲೇ ತಿಳಿಯಬೇಕಿದೆ.


