ಮೆಟ್ರೋ ರೈಲುಗಳು ಹಾಗೂ ನಿಲ್ದಾಣಗಳಲ್ಲಿ ಮೊಬೈಲ್‌ಗಳಲ್ಲಿ ಮಹಿಳೆಯರ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಘಟನೆ ಸಂಬಂಧ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಮೇ.22): ಮೆಟ್ರೋ ರೈಲುಗಳು ಹಾಗೂ ನಿಲ್ದಾಣಗಳಲ್ಲಿ ಮೊಬೈಲ್‌ಗಳಲ್ಲಿ ಮಹಿಳೆಯರ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಘಟನೆ ಸಂಬಂಧ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವೈರಲ್‌ ವಿಡಿಯೋ ಬಗ್ಗೆ ‘ಕನ್ನಡಪ್ರಭ’ ಬುಧವಾರ ಸುದ್ದಿ ಪ್ರಕಟಿಸಿತ್ತು. ನೆಟ್ಟಿಗರು ಹಾಗೂ ಸಾರ್ವಜನಿಕ ವಲಯದಲ್ಲಿ ಈ ಕಿಡಿಗೇಡಿ ಕೃತ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬನಶಂಕರಿ ಠಾಣೆ ಪೊಲೀಸರು ‘ಮೆಟ್ರೋ ಚಿಕ್ಸ್‌’ ಇನ್ಸ್‌ಸ್ಟಾಗ್ರಾಮ್‌ ಖಾತೆದಾರನ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಈ ವಿಡಿಯೋ ಪೋಸ್ಟ್‌ ಮಾಡಿದ್ದ ಕಿಡಿಗೇಡಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ದೂರಿನಲ್ಲಿ ಏನಿದೆ?: ಬನಶಂಕರಿ ಪೊಲೀಸ್‌ ಠಾಣೆಯ ಪಿಎಸ್‌ಐ ಶಿವಶಂಕರ್‌ ಈ ಸಂಬಂಧ ದೂರು ನೀಡಿದ್ದಾರೆ. ಮೇ 5ರಂದು ಸಂಜೆ ಸಾಮಾಜಿಕ ಜಾಲತಾಣ ವೀಕ್ಷಿಸುವಾಗ ಇನ್ಸ್‌ಸ್ಟಾಗ್ರಾಮ್‌ ಆ್ಯಪ್‌ನ ಮೆಟ್ರೋ ಚಿಕ್ಸ್‌ ಎಂಬ ಖಾತೆಯಲ್ಲಿ ಮಹಿಳೆಯರ ವಿಡಿಯೋಗಳು ಕಂಡು ಬಂದವು. ಮೆಟ್ರೋ ರೈಲಿನಲ್ಲಿ ಸಂಚರಿಸುವ ಹಾಗೂ ನಿಲ್ದಾಣಗಳಲ್ಲಿ ನಡೆದು ಹೋಗುವ ಮಹಿಳೆಯರನ್ನು ಹಿಂಬಾಲಿಸಿ ಆ ಮಹಿಳೆಯರ ದೇಹದ ಹಿಂಭಾಗ ಹಾಗೂ ಮುಂಭಾಗವನ್ನು ವಿಡಿಯೋ ಚಿತ್ರೀಕರಣ ಮಾಡಿ ಆ ವಿಡಿಯೋವನ್ನು ಮೆಟ್ರೋ ಚಿಕ್ಸ್‌ ಎಂಬ ಖಾತೆಯಲ್ಲಿ ಅಪ್ಲೋಡ್‌ ಮಾಡಿರುವುದು ಕಂಡು ಬಂದಿದೆ. ಈ ಖಾತೆಯಲ್ಲಿ ಒಟ್ಟು 14 ವಿಡಿಯೋಗಳನ್ನು ಅಪ್ಲೋಡ್‌ ಮಾಡಲಾಗಿದೆ.

ಈ ರೀತಿಯ ವಿಡಿಯೋಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ ಮಹಿಳೆಯರ ಗೌರವಕ್ಕೆ ಧಕ್ಕೆ ತರಲಾಗಿದೆ. ಹೀಗಾಗಿ ಈ ಕಿಡಿಗೇಡಿ ಕೆಲಸ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಪ್ರಯಾಣಿಕರೇ ಎಚ್ಚರ! ಕಿಡಿಗೇಡಿಗಳ ಕಾಟ, 'ಮೆಟ್ರೋ ಚಿಕ್ಸ್' ವಿಡಿಯೋ

ಕಿಡಿಗೇಡಿ ವಿರುದ್ಧ ಕ್ರಮಕ್ಕೆ ಸಂಸದ ಪಿ.ಸಿ.ಮೋಹನ್‌ ಆಗ್ರಹ: ನಮ್ಮ ಮೆಟ್ರೋ ರೈಲುಗಳಲ್ಲಿ ರಹಸ್ಯವಾಗಿ ಮಹಿಳೆಯರ ವಿಡಿಯೋ ಸೆರೆ ಹಿಡಿದು ಮೆಟ್ರೋ ಚಿಕ್ಸ್‌ ಎಂಬ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್ಲೋಡ್‌ ಮಾಡಲಾಗಿದೆ. ಈ ಖಾತೆಯನ್ನು 5 ಸಾವಿರ ಮಂದಿ ಹಿಂಬಾಲಿಸುತ್ತಿದ್ದಾರೆ. ಈ ರೀತಿಯ ಕೃತ್ಯದಿಂದ ವ್ಯಕ್ತಿಯ ಖಾಸಗಿತನ ಹಾಗೂ ಘನತೆಗೆ ಧಕ್ಕೆಯಾಗಿದೆ. ಇದು ಗಂಭೀರ ಹಾಗೂ ಭಯಾನಕ ಪ್ರಕರಣವಾಗಿದ್ದು, ನಗರ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪಿ.ಸಿ.ಮೋಹನ್‌ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಆಗ್ರಹಿಸಿದ್ದಾರೆ.