ರಾಜ್ಯದಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಲ್‌ಕೆಜಿ ಯಿಂದ ಪಿಯುಸಿ ವರೆಗಿನ ಶಾಲಾ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ. ಚಳಿಗಾಲ ಮುಗಿಯುವವರೆಗೆ ತರಗತಿಗಳನ್ನು ಬೆಳಿಗ್ಗೆ 9.30ಕ್ಕೆ ಆರಂಭಿಸಲು ಆಯೋಗ ಸಲಹೆ ನೀಡಿದೆ.

ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಶಾಲೆಗೆ ಹೋಗುವ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್‌ಕೆಜಿ ರಿಂದ ಪಿಯುಸಿ ವರೆಗೆ ಕಲಿಕಾ ಸಮಯದ ಅವಧಿಯನ್ನು ತಾತ್ಕಾಲಿಕವಾಗಿ ಬದಲಾಯಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಮನವಿ ಸಲ್ಲಿಸಿದೆ.

ಬೆಳಿಗ್ಗೆ 9.30ಕ್ಕೆ ಪಾಠ ಆರಂಭಿಸುವಂತೆ ಸಲಹೆ

ಚಳಿಗಾಲದ ತೀವ್ರತೆ ಸಂಪೂರ್ಣವಾಗಿ ಕಡಿಮೆಯಾಗುವವರೆಗೆ, ಪ್ರತಿದಿನ ಬೆಳಿಗ್ಗೆ 9.30ಕ್ಕೆ ಪಾಠ, ಪ್ರವಚನ ಮತ್ತು ಬೋಧನಾ ಚಟುವಟಿಕೆಗಳನ್ನು ಆರಂಭಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯೋಗ ಮನವಿ ಮಾಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧಿಕೃತ ಪತ್ರ ಬರೆದಿದೆ.

ರಾಜ್ಯದಲ್ಲಿ ತೀವ್ರ ಚಳಿ – 14 ಜಿಲ್ಲೆಗಳಲ್ಲಿ ಶೀತಗಾಳಿ

ಪತ್ರದಲ್ಲಿ ಉಲ್ಲೇಖಿಸಿದಂತೆ, ರಾಜ್ಯದ ವಿವಿಧ ಭಾಗಗಳಲ್ಲಿ ತಾಪಮಾನವು ಸಹಜ ಮಟ್ಟಕ್ಕಿಂತ ಬಹಳಷ್ಟು ಇಳಿಕೆಯಾಗಿದೆ. ವಿಶೇಷವಾಗಿ 14 ಜಿಲ್ಲೆಗಳಲ್ಲಿ ಶೀತಗಾಳಿ ಬೀಸುತ್ತಿರುವುದರಿಂದ ಚಳಿಯ ತೀವ್ರತೆ ಹೆಚ್ಚಾಗಿದೆ. ಹಲವು ಜಿಲ್ಲೆಗಳಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಇವೆಲ್ಲವನ್ನೂ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಮಕ್ಕಳು ಬೆಳಿಗ್ಗೆ ಶಾಲೆಗೆ ತೆರಳುವ ಸಮಯದಲ್ಲಿ ಚಳಿ ಹೆಚ್ಚಾಗಿರುತ್ತದೆ. ಉಷ್ಣಾಂಶ ಕಡಿಮೆಯಾಗಿರುವುದರಿಂದ ಈ ಅವಧಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ.

ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಗೆ ಆದ್ಯತೆ ಅಗತ್ಯ

ಚಳಿಯ ತೀವ್ರತೆ ಹೆಚ್ಚಿರುವ ಸಂದರ್ಭಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯ. ವಿಶೇಷವಾಗಿ ಪುಟ್ಟ ಮಕ್ಕಳಾದ ಎಲ್‌ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ತರಗತಿ ಮಕ್ಕಳಿಗೆ ಚಳಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಯೋಗ ಗಮನಿಸಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಶಾಲೆಗಳ ಕಲಿಕಾ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರ್ಕಾರಕ್ಕೆ ಮನವಿ ಮಾಡಿದೆ. ಚಳಿಗಾಲ ಮುಗಿಯುವವರೆಗೆ ಈ ಕ್ರಮ ಜಾರಿಗೊಳಿಸುವುದರಿಂದ ಮಕ್ಕಳ ಆರೋಗ್ಯ ಮತ್ತು ಕಲ್ಯಾಣವನ್ನು ರಕ್ಷಿಸಲು ಸಹಕಾರಿಯಾಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.