ನಟ ವಿಷ್ಣುವರ್ಧನ್ ಅಂತಿಮ ಸಂಸ್ಕಾರವನ್ನು ಕಂಠೀರವ ಸಮಾಧಿ ಬದಲು, ಹಿರಿಯ ನಟ ಬಾಲಣ್ಣ ಕುಟುಂಬದ ಒಡೆತನದಲ್ಲಿದ್ದ ಅಭಿಮಾನ್ ಸ್ಟುಡಿಯೋದ ಜಾಗದಲ್ಲಿ ಮಾಡಲಾಯ್ತು. ಅಲ್ಲಿಂದ ಮುಂದೆ ಕಂಠೀರವ ಸ್ಟುಡಿಯೋದಲ್ಲಿ ಜಾಗ ಕೇಳಲಾಯ್ತು. ಆದರೆ ಬದಲಾದ ಸರ್ಕಾರಗಳು…

ನಟ ವಿಷ್ಣುವರ್ಧನ್ (Vishnuvardhan) ಅಭಿಮಾನಿಗಳ ಕನಸು ನನಸಾಗಿಲ್ಲ. ಅಭಿಮಾನ್ ಸ್ಟುಡಿಯೋದಲ್ಲಿ (Abhiman Studio) ಚಿಕ್ಕದಾಗಿ ಕಟ್ಟಿದ್ದ ದಿವಂಗತ ಮೇರನಟ ವಿಷ್ಣುವರ್ಧನ್ ಸಮಾಧಿಯನ್ನು ಇಂದು ಬೆಳಗಿನ ಜಾವ ನೆಲಸಮ ಮಾಡಲಾಗಿದೆ. ಈ ಮೂಲಕ ಅಲ್ಲಿ ವಿಷ್ಣುವರ್ಧನ್ ಸಮಾಧಿಯನ್ನು ಅದ್ದೂರಿಯಾಗಿ ಕಟ್ಟಿ ವೈಭವದಿಂದ ಉದ್ಘಾಟನೆ ಮಾಡುವ ನಟ ವಿಷ್ಣುವರ್ಧನ್ ಅಭಿಮಾನಿಗಳ ಕನಸು ನುಚ್ಚುನೂರಾಗಿದೆ. ಇಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎಂಬ ಚರ್ಚೆ ಇಲ್ಲ, ಬದಲಿಗೆ ಹೀಗೇಕಾಯ್ತು ಎಂಬ ಪ್ರಶ್ನೆ ಅಷ್ಟೇ! ಉತ್ತರ ಸಿಗಬಹುದೇ?

ಹೌದು, ಡಾ ರಾಜ್‌ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಷ್ ಹಾಗೂ ಶಂಕರ್‌ ನಾಗ್ ಅವರನ್ನು ಕನ್ನಡ ಚಿತ್ರರಂಗದ ಮೇರ ನಟರು ಎಂದು ಕರೆಯಲಾಗುತ್ತದೆ. ಕಂಠೀರವ ಸ್ಟುಡಿಯೋ ಬಳಿ ಡಾ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಅಂಬರೀಷ್ ಅವರುಗಳ ಸಮಾಧಿ ಇದೆ. ಆದರೆ, ನಟ ವಿಷ್ಣುವರ್ಧನ್ ಸಮಾಧಿ ಅಲ್ಲಿಲ್ಲ. ಅದಕ್ಕೆ ಕಾರಣ ಏನು? ಯಾರಿಂದ ಅಲ್ಲಿ ಸಮಾಧಿ ನಿರ್ಮಿಸಲು ಸಾಧ್ಯವಾಗಿಲ್ಲ? ಈ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಮತ್ತೆ ಬರೀ ಪ್ರಶ್ನೆಗಳೇ ಏಳುತ್ತವೆ!

ಹೌದು, ಮೊಟ್ಟಮೊದಲನೆಯದಾಗಿ.. ನಟ ವಿಷ್ಣುವರ್ಧನ್ ಅಂತಿಮ ಸಂಸ್ಕಾರವನ್ನು ಕಂಠೀರವ ಸಮಾಧಿ ಬದಲು, ಹಿರಿಯ ನಟ ಬಾಲಣ್ಣ ಕುಟುಂಬದ ಒಡೆತನದಲ್ಲಿದ್ದ ಅಭಿಮಾನ್ ಸ್ಟುಡಿಯೋದ ಜಾಗದಲ್ಲಿ ಮಾಡಲಾಯ್ತು. ಅಲ್ಲಿಂದ ಮುಂದೆ ಕಂಠೀರವ ಸ್ಟುಡಿಯೋದಲ್ಲಿ ಜಾಗ ಕೇಳಲಾಯ್ತು. ಆದರೆ ಬದಲಾದ ಸರ್ಕಾರಗಳು ಅಥವಾ ಬದಲಾದ ಅಭಿಮಾನಿಗಳ ಭಾವನೆಗಳ ಕಾರಣಕ್ಕೋ ಏನೋ, ಅಲ್ಲಿ ಕಂಠೀರವ ಸ್ಟುಡಿಯೋದ ಸುತ್ತಮುತ್ತ ದಿವಂಗತ ನಟ ವಿಷ್ಣುವರ್ಧನ್ ಅವರ ಸಮಾಧಿ ನಿರ್ಮಾಣ ಸಾಧ್ಯವಾಗಿಲ್ಲ. ಇದೀಗ ಅಭಿಮಾನ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನು ನೆಲಸಮ ಮಾಡಲಾಗಿದೆ.

ಇಂದು (08 August 2025) ಬೆಳಗಿನ ಜಾವ ಮೂರು ಗಂಟೆಗೆ ಬಾಲಣ್ಣ ಕುಟುಂಬ ಸಮಾಧಿ ತೆರವು ಕಾರ್ಯಾಚರಣೆ ಮಾಡಿದೆ. ಇದನ್ನು ಯಾರಿಗೂ ತಿಳಿಯದ ಹಾಗೆ ಮಾಡಲಾಗಿದೆ. ಕಾರಣ, ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೊತ್ತಾದರೆ ದೊಡ್ಡ ಸಮಸ್ಯೆ ಆಗುತ್ತೆ ಎಂದು ರಾತ್ರೋ ರಾತ್ರಿ ಸಮಾಧಿ ತೆರವು ಮಾಡಲಾಗಿದೆ ಎನ್ನಲಾಗಿದೆ. ಈಗ ಅಲ್ಲಿರುವ ಅಭಿಮಾನಿಗಳಿಗೆ ಪೊಲೀಸರು ಯಾವುದೇ ಗಲಾಟೆ ಮಾಡದಂತೆ ಹೊರಹೋಗಲು ಸೂಚಿಸುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ, ಸಮಾಧಿ ಇದ್ದ ಜಾಗದಲ್ಲಿ ಪ್ರೊಟೆಸ್ಟ್ ಮಾಡುತ್ತಿರುವವರನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ. 'ಯಾವುದೇ ಕಾರಣಕ್ಕೂ ಅಭಿಮಾನ್ ಸ್ಟುಡಿಯೋ ಎದುರು ಧರಣಿ ಮಾಡೋ ಹಾಗಿಲ್ಲ' ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗುತ್ತಿದೆ. 'ಅಂಥ ಮೇರುನಟ ವಿಷ್ಣುವರ್ಧನ್ ಅವರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಒಂದು ಸಮಾಧಿ ಇಲ್ಲ. ಅದಕ್ಕೆ ಕೊಡುವಷ್ಟು ಜಾಗವಿಲ್ಲವೇ?' ಎಂದು ಪ್ರಶ್ನೆ ಕೇಳುತ್ತ ಡಾ ವಿಷ್ಣುವರ್ಧನ್ ಅಭಿಮಾನಿಗಳು ಕೊರಗುತ್ತಿದ್ದಾರೆ.