- Home
- Entertainment
- Cine World
- ದೇವಸ್ಥಾನಕ್ಕೆ ಹೋಗಿ ಅತ್ತು ಕೂಗಿ ಮರಳಿದ್ದೆ, ಮಗಳ ಸಾವಿನ ನೋವು ಬಿಚ್ಚಿಟ್ಟ ಗಾಯಕಿ ಚಿತ್ರ
ದೇವಸ್ಥಾನಕ್ಕೆ ಹೋಗಿ ಅತ್ತು ಕೂಗಿ ಮರಳಿದ್ದೆ, ಮಗಳ ಸಾವಿನ ನೋವು ಬಿಚ್ಚಿಟ್ಟ ಗಾಯಕಿ ಚಿತ್ರ
ದೇವಸ್ಥಾನಕ್ಕೆ ಹೋಗಿ ಅತ್ತು ಕೂಗಿ ಮರಳಿದ್ದೆ, ಮಗಳ ಸಾವಿನ ನೋವು ಬಿಚ್ಚಿಟ್ಟ ಗಾಯಕಿ ಚಿತ್ರ, ನನಗೆ ವಾಪಸ್ ಬರಲು ಇಷ್ಟವಿರಲಿಲ್ಲ. ಯಾರ ಭೇಟಿಗೂ ಇಷ್ಟವಿರಲಿಲ್ಲ. ಹಾಡು ನಿಲ್ಲಿಸಿದ್ದೆ. ಯಾರಿಗೆ ನೋವು ಮಾಡಿದ್ದೇ ನಾನು? ಕೆಎಸ್ ಚಿತ್ರ ನೋವು ಎಂತವರ ಕಣ್ಣಾಲಿ ತೇವಗೊಳಿಸಲಿದೆ.

ಮಗಳ ಸಾವಿನ ನೋವಿನ ಕ್ಷಣ
ಕನ್ನಡಿಗರು ಸೇರಿದಂತೆ ಕೋಟ್ಯಂತರ ಜನರ ಪ್ರೀತಿಯ ಗಾಯಕಿ ಕೆ.ಎಸ್. ಚಿತ್ರಾ ಹಾಡುಗಳು ಜನಮಾನಸದಲ್ಲಿ ಅಚ್ಚೊತ್ತಿದೆ. ಸುಮಧುರ ಧ್ವನಿ ಕೇಳದೇ ಹಲವರ ದಿನ ಪೂರ್ಣಗೊಳ್ಳುವುದಿಲ್ಲ. ಸಾವಿರಾರು ಹಾಡು ಹಾಡಿರುವ ಚಿತ್ರ ಬದುಕಿನಲ್ಲಿನ ನೋವು ಮಾತ್ರ ಯಾರಿಗೂ ಬೇಡ. ಮುದ್ದಿನ ಮಗಳ ದುರಂತ ಸಾವು 15 ವರ್ಷ ಉರುಳಿದರೂ ಚೈತ್ರಾ ಮನಸ್ಸಿನಿಂದ ಮಾಸುತ್ತಿಲ್ಲ. 2011ರಲ್ಲಿ ದುಬೈನ ವಿಲ್ಲಾವೊಂದರ ಸ್ವಿಮ್ಮಿಂಗ್ ಪೂಲ್ನಲ್ಲಿ ಬಿದ್ದು ಅವರ 9 ವರ್ಷದ ಮಗಳು ನಂದನಾ ಮೃತಪಟ್ಟಿದ್ದಳು. ಆ ಆಘಾತದಿಂದ ತಾನು ಹೇಗೆ ಹೊರಬಂದೆ, ದೇವಸ್ಥಾನಕ್ಕೆ ಹೋಗುವ ಮನಸ್ಸು ಕೂಡ ಇರಲಿಲ್ಲ ಎಂಬ ನೋವಿನ ಕ್ಷಣಗಳ ಬಗ್ಗೆ ಚಿತ್ರಾ ಇದೀಗ ಮಾತನಾಡಿದ್ದಾರೆ.
ಲತಾಜಿ ಫೋನ್ ಮಾಡಿದ್ದರು
ಮಗಳ ಸಾವಿನ ಬಳಿಕ ನನಗೆ ಜೀವನವೇ ಸಾಕಾಗಿತ್ತು. ನನ್ನ ಪ್ರೀತಿಯ ಮಗಳು ನನ್ನ ಕಣ್ಣ ಮುಂದೆ ಮೃತಪಟ್ಟರೆ ಯಾವ ತಾಯಿಗೆ ಸಹಿಸಲು ಸಾಧ್ಯ. ನಾನು ಮ್ಯೂಸಿಕ್ ನಿಲ್ಲಿಸಿದ್ದೆ. ಯಾವ ಕಾರ್ಯಕ್ರಮಕ್ಕೂ ಹೋಗುತ್ತಿರಲಿಲ್ಲ. ದೇವಸ್ಥಾನದಿಂದ ದೂರ ಉಳಿದೆ. ಯಾವ ದೇವರೂ ನನ್ನ ನೋವಿಗೆ ಸ್ಪಂದಿಸಲಿಲ್ಲ. ಅದೇ ಸಮಯದಲ್ಲಿ ನನಗೆ ಲತಾ ಜಿ ಹೆಸರಿನಲ್ಲಿ ಒಂದು ಪ್ರಶಸ್ತಿ ಬಂತು. ಹೈದರಾಬಾದ್ಗೆ ಹೋಗಿ ಅದನ್ನು ಸ್ವೀಕರಿಸಬೇಕಿತ್ತು. ಆದರೆ ಹೊರಗೆ ಹೋಗುವ ಸ್ಥಿತಿಯಲ್ಲಿ ನಾನಿರಲಿಲ್ಲ. ಆಗ ಲತಾ ಜಿ ಅವರೇ ನನಗೆ ಫೋನ್ ಮಾಡಿ, 'ನೀನು ಬರಲೇಬೇಕು' ಎಂದು ಹೇಳಿದರು. ಪರಿಚಯ ಇರುವವರು, ಇಲ್ಲದವರು ಎಷ್ಟೋ ಜನ ಬಂದು ನನಗೆ ಕೌನ್ಸೆಲಿಂಗ್ ಮಾಡಿದ್ದರು" ಎಂದು ಚಿತ್ರಾ ನೆನಪಿಸಿಕೊಂಡರು.
ಮತ್ತೆ ಹಾಡಲು ಶುರು ಮಾಡಿದೆ
ಬಹಳ ದೊಡ್ಡ ಗ್ಯಾಪ್ ನಂತರ ನಾನು ಮತ್ತೆ ಹಾಡಲು ಶುರುಮಾಡಿದ್ದು ರಾಜಾ ಸರ್ (ಇಳಯರಾಜ) ಅವರ ಕಾರ್ಯಕ್ರಮದಲ್ಲಿ. 'ನನಗೆ ಹಾಡಲು ಆಗುವುದಿಲ್ಲ' ಎಂದು ನಾನು ರಾಜಾ ಸರ್ಗೆ ಹೇಳಿದ್ದೆ. ಆದರೆ ಅವರು, 'ನೀನು ಬರದಿದ್ದರೆ ನಾನು ಈ ಕಾರ್ಯಕ್ರಮವನ್ನೇ ಕ್ಯಾನ್ಸಲ್ ಮಾಡುತ್ತೇನೆ' ಎಂದರು. ಆಗಷ್ಟೇ ಅವರ ಪತ್ನಿ ತೀರಿಕೊಂಡು ಮೂರು ತಿಂಗಳಾಗಿತ್ತು. 'ನನ್ನ ಜೊತೆ 33 ವರ್ಷ ಬದುಕಿದವಳು ಹೊರಟುಹೋದಳು, ಆದರೂ ನಾನು ಕಾರ್ಯಕ್ರಮಕ್ಕೆ ಬಂದಿಲ್ಲವೇ? ನೀನು ಹೀಗೆ ಯೋಚಿಸಬಾರದು, ನೀನು ಬರಬೇಕು' ಎಂದು ಧೈರ್ಯ ತುಂಬಿದರು" ಎಂದು ಕೆ.ಎಸ್. ಚಿತ್ರಾ ಸೇರಿಸಿದರು. ಧನ್ಯಾ ವರ್ಮಾ ಅವರೊಂದಿಗಿನ ಸಂದರ್ಶನದಲ್ಲಿ ಚಿತ್ರಾ ಈ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ದೇವರಿಂದ ದೂರ ಸರಿದೆ
ಆ ಸಮಯದಲ್ಲಿ ತಾನು ದೇವರಿಂದ ದೂರ ಸರಿದಿದ್ದೆ ಎಂದೂ ಚಿತ್ರಾ ಹೇಳಿದರು. "ಹೀಗೆಲ್ಲಾ ಆಗಲು ನಾನು ಏನು ತಪ್ಪು ಮಾಡಿದ್ದೆ? ಯಾರಿಗಾದರೂ ದ್ರೋಹ ಬಗೆದಿದ್ದೇನಾ? ರಿಯಾಲಿಟಿ ಶೋಗಳಲ್ಲಿ ಮಕ್ಕಳಿಗೆ ಏನಾದರೂ ಹೇಳಿ ನೋವು ಮಾಡಿದ್ದೇನಾ? ಅವರ ಶಾಪವೇ ಹೀಗಾಯಿತಾ? ಹೀಗೆಲ್ಲಾ ಮನಸ್ಸು ಎಲ್ಲೆಲ್ಲೋ ಹೋಗುತ್ತಿತ್ತು. ನಮ್ಮ ಹಣೆಬರಹದಲ್ಲಿ ಬರೆದಿದ್ದು ಆಗಿಯೇ ಆಗುತ್ತದೆ. ಯಾವ ದೇವರನ್ನು ಬೇಡಿದರೂ ಪರೀಕ್ಷೆಗಳು ಇದ್ದೇ ಇರುತ್ತವೆ. ಅದನ್ನು ಎದುರಿಸುವ ಶಕ್ತಿಯನ್ನು ಮಾತ್ರ ದೇವರು ಕೊಡುತ್ತಾನೆ. ಯಾರದ್ದೋ ಸಂದೇಶದ ರೂಪದಲ್ಲಿ ಅಥವಾ ಯಾವುದಾದರೂ ದಾರಿಯಲ್ಲಿ ನಮಗೆ ಸಹಾಯ ಕಳುಹಿಸುತ್ತಾನೆ ಎಂದು ಚೈತ್ರಾ ನೋವು ತೋಡಿಕೊಂಡಿದ್ದಾರೆ
ಯಾರನ್ನೂ ನೋಡೋದು ಬೇಡ
ದೇವಸ್ಥಾನಕ್ಕೆ ಹೋಗಬೇಕೆಂಬ ಆಲೋಚನೆಯೇ ಬರಲಿಲ್ಲ. ಯಾವ ದೇವಸ್ಥಾನಕ್ಕೂ ಹೋಗುವುದು ಬೇಡ, ಯಾರನ್ನೂ ನೋಡೋದು ಬೇಡ ಅನ್ನಿಸಿತ್ತು. ಆ ಸಮಯದಲ್ಲಿ ಒಂದು ಕಾರ್ಯಕ್ರಮಕ್ಕಾಗಿ ತ್ರಿಶೂರ್ಗೆ ಹೋಗಿದ್ದೆ. ಅಲ್ಲಿ ಉಳಿದುಕೊಳ್ಳಲು ರೂಮ್ ಹುಡುಕುತ್ತಾ ಹುಡುಕುತ್ತಾ ಗುರುವಾಯೂರು ದೇವಸ್ಥಾನದ ಬಳಿಯೇ ಬಂದು ನಿಂತೆ. ಆಗ ದೇವರು ನನ್ನನ್ನು ವಾಪಸ್ ಕರೆದ ಅಂತ ನನಗೆ ಅನ್ನಿಸಿತು. ಅಂದು ದೇವಸ್ಥಾನಕ್ಕೆ ಹೋಗಿ, ಹೊಟ್ಟೆತುಂಬಾ ಅತ್ತು ವಾಪಸ್ ಬಂದೆ" ಎಂದು ಚಿತ್ರಾ ತಮ್ಮ ಭಾವನಾತ್ಮಕ ಕ್ಷಣವನ್ನು ವಿವರಿಸಿದರು.
ಅವರ ಜೀವನವೂ ಕುಸಿಯುತ್ತದೆ
ಹೀಗೆ ಮನೆಯೊಳಗೆ ಮುದುಡಿ ಕುಳಿತರೆ, ನಮ್ಮ ಜೊತೆಗಿರುವವರ ಜೀವನ ಹಾಳಾಗುತ್ತದೆಯೇ ಹೊರತು ನಾವು ಕಳೆದುಕೊಂಡಿದ್ದು ವಾಪಸ್ ಬರುವುದಿಲ್ಲ. ಇದೊಂದು ಅರಿವು ಅಷ್ಟೇ. ನನ್ನನ್ನು ನಂಬಿ ಸಾಕಷ್ಟು ಜನರಿದ್ದಾರೆ. ನಾನು ಕುಸಿದು ಬಿದ್ದರೆ ಅವರ ಜೀವನವೂ ಕುಸಿಯುತ್ತದೆ ಅಲ್ಲವೇ? ನಾವು ಏನೇನೋ ಕನಸು ಕಾಣುತ್ತೇವೆ. ಅದನ್ನು ಮಾಡಬೇಕು, ಇದನ್ನು ಮಾಡಬೇಕು ಅಂತೆಲ್ಲಾ. ಆದರೆ ಒಂದೇ ಒಂದು ಕ್ಷಣ ಸಾಕು, ಎಲ್ಲವೂ ತಲೆಕೆಳಗಾಗಲು. ದೇವರ ನಿರ್ಧಾರವೇ ಅಂತಿಮ. ಅಂದಿನಿಂದ ನಾನು ಪ್ಲಾನ್ ಮಾಡುವುದನ್ನೇ ಬಿಟ್ಟುಬಿಟ್ಟೆ. ಏನು ಬರುತ್ತದೋ ಅದನ್ನು ಆಗಲೇ ಎದುರಿಸುವುದು. ನಾಳೆಗೆ ಎಂದು ಏನನ್ನೂ ಇಡುವುದರಲ್ಲಿ ಅರ್ಥವಿಲ್ಲ. ಕನಸು ಕಂಡುಕೊಂಡು ಕೂತರೆ ಪ್ರಯೋಜನವಿಲ್ಲ" ಎಂದು ಚಿತ್ರಾ ಮಾತು ಮುಗಿಸಿದರು.
ಅವರ ಜೀವನವೂ ಕುಸಿಯುತ್ತದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

