- Home
- Sports
- Cricket
- 5ನೇ ಟೆಸ್ಟ್‌ನಿಂದ ರಿಷಭ್ ಪಂತ್ ಅಧಿಕೃತವಾಗಿ ಔಟ್; ಭಾರತ ತಂಡ ಕೂಡಿಕೊಂಡ ಚೆನ್ನೈ ಮೂಲದ ವಿಕೆಟ್ ಕೀಪರ್ ಬ್ಯಾಟರ್!
5ನೇ ಟೆಸ್ಟ್‌ನಿಂದ ರಿಷಭ್ ಪಂತ್ ಅಧಿಕೃತವಾಗಿ ಔಟ್; ಭಾರತ ತಂಡ ಕೂಡಿಕೊಂಡ ಚೆನ್ನೈ ಮೂಲದ ವಿಕೆಟ್ ಕೀಪರ್ ಬ್ಯಾಟರ್!
ಮ್ಯಾಂಚೆಸ್ಟರ್: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಇಂಗ್ಲೆಂಡ್ ಎದುರಿನ ಕೊನೆಯ ಟೆಸ್ಟ್ ಪಂದ್ಯದಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದೀಗ ಚೆನ್ನೈ ಮೂಲದ ಕ್ರಿಕೆಟಿಗ ಭಾರತ ತಂಡ ಕೂಡಿಕೊಂಡಿದ್ದಾರೆ.

ಭಾರತ ಟೆಸ್ಟ್ ತಂಡದ ಉಪನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಇದೀಗ ಇಂಗ್ಲೆಂಡ್ ಎದುರಿನ ಐದನೇ ಹಾಗೂ ಕೊನೆಯ ಟೆಸ್ಟ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ.
27 ವರ್ಷದ ಪಂತ್. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ದಿನ ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ಚೆಂಡು ಕಾಲಿಗೆ ಬಡಿದು ಗಾಯಗೊಂಡಿದ್ದರು. ಮೊದಲ ದಿನ ರಿಟೈರ್ಟ್ ಹರ್ಟ್ ಆಗಿದ್ದ ಪಂತ್, ಎರಡನೇ ದಿನ ಬ್ಯಾಟಿಂಗ್ ಮಾಡಲಿಳಿದು ಅರ್ಧಶತಕ ಸಿಡಿಸಿದ್ದರು.
ಇಂಗ್ಲೆಂಡ್ ಎದುರಿನ ಸರಣಿಯುದ್ದಕ್ಕೂ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದ ರಿಷಭ್ ಪಂತ್, ಮೊದಲ 4 ಟೆಸ್ಟ್‌ನ ಏಳು ಇನ್ನಿಂಗ್ಸ್‌ಗಳಿಂದ 68.42ರ ಬ್ಯಾಟಿಂಗ್ ಸರಾಸರಿಯಲ್ಲಿ 479 ರನ್ ಸಿಡಿಸಿದ್ದರು.
ರಿಷಭ್ ಪಂತ್, ಭಾರತ ಪರ ಮೂರನೇ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದು, ಎರಡು ಶತಕ ಹಾಗೂ ಮೂರು ಅರ್ಧಶತಕ ಸಿಡಿಸಿದ್ದರು. ಪಂತ್ ಅನುಪಸ್ಥಿತಿ ಐದನೇ ಪಂದ್ಯದಲ್ಲಿ ಭಾರತ ತಂಡವನ್ನು ಕಾಡುವ ಸಾಧ್ಯತೆಯಿದೆ.
ಇದೀಗ ಜುಲೈ 31ರಿಂದ ಲಂಟಡನ್‌ನ ದಿ ಓವಲ್ ಮೈದಾನದಲ್ಲಿ ಆರಂಭವಾಗಲಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಚೆನ್ನೈ ಮೂಲದ ನಾರಾಯಣ್ ಜಗದೀಶನ್ ಅವರು ಪಂತ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡ ಕೂಡಿಕೊಂಡಿದ್ದಾರೆ.
ಎನ್ ಜಗದೀಶನ್ ಇದುವರೆಗೂ 52 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 47.50 ಬ್ಯಾಟಿಂಗ್ ಸರಾಸರಿಯಲ್ಲಿ 10 ಶತಕ ಹಾಗೂ 14 ಅರ್ಧಶತಕ ಸಹಿತ 3,373 ರನ್ ಸಿಡಿಸಿದ್ದಾರೆ.
ಜಗದೀಶನ್ ಇದೀಗ ಭಾರತ ತಂಡ ಕೂಡಿಕೊಂಡಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ. ಧ್ರುವ್ ಜುರೇಲ್, ಕೊನೆಯ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
5 ಪಂದ್ಯಗಳ ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ಇದೀಗ 4 ಪಂದ್ಯಗಳು ಮುಕ್ತಾಯವಾಗಿದ್ದು, ಆತಿಥೇಯ ಇಂಗ್ಲೆಂಡ್ 2-1ರ ಮುನ್ನಡೆ ಸಾಧಿಸಿದೆ. ಕೊನೆಯ ಟೆಸ್ಟ್ ಗೆದ್ದರಷ್ಟೇ ಭಾರತ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಸಾಧ್ಯವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
