- Home
- Sports
- Cricket
- Dhoni Turns 44: ಸಚಿನ್ ಮೊದಲ ಗುರು, ಧೋನಿ ಮ್ಯಾಚ್ ನೋಡಲ್ಲ ಅಮ್ಮ: ಕ್ಯಾಪ್ಟನ್ ಕೂಲ್ ಕುರಿತಾದ ಟಾಪ್ 7 ಇಂಟ್ರೆಸ್ಟಿಂಗ್ ಸಂಗತಿಗಳಿವು!
Dhoni Turns 44: ಸಚಿನ್ ಮೊದಲ ಗುರು, ಧೋನಿ ಮ್ಯಾಚ್ ನೋಡಲ್ಲ ಅಮ್ಮ: ಕ್ಯಾಪ್ಟನ್ ಕೂಲ್ ಕುರಿತಾದ ಟಾಪ್ 7 ಇಂಟ್ರೆಸ್ಟಿಂಗ್ ಸಂಗತಿಗಳಿವು!
ಬೆಂಗಳೂರು: ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 44ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಾವಿಂದು ಧೋನಿ ಕುರಿತಾದ ಟಾಪ್ 7 ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

1. ಧೋನಿ ಭಾರತಕ್ಕೆ ಸಿಕ್ಕಿದ್ದು ಹೇಗೆ?
2003ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ಸಣ್ಣ ನಗರಗಳಲ್ಲಿನ ಪ್ರತಿಭಾನ್ವಿತ ಆಟಗಾರರನ್ನು ಹುಡುಕುವ ಪ್ರಯತ್ನ ಆರಂಭಿಸಿತು. ಈ ಸಂದರ್ಭದಲ್ಲಿ ಧೋನಿ ಜಾರ್ಖಂಡ್‌ನ ಜೆಮ್ಶೆಡ್‌ಪುರದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದರು. ಇದನ್ನು ಗಮನಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರಕಾಶ್ ಪೊಡ್ಡರ್ ಎನ್ನುವವರು ಧೋನಿ ಪ್ರತಿಭೆಯನ್ನು ಗುರುತಿಸಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಶಿಫಾರಸು ಮಾಡಿದರು. ಆಮೇಲೆ ಧೋನಿ ಭಾರತ ಕಂಡ ದಿಗ್ಗಜ ಕ್ರಿಕೆಟಿಗನಾಗಿ ಬೆಳೆದು ನಿಂತರು.
2. ಧೋನಿಯ ಮೊದಲ ಗುರು ಸಚಿನ್ ತೆಂಡುಲ್ಕರ್:
ತಾವು ಸಚಿನ್ ತೆಂಡುಲ್ಕರ್ ಆಟವನ್ನು ನೋಡುತ್ತಾ ಕ್ರಿಕೆಟ್ ಆಡಲು ಶುರಮಾಡಿದೆ ಎಂದು ಎಂ ಎಸ್ ಧೋನಿ ಹಲವಾರು ಬಾರಿ ಹೇಳಿದ್ದಾರೆ. ಧೋನಿ ಸಣ್ಣವರಿದ್ದಾಗ ಜಾತ್ರೆಯಲ್ಲಿ ಸಚಿನ್ ಫೋಟೋ ಖರೀದಿಸಿ ಮನೆಯ ಗೋಡೆಯ ಮೇಲೆ ಅಂಟಿಸಿಕೊಂಡಿದ್ದರಂತೆ. ವಿದೇಶದಲ್ಲಿ ಪಂದ್ಯಗಳು ನಡೆಯುತ್ತಿದ್ದಾಗ, ಸಚಿನ್ ಆಟ ನೋಡಲು ಮುಂಜಾನೆಯೇ ಎದ್ದು ಟಿವಿ ಮುಂದೆ ಧೋನಿ ಹಾಜರಿರುತ್ತಿದ್ದೆ ಎಂದು ಸ್ವತಃ ಧೋನಿ ಸಂದರ್ಶನವೊಂದರಲ್ಲಿ ಹೇಳಿದ್ದರು.
3. ಕ್ರಿಕೆಟಿಗನಾಗುವುದಕ್ಕಿಂತ ಮೊದಲ ಭಾರತೀಯ ರೈಲ್ವೇ ಉದ್ಯೋಗಿ:
ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಕ್ರಿಕೆಟಿಗನಾಗುವುದಕ್ಕಿಂತ ಮೊದಲು ಭಾರತೀಯ ರೈಲ್ವೇ ಉದ್ಯೋಗಿಯಾಗಿದ್ದರು. ಜೀವನದಲ್ಲಿ ದೊಡ್ಡದನ್ನು ಏನಾದರೂ ಸಾಧಿಸಬೇಕು ಎಂದುಕೊಂಡು ರೈಲ್ವೇ ಉದ್ಯೋಗಕ್ಕೆ ಗುಡ್ ಬೈ ಹೇಳಿ, ಕ್ರಿಕೆಟ್ ಕಡೆ ಗಮನ ಹರಿಸಿದರು. ಧೋನಿ ಇದೀಗ ಭಾರತದ ಮನೆ ಮಾತಾಗಿದ್ದಾರೆ.
4. ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯ ಅತ್ಯಂತ ದುಬಾರಿ ಆಟಗಾರ ಧೋನಿ
2008ರಲ್ಲಿ ಆರಂಭವಾದ ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ ಎನ್ನುವ ಹೆಗ್ಗಳಿಕೆಯೂ ಧೋನಿಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಧೋನಿಯನ್ನು ಸುಮಾರು 1.5 ಮಿಲಿಯನ್ ಅಮೆರಿಕನ್ ಡಾಲರ್(11.46 ಕೋಟಿ ರುಪಾಯಿ) ನೀಡಿ ಐಕಾನ್ ಆಟಗಾರನನ್ನಾಗಿ ಆಯ್ಕೆ ಮಾಡಿಕೊಂಡಿತ್ತು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
5. ಬೈಕ್ ಅಂದ್ರೆ ಧೋನಿಗೆ ಪಂಚಪ್ರಾಣ:
ಮಹೇಂದ್ರ ಸಿಂಗ್ ಧೋನಿಗೆ ಬೈಕುಗಳೆಂದರೆ ಪಂಚಪ್ರಾಣ ಎನ್ನುವ ವಿಚಾರ ಗುಟ್ಟಾಗಿಯೇನೂ ಉಳಿದಿಲ್ಲ. ಧೋನಿ ತಮ್ಮ ಮೊದಲ ಇಂಟರ್ನ್‌ಶಿಪ್ ಸಿಕ್ಕ ಹಣದಿಂದ ಒಂದು ಸಕೆಂಡ್ ಹ್ಯಾಂಡ್ ಬೈಕು ಖರೀದಿಸಿದ್ದರು. ಈಗ ಧೋನಿ ಬಳಿ 50ಕ್ಕೂ ಅಧಿಕ ಬೈಕುಗಳಿವೆ. ಧೋನಿ ಫಾರ್ಮ್ ಹೌಸ್‌ನಲ್ಲಿ ಒಂದು ಬೈಕ್ ಮ್ಯೂಸಿಯಂ ಕೂಡಾ ಇದೆ. ಸಮಯ ಸಿಕ್ಕಾಗಲೆಲ್ಲಾ ಧೋನಿ ತಮ್ಮ ಬೈಕ್ ತಾವೇ ಸ್ವಚ್ಚಮಾಡುತ್ತಾರೆ, ಆಗಾಗ ಕ್ರಿಕೆಟ್ ಪ್ರಾಕ್ಟೀಸ್‌ಗೆ ತಮ್ಮ ಬೈಕ್‌ನಲ್ಲೇ ಓಡಾಡುತ್ತಾರೆ.
6. ಧೋನಿಯ ದೊಡ್ಡ ಅಭಿಮಾನಿ-ಅವರ ಅಮ್ಮ ಅವರ ಮ್ಯಾಚ್ ನೋಡೊಲ್ಲ
ಎಂ ಎಸ್ ಧೋನಿ ಕ್ರಿಕೆಟ್ ಆಡುತ್ತಾರೆ ಎಂದರೆ ಅವರ ಮನೆಯ ಕುಟುಂಬಸ್ಥರೆಲ್ಲಾ ಟಿವಿ ಮುಂದೆ ಹಾಜರಿರುತ್ತಾರೆ. ಆದರೆ ಅವರ ಅತಿದೊಡ್ಡ ಫ್ಯಾನ್ ಅವರ ಅಮ್ಮ ಮಾತ್ರ ಟಿವಿಯಲ್ಲಿ ಅವರ ಮ್ಯಾಚ್ ನೋಡೊಲ್ಲ. ನಾನು ನೋಡುವಾಗ ಧೋನಿ ಔಟ್ ಆದರೆ ಎನ್ನುವ ಭಯದಿಂದಲೇ ಅವರ ಅಮ್ಮ ಮ್ಯಾಚ್ ನೋಡೊಲ್ವಂತೆ.
7. ಭಾರತೀಯ ಸೇನೆ ಜತೆ ಅಪರೂಪದ ನಂಟು:
ಕ್ಯಾಪ್ಟನ್ ಕೂಲ್ ಮಹೇಂದ್ರವ ಸಿಂಗ್ ಧೋನಿಗೆ ಭಾರತೀಯ ಸೇನೆ ಜತೆಗೆ ಒಳ್ಳೆಯ ಒಡನಾಟವಿದೆ. 2011ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಅಲಂಕರಿಸಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆ ಧೋನಿಯದ್ದು. 2019ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ 15 ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಪ್ರಾದೇಶಿಕ ಸೇನೆ ಜತೆ ಕಾರ್ಯ ನಿರ್ವಹಿಸುವ ಮೂಲಕ ಹಲವು ಯುವಕರಿಗೆ ಮಾದರಿಯಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

