ಹನಿಮೂನ್ ಅರ್ಧಕ್ಕೆ ಬಿಟ್ಟು ಬಂದು ಗಂಡನ ಮನೆಯಲ್ಲಿ ಆತ್ಮ*ಹತ್ಯೆಗೆ ಯತ್ನಿಸಿದ ನವವಧು ಗಾನವಿ!
ಮದುವೆಯಾದ ಒಂದೂವರೆ ತಿಂಗಳಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 26 ವರ್ಷದ ನವವಿವಾಹಿತೆ ಗಾನವಿ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ವೈದ್ಯರು 'ಬ್ರೈನ್ ಡೆಡ್' ಎಂದು ತಿಳಿಸಿದ್ದಾರೆ.

ಬೆಂಗಳೂರು (ಡಿ.24): ಮದುವೆಯಾಗಿ ಕೇವಲ ಒಂದೂವರೆ ತಿಂಗಳು ಕಳೆಯುವಷ್ಟರಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 26 ವರ್ಷದ ನವವಿವಾಹಿತೆ ಗಾನವಿ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ.
ಪ್ರಸ್ತುತ ಗಾನವಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ವೈದ್ಯರು 'ಬ್ರೈನ್ ಡೆಡ್' ಎಂದು ತಿಳಿಸಿರುವುದು ಕುಟುಂಬಸ್ಥರನ್ನು ಆತಂಕಕ್ಕೆ ತಳ್ಳಿದೆ.
ಗಾನವಿ ಮತ್ತು ಸೂರಜ್ ಅವರ ಮದುವೆ ಕಳೆದ ಅಕ್ಟೋಬರ್ 29ರಂದು ನಡೆದಿತ್ತು. ಗಂಡನ ಮನೆಯವರ ಬೇಡಿಕೆಯಂತೆ ನವೆಂಬರ್ 23ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಸುಮಾರು ₹40 ಲಕ್ಷ ರೂಪಾಯಿ ಖರ್ಚು ಮಾಡಿ ಅತ್ಯಂತ ಅದ್ದೂರಿಯಾಗಿ ರಿಸೆಪ್ಷನ್ ಮಾಡಲಾಗಿತ್ತು.
ಅದ್ಧೂರಿ ಮದುವೆಯ ಬೆನ್ನಲ್ಲಿಯೇ ಮಕ್ಕಳ ಸಂತೋಷವೇ ಮುಖ್ಯವೆಂದು ನವ ದಂಪತಿಗಳು 10 ದಿನಗಳ ಪ್ರವಾಸಕ್ಕಾಗಿ ಶ್ರೀಲಂಕಾಗೆ ಹನಿಮೂನ್ ತೆರಳಿದ್ದರು.
ನಿಗದಿತ ಪ್ರವಾಸ ಮುಗಿಯುವ 5 ದಿನಗಳ ಮೊದಲೇ ಅಂದರೆ ಕಳೆದ ಭಾನುವಾರವೇ ಸೂರಜ್ ಪತ್ನಿಯನ್ನು ವಾಪಸ್ ಕರೆತಂದಿದ್ದರು. ಪ್ರವಾಸದ ವೇಳೆ ದಂಪತಿಗಳ ನಡುವೆ ಯಾವುದೋ ವಿಚಾರಕ್ಕೆ ದೊಡ್ಡ ಜಗಳ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಇನ್ನು ನವದಂಪತಿ ಮನೆಗೆ ಬಂದ ನಂತರ 'ನಿಮ್ಮ ಮಗಳನ್ನು ನಿಮ್ಮ ಮನೆಗೇ ಕರೆದುಕೊಂಡು ಹೋಗಿ' ಎಂದು ಸೂರಜ್ ಮನೆಯವರು ಗಾನವಿ ಪೋಷಕರಿಗೆ ಅವಾಜ್ ಹಾಕಿದ್ದರು ಎನ್ನಲಾಗಿದೆ.
ಮದುವೆಯಾದ ದಿನದಿಂದಲೇ ಪತಿ ಸೂರಜ್, ಅತ್ತೆ ಜಯಂತಿ ಮತ್ತು ಸೂರಜ್ ಅಣ್ಣ ಸಂಜಯ್ ಅವರು ಹೆಚ್ಚಿನ ವರದಕ್ಷಿಣೆ ಮತ್ತು ಒಡವೆಗಾಗಿ ಗಾನವಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
ಇದೇ ಬೇಸರದಲ್ಲಿ ಗಾನವಿ ನಿನ್ನೆ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

