ಎಂಜಿನಿಯರಿಂಗ್ ಹುದ್ದೆ ತೊರೆದ 24ರ ಚೆಲುವೆ ಈಗ 45 ಕೋಟಿಗಳ ಒಡತಿ! ರೀಲ್ಸ್ ರಾಣಿಯ ರೋಚಕ ಪಯಣ
ಅಪೂರ್ವ ಮುಖಿಜಾ ಎಂಬ ಓದಿನಲ್ಲಿ ಟಾಪ್ ಇದ್ದ ಎಂಜಿನಿಯರ್, ತನ್ನ ಶೈಕ್ಷಣಿಕ ಸಾಧನೆಗೆ ಮಾನ್ಯತೆ ಸಿಗದಿದ್ದಾಗ ಸೋಷಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟರು. ಅರೆ-ಬರೆ ಉಡುಪಿನಲ್ಲಿ ರೀಲ್ಸ್ ಮಾಡಿ, ಟ್ರೋಲ್‌ಗಳ ಮೂಲಕವೇ ಪ್ರಸಿದ್ಧರಾಗಿ, ಇಂದು 45 ಕೋಟಿಗೂ ಹೆಚ್ಚು ಸಂಪಾದಿಸಿ ಕೋಟ್ಯಧಿಪತಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾದ ತಾಕತ್ತು
ಇಂದು ಸೋಷಿಯಲ್ ಮೀಡಿಯಾದ ತಾಕತ್ತು ಎಲ್ಲರಿಗೂ ತಿಳಿದದ್ದೇ. ಅದರಲ್ಲಿಯೂ ರೀಲ್ಸ್ ಮೂಲಕವೇ ಲಕ್ಷದಿಂದ ಕೋಟಿ ಕೋಟಿ ಸಂಪಾದನೆ ಮಾಡುವವರೂ ಇದ್ದಾರೆ. ಅದೃಷ್ಟವೊಂದು ಇದ್ದರೆ, ಸೋಷಿಯಲ್ ಮೀಡಿಯಾ ಕೂಡ ಕೈಹಿಡಿದುಬಿಡುತ್ತದೆ. ಅಂಥದ್ದೇ ಒಂದು ಸ್ಟೋರಿ ಈ ಲೇಡಿ ಎಂಜಿನಿಯರ್ದ್ದು.
ರೀಲ್ಸ್ ಮೂಲಕವೇ 45 ಕೋಟಿ
ರೀಲ್ಸ್ ಮೂಲಕವೇ 45 ಕೋಟಿ ರೂಪಾಯಿಗೂ ಹೆಚ್ಚಿನ ದುಡ್ಡು ಮಾಡಿರುವ 24 ವರ್ಷಗಳ ಯುವತಿಯ ಹೆಸರು ಅಪೂರ್ವ ಮುಖಿಜಾ. ಇವಳೀಗ ಸೋಷಿಯಲ್ ಮೀಡಿಯಾದ ಇನ್ಫ್ಲುಯೆನ್ಸರ್. ಓದಿನಲ್ಲಿ ಟಾಪ್ 1 ಇದ್ದಾಕೆ, ಉತ್ತಮ ಹುದ್ದೆ ಹೊಂದಿದರೂ, ಮಾನ್ಯತೆಯೇ ಸಿಕ್ಕಿಲ್ಲವೆಂದು ಇದೀಗ ರೀಲ್ಸ್ ಪ್ರಪಂಚ ಹೊಕ್ಕು ಕೋಟ್ಯಧಿಪತಿಯಾಗಿದ್ದಾಳೆ!
ಅಸಾಧಾರಣ ಪ್ರತಿಭೆ
ಅಂದಹಾಗೆ, ಈಕೆಯದ್ದು ಅಸಾಧಾರಣ ಪ್ರತಿಭೆ. ಓದಿನಲ್ಲಿ ಜಾಣೆಯಾಗಿರುವ ಅಪೂರ್ವ, ರೀಲ್ಸ್ಗೆ ಕಾಲಿಡುವ ಮೊದಲು ಭಾರತದ ಅತ್ಯಂತ ಕಠಿಣ ಎಂಜಿನಿಯರಿಂಗ್ ಪರೀಕ್ಷೆಯನ್ನು ಪಾಸ್ ಮಾಡಿದ್ದಾಳೆ. ಇದಕ್ಕಾಗಿ ಆಕೆ ದಿನಕ್ಕೆ 14 ಗಂಟೆಗಳ ಕಾಲ ಅಧ್ಯಯನ ಮಾಡಿದ್ದಾಳೆ. ಮನೆ, ಸ್ನೇಹಿತರು, ಸೋದರಸಂಬಂಧಿಗಳು, ನಿದ್ರೆ ಮತ್ತು ಈ ವಯಸ್ಸಿನಲ್ಲಿ ಬರುವ ಎಲ್ಲಾ ಕನಸುಗಳನ್ನೂ ತ್ಯಜಿಸಿದ್ದಾಳೆ.
ವಿವಿಧೆಡೆ ಉದ್ಯೋಗ
ಐಐಟಿಗೆ ಸೇರಿದ ಆರು ವರ್ಷಗಳವರೆಗೆ ಕೆಲಸವನ್ನೂ ಮಾಡಿದ್ದಾಳೆ. ಇಷ್ಟೆಲ್ಲಾ ಸಾಧನೆ ಮಾಡಿದರೂ ಈಕೆಯನ್ನು ಗುರುತಿಸಿದವರು ಕನಿಷ್ಠ ನೂರು ಮಂದಿಯೂ ಇಲ್ಲ ಎಂದು ಖುದ್ದು ಅಪೂರ್ವಳೇ ಹೇಳುತ್ತಾಳೆ. ಇಂಥದ್ದೊಂದು ಮಹತ್ ಸಾಧನೆ ಮಾಡಿದಾಗ ಯಾರೂ ಕೇಳಲಿಲ್ಲ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿದರೂ ಬೆರಳೆಣಿಕೆ ಮಂದಿಯಷ್ಟೇ ಲೈಕ್ ಮಾಡಿದರು. ನನ್ನ ಸಾಧನೆ ಬಗ್ಗೆ ಯಾರ ಬಾಯಲ್ಲಿಯೂ ಏನೂ ಬರಲಿಲ್ಲ, ಎಲ್ಲವೂ ಶೂನ್ಯವಾಗಿತ್ತು ಎಂದಿರೋ ಅಪೂರ್ವ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ಇದೇ ಸೋಷಿಯಲ್ ಮೀಡಿಯಾ ಪ್ರಪಂಚವನ್ನು!
ಅರೆ-ಬರೆ ಡ್ರೆಸ್
ಅರೆ-ಬರೆ ಡ್ರೆಸ್ ಹಾಕಿಕೊಂಡು, ದೇಹ ಪ್ರದರ್ಶನ ಮಾಡುತ್ತಾ ರೀಲ್ಸ್ ಮಾಡಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾಳೆ ಈಕೆ. ಇವಳು ಸಾಧನೆ ಮಾಡಿದಾಗ ಇದೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗಲೂ ಒಂದೇ ಒಂದು ಲೈಕ್ ಒತ್ತದವರು ಇದೀಗ ಈಕೆಯ ಫಾಲೋವರ್ಸ್. ಇವಳು ವಿಡಿಯೋ ಹಾಕಿದಾಗಲೆಲ್ಲಾ ಲೈಕ್, ಕಮೆಂಟ್ಗಳ ಸುರಿಮಳೆ.
ಟ್ರೋಲ್ನಿಂದಲೇ ಫೇಮಸ್ಸು
ಟ್ರೋಲ್ ಮಾಡುತ್ತಲೇ ಇವಳ ವಿಡಿಯೋ ಎಂಜಾಯ್ ಮಾಡುವ ದೊಡ್ಡ ವರ್ಗವೇ ಇದೆ. ಫಾಲೋವರ್ಸ್ ಸಂಖ್ಯೆ ಹೆಚ್ಚಾದಂತೆ ಸಹಜವಾಗಿ ಇವಳಿಗೆ ಬ್ರ್ಯಾಂಡ್ ಡೀಲ್‌ಗಳು, ಜಾಹೀರಾತುಗಳು ಬಂದಿವೆ. ಹಗಲು-ಇರುಳು ಓದಿ ಪರೀಕ್ಷೆ ಮಾಡಿದಾಗ ಸಿಗದ ಶ್ರೇಯಸ್ಸು, ಈಗ ಟ್ರೋಲ್ನಿಂದಾಗಿ ಸಿಕ್ಕಿದೆ. ಇದೇ ಕಾರಣಕ್ಕೆ ಇಂಥವರನ್ನೇ ಹುಡುಕುವ ರಿಯಾಲಿಟಿ ಶೋಗಳಿಗೂ ಇವಳೇ ಬೇಕು. ಏನಿಲ್ಲವೆಂದರೂ ದಿನಕ್ಕೆ ಸುಮಾರು 2.5 ಲಕ್ಷ ರೂ. ಗಳಿಸುತ್ತಿದ್ದಾಳೆ ಈಕೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

