₹1800 ಕೋಟಿ ಮೌಲ್ಯದ 300 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದನಾ ನಿಗ್ರಹ ದಳ ಮತ್ತು ಕರಾವಳಿ ರಕ್ಷಣಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿವೆ. ಕಳ್ಳಸಾಗಣೆದಾರರು ಡ್ರಗ್ಸ್ ಎಸೆದು ಪರಾರಿಯಾಗಿದ್ದಾರೆ.

ಅಹಮದಾಬಾದ್: ಅಕ್ರಮವಾಗಿ ಸಾಗಿಸುತ್ತಿದ್ದ 1,800 ಕೋಟಿ ರು. ಮೌಲ್ಯದ 300 ಕೆ.ಜಿ. ಮಾದಕ ವಸ್ತುವನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮತ್ತು ಕರಾವಳಿ ರಕ್ಷಣಾ ಪಡೆಗಳು ವಶಪಡಿಸಿಕೊಂಡಿವೆ. ಏ.12 ಮತ್ತು 13ರ ಮಧ್ಯರಾತ್ರಿ ಗುಜರಾತ್‌ನ ಭಾರತೀಯ ಸಮುದ್ರ ಗಡಿ ರೇಖೆ ಬಳಿ ಕಾರ್ಯಾಚರಣೆ ನಡೆದಿದೆ. ರಕ್ಷಣಾ ಪಡೆಯ ಹಡಗು ಸಮೀಪಿಸುತ್ತಿರುವುದನ್ನು ನೋಡಿ ಕಳ್ಳಸಾಗಣೆದಾರರು ಮಾದಕವಸ್ತುಗಳನ್ನು ಸಮುದ್ರಕ್ಕೆ ಎಸೆದು, ಅಂತಾರಾಷ್ಟ್ರೀಯ ಗಡಿ ದಾಟಿ ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ ವಸ್ತುವು ಮೆಥಾಂಫೆಟಮೈನ್ ಎಂದು ಶಂಕಿಸಲಾಗಿದೆ.

‘ರಕ್ಷಣಾ ಪಡೆಯ ಹಡಗು ಮತ್ತು ಕಳ್ಳಸಾಗಣೆದಾರರ ದೋಣಿಯ ನಡುವೆ ಸಾಕಷ್ಟು ದೂರವಿದ್ದುದರಿಂದ, ಕಳ್ಳರು ತಪ್ಪಿಸಿಕೊಂಡರು. ಕರಾವಳಿ ರಕ್ಷಣಾ ಪಡೆ ಕತ್ತಲೆಯಲ್ಲಿ ಸಮುದ್ರದಲ್ಲಿ ಬಿದ್ದಿದ್ದ ಡ್ರಗ್ಸ್ ಅನ್ನು ಹುಡುಕಿ ತೆಗೆದಿದೆ. ಅವುಗಳನ್ನು ಹೆಚ್ಚಿನ ತನಿಖೆಗಾಗಿ ಪೋರಬಂದರ್‌ಗೆ ತರಲಾಗಿದೆʼ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಳ್ಳನ ಬಿಟ್ಟು ಜಡ್ಜ್‌ಗೆ ಹುಡುಕಾಟ
ಕಳ್ಳತನ ಪ್ರಕರಣವೊಂದರಲ್ಲಿ ಕಣ್ಣನ ಪತ್ತೆಗಾಗಿ ಬಲೆ ಬೀಸುವ ಬದಲು ನ್ಯಾಯಾಧೀಶರಿಗಾಗಿ ಹುಡುಕಾಟ ನಡೆಸಿದ ವಿಚಿತ್ರ ಘಟನೆ ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ. ಪೊಲೀಸರು ಈ ಎಡವಟ್ಟು ಭಾರೀ ಟೀಕೆಗೆ ಗುರಿಯಾಗಿದೆ.

ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿ ರಾಜ್‌ಕುಮಾರ್‌ಗೆ ಸ್ಥಳೀಯ ಕೋರ್ಟ್‌ ಸಮನ್ಸ್‌ ಜಾರಿ ಮಾಡಿತ್ತು. ಆದರೆ ನೋಟಿಸ್‌ ನೀಡಲು ನಿಯೋಜನೆಗೊಂಡಿದ್ದ ಅಧಿಕಾರಿ ಕಳ್ಳನ ಹೆಸರಿನ ಜಾಗದಲ್ಲಿ ರಾಜ್‌ಕುಮಾರ್ ಬದಲು, ಆದೇಶ ಹೊರಡಿಸಿದ್ದ ಜಡ್ಜ್‌ ನಗ್ಮಾಖಾನ್‌ ಹೆಸರು ಬರೆದಿದ್ದಾರೆ. ಹೀಗಾಗಿ ಪೊಲೀಸರು ನಗ್ಮಾ ಖಾನ್ ಹೆಸರಿನ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ‘ಜಾಮೀನು ರಹಿತ ವಾರಂಟ್‌ ಜಾರಿಗೆ ಮುಂದಾದಾಗ ಆ ವಿಳಾಸದಲ್ಲಿ ನಗ್ಮಾ ಹೆಸರಿನಲ್ಲಿ ಯಾರು ಇರಲಿಲ್ಲ’ ಎಂದು ಕೋರ್ಟ್‌ಗೆ ತಿಳಿಸಿದ್ದರು. ಈ ವೇಳೆ ನ್ಯಾಯಾಧೀಶೆ ನಗ್ಮಾ ಅವರಿಗೆ ಪೊಲೀಸ್‌ ಅಧಿಕಾರಿಯ ಗೊಂದಲ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ನೀಲಿ ಕಣ್ಣಿನ ಪಾಕಿಸ್ತಾನಿ ಚಾಯ್‌ವಾಲಾ ಪಾಸ್‌ಪೋರ್ಟ್ ಬ್ಲಾಕ್, ಗಡೀಪಾರು ಭೀತಿ

ನಿತ್ಯ 10 ಗಂಟೆ ಕಾಲ ಎನ್‌ಐಎದಿಂದ ಉಗ್ರ ರಾಣಾ ವಿಚಾರಣೆ
ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹಾವುರ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಪ್ರತಿದಿನ 8ರಿಂದ 10 ಗಂಟೆಗಳ ಕಾಲ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಮುಂಬೈ ದಾಳಿಯ ಹಿಂದಿನ ಬಹುದೊಡ್ಡ ಪಿತೂರಿಯನ್ನು ಬಯಲು ಮಾಡಲು ಎನ್‌ಐಎ ಅಧಿಕಾರಿಗಳು ನಿತ್ಯ 8-10 ಗಂಟೆಗಳ ಕಾಲ ರಾಣಾನ ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯ ತನಿಖಾಧಿಕಾರಿ ಜಯ ರಾಯ್ ನೇತೃತ್ವದ ತಂಡದಿಂದ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಯ ಸಮಯದಲ್ಲಿ ರಾಣಾ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾನೆ’ ಎಂದು ಮೂಲಗಳಿಂದ ತಿಳಿದುಬಂದಿದೆ.

ಅಯೋಧ್ಯೆ ರಾಮಮಂದಿರ ಸ್ಫೋಟದ ಕುರಿತು ಬೆದರಿಕೆ ಇಮೇಲ್‌
ಅಯೋಧ್ಯಾ: ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ಸಂಬಂಧಿಸಿದಂತೆ ರಾಮಮಂದಿರ ಟ್ರಸ್ಟ್‌ ಬೆದರಿಕೆಯ ಇಮೇಲ್‌ ಒಂದನ್ನು ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಇಂಗ್ಲೀಷ್‌ನಲ್ಲಿ ಈ ಇಮೇಲ್ ಸಂದೇಶ ಕಳುಹಿಸಿದ್ದು, ಭಾನುವಾರ ಮಧ್ಯರಾತ್ರಿ ಈ ಸಂದೇಶ ಬಂದಿದೆ ಎನ್ನಲಾಗಿದೆ. ಅದನ್ನು ಹೊರತುಪಡಿಸಿ ಪೊಲೀಸರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದುವರೆಗೆ ರಾಮ ಮಂದಿರ ಟ್ರಸ್ಟ್‌, ಭದ್ರತಾ ಸಂಸ್ಥೆಗಳು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಇದನ್ನೂ ಓದಿ: PNB ಗೆ ₹13000 ಸಾವಿರ ಕೋಟಿ ವಂಚಿಸಿದ್ದ ಚೋಕ್ಸಿ ಕೊನೆಗೂ ಬಂಧನ!