ಕೆಲ ದಿನಗಳ ಹಿಂದೆ ದೆಹಲಿ ಏರ್ಪೋರ್ಟ್‌ನಲ್ಲಿ ಕ್ಯೂ ವಿಚಾರಕ್ಕೆ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಏರ್ ಇಂಡಿಯಾ ಪೈಲಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಲ್ಲೆಯಿಂದ ಪ್ರಯಾಣಿಕನ ಮೂಗಿನ ಮೂಳೆ ಮುರಿದಿದ್ದು, ಪೈಲಟ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ದೆಹಲಿ ಏರ್ಪೋರ್ಟ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ಮೂಗಿನಲ್ಲಿ ರಕ್ತ ಬರುವಂತೆ ಹಲ್ಲೆ ಮಾಡಿದ ಏರ್ ಇಂಡಿಯಾದ ಪೈಲಟ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.. ಪೈಲಟ್ ನಡೆಸಿದ ಹಲ್ಲೆಯಿಂದಾಗಿ ಮೂಗಿನ ಮೂಳೆ ಮುರಿದಿದೆ ಎಂದು ಪ್ರಯಾಣಿಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಪೈಲಟ್ ಕ್ಯಾಪ್ಟನ್ ವೀರೇಂದ್ರ ಸೆಜ್ವಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಡಿಸೆಂಬರ್ 19ರಂದು ಈ ಘಟನೆ ನಡೆದಿತ್ತು. ಆಫ್ ಡೂಟಿ( ಕೆಲಸ ಅವಧಿಯಲ್ಲಿ ಇಲ್ಲದ) ಪೈಲಟ್ ವೀರೇಂದ್ರ ಸೆಜ್ವಾಲ್ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದು, ಈ ವೇಳೆ ಸಹ ಪ್ರಯಾಣಿಕನ ಜೊತೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಅವರ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಗೊಳಗಾದ ಪ್ರಯಾಣಿಕನನ್ನು ಅಂಕಿತ್ ಎಂದು ಗುರುತಿಸಲಾಗಿದ್ದು, ಹಲ್ಲೆಯ ತೀವ್ರತೆಗೆ ಪ್ರಯಾಣಿಕ ಅಂಕಿತ್ ಅವರ ಮೂಗಿನ ಮೂಳೆ ಹುಡಿಯಾಗಿ ರಕ್ತ ಬಂದಿದೆ. ಸಿಟಿ ಸ್ಕ್ಯಾನ್ ವೇಳೆ ಇದು ಖಚಿತವಾಗಿದೆ. ವಿಮಾನ ನಿಲ್ದಾಣದಲ್ಲಿ ಕ್ಯೂ ರೂಲ್ಸ್ ಪಾಲಿಸದೇ ಮುಂದೆ ಹೋಗಿದ್ದಕ್ಕೆ ಕ್ಯಾಪ್ಟನ್ ಸೆಜ್ವಾಲ್‌ಗೆ ಅಂಕಿತ್ ಅವರು ಆಕ್ಷೇಪಿಸಿದ ನಂತರ ಈ ಹಲ್ಲೆ ನಡೆದಿದೆ ಎಂದು ಅಂಕಿತ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಭುಗಿಲೆದ್ದ ಕಾಂಬೋಡಿಯಾ ಥೈಲ್ಯಾಂಡ್ ನಡುವಿನ ಸಮರ: 11ನೇ ಶತಮಾನದ ಹಿಂದೂ ಶಿವ ದೇಗುಲ ಧ್ವಂಸ
ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅಂಕಿತ್, ತನ್ನ 7 ವರ್ಷದ ಮಗಳ ಮುಂದೆ ಹಲ್ಲೆ ಮಾಡಲಾಯ್ತು.ಇದು ನನ್ನನ್ನು ಆಘಾತಕ್ಕೀಡು ಮಾಡಿತು. ಅವನು ನನ್ನ ಮಗಳ ಮುಮದೆ ನನಗೆ ಥಳಿಸಿದ, ನನ್ನ ರಜಾದಿನಗಳು ಹಾಳಾಯ್ತು. ಅಲ್ಲದೇ ಆ ಪೈಲಟ್ ನನ್ನನ್ನು ಅವಿದ್ಯಾವಂತ ಎಂದು ನಿಂದಿಸಿದ ಎಂದು ಅಂಕಿತ್ ಹೇಳಿದ್ದಾರೆ. ಅಲ್ಲದೇ ಘಟನೆಯ ಬಳಿಕ ಈ ಪ್ರಕರಣವನ್ನು ಇಲ್ಲಿಗೆ ಬಿಡುವಂತೆ ಪ್ರಕರಣ ಮುಂದುವರೆಸದಂತೆ ನನ್ನ ಬಳಿ ಪತ್ರ ಬರೆಸಿಕೊಳ್ಳಲಾಯ್ತು ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ದೂರಿದ್ದರು. ಘಟನೆಯ ನಂತರ ನಾಗರಿಕ ವಿಮಾನಯಾನ ಸಚಿವಾಲಯವೂ ತನಿಖೆಗೆ ಆದೇಶಿಸಿದೆ. ಇದಾದ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್, ತನಿಖೆ ಪೂರ್ಣಗೊಂಡು ಫಲಿತಾಂಶ ಹೊರಬರುವವರೆಗೂ ಕ್ಯಾಪ್ಟನ್ ವೀರೇಂದ್ರ ಸೆಜ್ವಾಲ್ ಅವರನ್ನು ಸೇವೆಯಿಂದ ಅಮಾನತು ಮಾಡಿದೆ.
ವಿಮಾನದಲ್ಲಿ ಪ್ರಯಾಣಿಕರಿಗೆ ಇರುವ ಹಕ್ಕುಗಳೇನು?
ಸುರಕ್ಷತೆ ಮತ್ತು ಘನತೆ: ವಿಮಾನ ನಿಲ್ದಾಣದ ಸಿಬ್ಬಂದಿಗಳಾಗಲಿ, ಕರ್ತವ್ಯದಲ್ಲಿಲ್ಲದ ಉದ್ಯೋಗಿಯಾಗಲಿ ಅಥವಾ ಪ್ರಯಾಣಿಕರಾಗಲಿ ವಿಮಾನ ನಿಲ್ದಾಣದಲ್ಲಿ ಯಾರ ಮೇಲೂ ಹಲ್ಲೆ, ಬೆದರಿಕೆ ಅಥವಾ ನಿಂದನೆ ಮಾಡುವಂತಿಲ್ಲ.
ವೈದ್ಯಕೀಯ ಮತ್ತು ಪ್ರಥಮ ಚಿಕಿತ್ಸೆ: ವಿಮಾನ ನಿಲ್ದಾಣಗಳಲ್ಲಿ 24×7 ವೈದ್ಯಕೀಯ ಸೌಲಭ್ಯಗಳು ಕಡ್ಡಾಯವಾಗಿದ್ದು, ಅಚಾನಕ್ ಗಾಯಗಳಾದ ಸಂದರ್ಭದಲ್ಲಿ ತಕ್ಷಣವೇ ಸಹಾಯ ನೀಡಬೇಕು.
ಇದನ್ನೂ ಓದಿ: ರಷ್ಯಾದಲ್ಲಿ ಕಾರ್ಮಿಕರ ಕೊರತೆ: ಬೀದಿ ಗುಡಿಸುವ ಕೆಲಸಕ್ಕೆ ನೇಮಕಗೊಂಡ ಭಾರತೀಯರ ವೇತನ ಎಷ್ಟು ಗೊತ್ತಾ?
ದೂರು ನೀಡುವ ಹಕ್ಕು: ಪ್ರಯಾಣಿಕರು ಸಿಐಎಸ್‌ಎಫ್, ವಿಮಾನ ನಿಲ್ದಾಣ ಅಧಿಕಾರಿಗಳು ಅಥವಾ ವಿಮಾನಯಾನ ಸಂಸ್ಥೆಗಳಿಗೆ ಲಿಖಿತ ದೂರು ಸಲ್ಲಿಸಬಹುದು. ಆದರೆ ವಿಮಾನಯಾನ ಸಿಬ್ಬಂದಿಯಾಗಲಿ ಏರ್‌ಪೋರ್ಟ್ ಸಿಬ್ಬಂದಿಯಾಗಲಿ ಸಮಸ್ಯೆ ಇತ್ಯರ್ಥಕ್ಕೆ ಪತ್ರ ಬರೆಯುವಂತೆ ಒತ್ತಾಯಿಸುವುದು ಕಾನೂನುಬಾಹಿರ.
ಗಂಭೀರ ಘಟನೆಗಳಲ್ಲಿ, ಪ್ರಯಾಣಿಕರು ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸುವಂತೆ ಒತ್ತಾಯಿಸಬಹುದು, ಇದು ತನಿಖೆಯ ಸಮಯದಲ್ಲಿ ನಿರ್ಣಾಯಕ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಹಾಗೆಯೇ ಏರ್‌ಪೋರ್ಟ್‌ನಲ್ಲಿ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ವಿಶೇಷ ನೆರವು, ಆದ್ಯತೆ ಮತ್ತು ಸೂಕ್ಷ್ಮ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ.


