ಕದನ ವಿರಾಮದ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ಮುಂದುವರಿಸಿದ್ದ ಶೆಲ್ ದಾಳಿ ಮತ್ತು ಡ್ರೋನ್ ದಾಳಿಗಳ ಬಗ್ಗೆ ತೀವ್ರ ಕೆಂಡಾಮಂಡಲರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ.
ನವದೆಹಲಿ (ಮೇ.12): ಕದನ ವಿರಾಮದ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ಮುಂದುವರಿಸಿದ್ದ ಶೆಲ್ ದಾಳಿ ಮತ್ತು ಡ್ರೋನ್ ದಾಳಿಗಳ ಬಗ್ಗೆ ತೀವ್ರ ಕೆಂಡಾಮಂಡಲರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ. ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ.
ಪಾಕ್‌ನ ಗುಂಡಿನ ದಾಳಿಗೆ ಭಾರತ ಬಾಂಬ್ ಮೂಲಕ ಉತ್ತರಿಸಲಿದೆ. ಭಾರತದ ಮೇಲೆ ಅಣ್ವಸ್ತ್ರ ದಾಳಿ ಮಾಡುತ್ತೇವೆ ಎಂದು ಬೆದರಿಸಿ ಭಯೋತ್ಪಾದನೆ ಮಾಡಿದರೆ ಸುಮ್ಮನಿರುವುದಿಲ್ಲ. ಭಾರತ ಇನ್ನು ಮುಂದೆ ಪಾಕ್ ಅಟಾಟೋಪಕ್ಕೆ ವಜ್ರಮುಷ್ಟಿಯಿಂದ ತಿರುಗೇಟು ನೀಡಲಿದೆ’ ಎಂದು ಗುಡುಗಿದ್ದಾರೆ. ಈ ಮೂಲಕ ಪಾಕಿಸ್ತಾನ ಮುಂದಿನ ದಿನಗಳಲ್ಲಿ ಯಾವುದೇ ಉಗ್ರ ಚಟುವಟಿಕೆ ನಡೆಸಿದರೆ ಅದನ್ನು ಯುದ್ದ ಎಂದೇ ಪರಿಗಣಿಸಿ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಶತ್ರು ದೇಶಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸಂಜೆಯಿಂದೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾನುವಾರ ಸೇನೆ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ ಅವರು, ‘ಅವರು (ಪಾಕಿಗಳು) ಗುಂಡು ಹಾರಿಸಿದರೆ, ನೀವು ಬಾಂಬ್‌ನಿಂದ ಉತ್ತರಿಸಿ’ ಎಂದು ಸಶಸ್ತ್ರ ಪಡೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ‘ಐಎಸ್‌ಐ ಜತೆ ನಿಕಟ ಸಂಬಂಧ ಹೊಂದಿದ್ದ ಮುರೀದ್‌ಕೆ ಮತ್ತು ಬಹಾವಲ್ಪುರದ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತದ ರಾಜಧಾನಿ ನವದೆಹಲಿ ದೃಷ್ಟಿ ಕಳೆದುಕೊಂಡಿಲ್ಲ. ನಾವು ನಿಮ್ಮ ಕೇಂದ್ರ ಕಚೇರಿಯ ಮೇಲೆಯೇ ದಾಳಿ ಮಾಡುತ್ತೇವೆ. ಬಲಿಪಶುಗಳು ಮತ್ತು ಅಪರಾಧಿಗಳನ್ನು ಸಮೀಕರಿಸಲು ಸಾಧ್ಯವಿಲ್ಲ ಎಂದು ಭಾರತ ಜಗತ್ತಿಗೆ ಸ್ಪಷ್ಟಪಡಿಸಿದೆ’ ಎಂದು ಮೋದಿ ಹೇಳಿದ್ದಾರೆ.
ಕದನವಿರಾಮ ಬೆನ್ನಲ್ಲೇ ಕೇಂದ್ರ ಸಚಿವರ ಜತೆ ಮೋದಿ ಸಭೆ: ಜಾಗತಿಕ ನಾಯಕರ ಹರ್ಷ
‘ಪಾಕಿಸ್ತಾನವು ಇನ್ನು ಭಾರತದ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಬೆದರಿಕೆ ಹಾಕಿ ಇಲ್ಲಿ ಉಗ್ರವಾದಕ್ಕೆ ಮುಂದಾಗಬಹುದು. ಇದಕ್ಕೆ ನಾವು ವಜ್ರಮುಷ್ಟಿಯಿಂದ ಉತ್ತರ ಕೊಡುತ್ತೇವೆ. ಅಣುಬಾಂಬ್ ದಾಳಿಯ ಬೆದರಿಕೆ ಇನ್ನೆಂದೂ ಪಾಕಿಸ್ತಾನವನ್ನು ಕಾಪಾಡಲ್ಲ. ಪಾಕಿಸ್ತಾನ ಗುಂಡಿನ ದಾಳಿ ನಡೆಸಿದರೆ ನೀವು ಬಾಂಬ್‌ನಿಂದ ಉತ್ತರ ನೀಡಬೇಕು. ಅವರ ಪ್ರತಿ ದಾಳಿಗೂ ದುಪ್ಪಟ್ಟು ದಾಳಿ ನಡೆಸಬೇಕು; ಎಲ್ಲೇ ಅಡಗಿ ಕುಳಿತರೂ ಉಗ್ರರನ್ನು ಹೊಡೆದು ಹಾಕಲಾಗುವುದು. ಈಗಾಗಲೇ ಆಪರೇಶನ್ ಸಿಂದೂರದ ಮೂಲಕ ಈ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ’ ಎಂದು ಸಶಸ್ತ್ರ ಪಡೆಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.


