ಪಶ್ಚಿಮ ಬಂಗಾಳದ ಎಕ್ಸಿಟ್ ಪೋಲ್‌ಗಳನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಟಿಎಂಸಿ ಪಕ್ಷ 226ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಲಿತಾಂಶ ಪ್ರಕಟವಾಗುವವರೆಗೆ ಮತ ಎಣಿಕೆ ಕೇಂದ್ರಗಳ ಬಳಿ ಕಾವಲು ಕಾಯುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ,

ಕೋಲ್ಕತ್ತಾ (ಏ.30): ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ ಎಂದು ಭವಿಷ್ಯ ನುಡಿದಿರುವ ಬಹುತೇಕ ಎಕ್ಸಿಟ್ ಪೋಲ್‌ಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ತಮ್ಮ ಪಕ್ಷವು 226ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಅಲ್ಲಿಯವರೆಗೆ ಎಣಿಕೆ ಕೇಂದ್ರಗಳ ಬಳಿ ಹಗಲು-ರಾತ್ರಿ "ಕಾವಲುಗಾರರಂತೆ" ನಿಗಾ ವಹಿಸುವಂತೆ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.

ವಿಡಿಯೋ ಸಂದೇಶದ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೀದಿ, ಚುನಾವಣಾ ಎಣಿಕೆ ಪ್ರಕ್ರಿಯೆಯ ಮೇಲೆ ನಿರಂತರ ನಿಗಾ ಇಡುವುದು ಅಗತ್ಯ ಎಂದಿದ್ದಾರೆ. "ಇಂದಿನಿಂದಲೇ ಮತ ಎಣಿಕೆ ಪ್ರಕ್ರಿಯೆಯ ಮೇಲೆ ಎಲ್ಲರೂ ಸಮಾನವಾಗಿ ಕಣ್ಣಿಡಿ. ಅಗತ್ಯಬಿದ್ದರೆ ನನ್ನ ಸ್ವಂತ ಕ್ಷೇತ್ರವಾದ ಭವಾನಿಪುರದಲ್ಲಿ ನಾನೇ ಸ್ವತಃ ಕಾವಲು ನಿಲ್ಲುತ್ತೇನೆ," ಎಂದು ಅವರು ಘೋಷಿಸಿದರು. ಹಿರಿಯ ನಾಯಕರು ಮತ್ತು ಅಭ್ಯರ್ಥಿಗಳು ಎಲ್ಲಾ 294 ಕ್ಷೇತ್ರಗಳ ಎಣಿಕೆ ಕೇಂದ್ರಗಳಲ್ಲಿ ಖುದ್ದಾಗಿ ಹಾಜರಿರಬೇಕು ಎಂದು ಸೂಚಿಸಿದರು.

ಎಕ್ಸಿಟ್ ಪೋಲ್ ಕೇವಲ 'ಮನೋಸ್ಥೈರ್ಯ' ಕುಗ್ಗಿಸುವ ತಂತ್ರ!

ಬಿಜೆಪಿ ಗೆಲ್ಲಲಿದೆ ಎಂಬ ಮುನ್ಸೂಚನೆಗಳು ಟಿಎಂಸಿ ಕಾರ್ಯಕರ್ತರನ್ನು ಎದೆಗುಂದಿಸಲು ರೂಪಿಸಲಾದ ರಾಜಕೀಯ ಸಂಚು ಎಂದು ಮಮತಾ ಆರೋಪಿಸಿದರು. "ನಾವು 226ರ ಗಡಿ ದಾಟಲಿದ್ದೇವೆ ಎಂಬುದು ಅವರಿಗೂ ತಿಳಿದಿದೆ. ಟಿಎಂಸಿಯ ಈ ವೇಗವನ್ನು ತಡೆಯಲು ಬಿಜೆಪಿಯಿಂದ ಸಾಧ್ಯವಿಲ್ಲ," ಎಂದು ಅವರು ಗುಡುಗಿದರು. 2016 ಮತ್ತು 2021ರ ಚುನಾವಣೆಯಲ್ಲೂ ಎಕ್ಸಿಟ್ ಪೋಲ್‌ಗಳು ಬಿಜೆಪಿಗೆ ಮುನ್ನಡೆ ಎಂದಿದ್ದವು, ಆದರೆ ಅಂತಿಮವಾಗಿ ಫಲಿತಾಂಶ ಉಲ್ಟಾ ಆಗಿತ್ತು ಎಂಬುದನ್ನು ಅವರು ನೆನಪಿಸಿದರು.

ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್‌ಗಳಿಂದ ಎಣಿಕೆ ಕೇಂದ್ರಗಳಿಗೆ ಸಾಗಿಸುವಾಗ ಬಿಜೆಪಿ ಅವುಗಳನ್ನು ಅದಲು-ಬದಲು ಮಾಡಲು ಸಂಚು ರೂಪಿಸಿದೆ ಎಂದು ಮಮತಾ ಗಂಭೀರ ಆರೋಪ ಮಾಡಿದರು. ಈ ನಿರ್ಣಾಯಕ ಸಮಯದಲ್ಲಿ ಕಾರ್ಯಕರ್ತರು ಎಚ್ಚರದಿಂದ ಇರಬೇಕು ಮತ್ತು ಒಬ್ಬರು ನಿದ್ರಿಸುವಾಗ ಇನ್ನೊಬ್ಬರು ಕಾವಲು ಕಾಯುವ ಮೂಲಕ ಪಾಳಿಗಳಲ್ಲಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕಡು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿದ ಜನತೆಗೆ ಮಮತಾ ಕೃತಜ್ಞತೆ ಸಲ್ಲಿಸಿದರು. "ನನ್ನ ಮೇಲೆ ನಂಬಿಕೆ ಇಡಿ, ಬಂಗಾಳದ ಜನರ ಮೇಲೆ ನಂಬಿಕೆ ಇಡಿ. ನಾವು ಮತ್ತೆ 'ಮಾ, ಮಾತಿ, ಮಾನುಷ್' (ತಾಯಿ, ಮಾತೃಭೂಮಿ ಮತ್ತು ಜನರು) ಸರ್ಕಾರವನ್ನು ರಚಿಸುವುದು ಖಚಿತ," ಎಂದರು.

ಪಶ್ಚಿಮ ಬಂಗಾಳ ಎಕ್ಸಿಟ್ ಪೋಲ್ ಭವಿಷ್ಯ

ಬಂಗಾಳದ 294 ಸ್ಥಾನಗಳಲ್ಲಿ ಅಧಿಕಾರ ಹಿಡಿಯಲು 148 ಸ್ಥಾನಗಳ ಅಗತ್ಯವಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಕ್ರಮವಾಗಿ ಶೇ. 93.19 ಮತ್ತು ಶೇ. 92.67 ರಷ್ಟು ಮತದಾನವಾಗಿದೆ. ಇದು ಸ್ವಾತಂತ್ರ್ಯಾನಂತರದ ಅತ್ಯಧಿಕ ಮತದಾನದ ಪ್ರಮಾಣವಾಗಿದೆ.

ಟಿಎಂಸಿ ಪರವಾಗಿ: 'ಪೀಪಲ್ಸ್ ಪಲ್ಸ್' ಸಂಸ್ಥೆಯು ಟಿಎಂಸಿಗೆ 177-187 ಸ್ಥಾನಗಳನ್ನು ನೀಡಿದ್ದರೆ, 'ಜನ್ಮತ್' 195-205 ಸ್ಥಾನಗಳ ಭವಿಷ್ಯ ನುಡಿದಿದೆ.

ಬಿಜೆಪಿ ಪರವಾಗಿ: 'ಮ್ಯಾಟ್ರಿಜ್' (146-161 ಸ್ಥಾನ), 'ಪಿ-ಮಾರ್ಕ್' (150-175 ಸ್ಥಾನ), 'ಪೋಲ್ ಡೈರಿ' (142-171 ಸ್ಥಾನ) ಮತ್ತು 'ಪ್ರಜಾ ಪೋಲ್' (178-208 ಸ್ಥಾನ) ಬಿಜೆಪಿಗೆ ಸ್ಪಷ್ಟ ಮುನ್ನಡೆ ನೀಡುತ್ತಿವೆ.