PM Modi Warns Pakistan ಮಧ್ಯಪ್ರದೇಶದ ಧಾರ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಆಪರೇಷನ್ ಸಿಂಧೂರ'ದ ಮೂಲಕ ಭಾರತೀಯ ಸೇನೆಯು ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದೆ ಎಂದು ಶ್ಲಾಘಿಸಿದರು. ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವನ್ನು ಪುನರುಚ್ಚರಿಸಿದರು.
ಧಾರ್, ಮಧ್ಯಪ್ರದೇಶ (ಸೆ.17): ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 'ಆಪರೇಷನ್ ಸಿಂಧೂರ'ಕ್ಕಾಗಿ ಮತ್ತೊಮ್ಮೆ ಭಾರತೀಯ ಸಶಸ್ತ್ರ ಪಡೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದು ಪಾಕಿಸ್ತಾನವನ್ನು "ಕಣ್ಣು ಮಿಟುಕಿಸುವುದರೊಳಗೆ ಮಂಡಿಯೂರುವಂತೆ ಮಾಡಿತು' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಮಾ ಭಾರತಿ (ಭಾರತ ಮಾತೆ)ಯ ಭದ್ರತೆಗೆ ದೇಶವು ಹೆಚ್ಚಿನ ಆದ್ಯತೆ ನೀಡುತ್ತದೆ. ಪಾಕಿಸ್ತಾನಿ ಉಗ್ರರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದರು. ನಾವು ಆಪರೇಷನ್ ಸಿಂಧೂರ ನಡೆಸಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆವು. ನಮ್ಮ ವೀರ ಸಶಸ್ತ್ರ ಪಡೆಗಳು ಪಾಕಿಸ್ತಾನವನ್ನು ಕಣ್ಣು ಮಿಟುಕಿಸುವುದರೊಳಗೆ ಮಂಡಿಯೂರುವಂತೆ ಮಾಡಿದವು," ಎಂದು ಮಧ್ಯಪ್ರದೇಶದ ಧಾರ್ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.
ಅಳುತ್ತಾ ಹೇಳಿದ್ದ ಜೈಶ್ ಕಮಾಂಡರ್
"ನಿನ್ನೆಯಷ್ಟೇ ದೇಶ ಮತ್ತು ಜಗತ್ತು ಒಬ್ಬ ಪಾಕಿಸ್ತಾನಿ ಉಗ್ರ ಅಳುತ್ತಾ ತನ್ನ ಸ್ಥಿತಿಯನ್ನು ಹೇಳಿಕೊಂಡಿದ್ದನ್ನು ನೋಡಿದೆ. ಇದು ಹೊಸ ಭಾರತ. ಇದು ಯಾವುದೇ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ.ಮನೆಗೆ ನುಗ್ಗಿ ಹೊಡೆಯುತ್ತದೆ," ಎಂದು ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ನಿರ್ಣಾಯಕ ಕ್ರಮವಾದ ಆಪರೇಷನ್ ಸಿಂಧೂರವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಉಗ್ರ ಸಂಘಟನೆಯ ಹೆಸರನ್ನು ಹೇಳಲಿಲ್ಲ, ಆದರೆ ಜೈಶ್-ಎ-ಮೊಹಮ್ಮದ್ (JeM) ಕಮಾಂಡರ್ನ ಹೇಳಲಾದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ಅದರಲ್ಲಿ ಆಪರೇಷನ್ ಸಿಂಧೂರದ ಅಡಿಯಲ್ಲಿ ಭಾರತೀಯ ಪಡೆಗಳು ಮೇ 7 ರಂದು ಪಾಕಿಸ್ತಾನದ ಬಹವಾಲ್ಪುರ್ನಲ್ಲಿರುವ ಗುಂಪಿನ ಪ್ರಧಾನ ಕಚೇರಿಯ ಮೇಲೆ ನಡೆಸಿದ ದಾಳಿಯ ಸಮಯದಲ್ಲಿ ಉಗ್ರಗಾಮಿ ಮಸೂದ್ ಅಜರ್ನ ಕುಟುಂಬವನ್ನು ಛಿಧ್ರಛಿದ್ರ ಮಾಡಿವೆ ಎಂದು ಆತ ಒಪ್ಪಿಕೊಂಡಿದ್ದ.
ಹಲವು ಯೋಜನೆಗಳಿಗೆ ಚಾಲನೆ ನೀಡಿದ ಮೋದಿ
ಇದೇ ವೇಳೆ, ಪ್ರಧಾನಿ ಮೋದಿ ತಮ್ಮ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 'ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ'ಕ್ಕೆ ಚಾಲನೆ ನೀಡಿದರು ಹಾಗೂ ಇಂದು ಧಾರ್ನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
'ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ'ದ ಜೊತೆಗೆ, ಪ್ರಧಾನಿ ರಾಜ್ಯದ 8ನೇ 'ರಾಷ್ಟ್ರೀಯ ಪೋಷಣ್ ಮಾಹ್' ಅಭಿಯಾನಕ್ಕೂ ಚಾಲನೆ ನೀಡಿದರು. ಅವರು 'ಆದಿ ಸೇವಾ ಪರ್ವ'ವನ್ನು ಉದ್ಘಾಟಿಸಿದರು ಮತ್ತು ಭೈನ್ಸೋಲಾ ಗ್ರಾಮದಲ್ಲಿ ಪಿಎಂ ಮಿತ್ರ ಪಾರ್ಕ್ಗೆ ಶಂಕುಸ್ಥಾಪನೆ ಮಾಡಿದರು. ಈ ಪಾರ್ಕ್ ರಾಜ್ಯದ ಜವಳಿ ಉದ್ಯಮಕ್ಕೆ ಸಹಾಯ ಮಾಡುತ್ತದೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಪ್ರಧಾನಿ, "ವಿಶ್ವಕರ್ಮ ಜಯಂತಿಯ ದಿನದಂದು, ಇಂದು ಒಂದು ದೊಡ್ಡ ಕೈಗಾರಿಕಾ ಆರಂಭವಾಗಲಿದೆ. ದೇಶದ ಅತಿದೊಡ್ಡ ಸಮಗ್ರ ಜವಳಿ ಪಾರ್ಕ್ಗೆ ಇಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಈ ಪಾರ್ಕ್ ಭಾರತದ ಜವಳಿ ಉದ್ಯಮಕ್ಕೆ ಹೊಸ ಶಕ್ತಿ ನೀಡುತ್ತದೆ ಮತ್ತು ರೈತರಿಗೆ ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತದೆ, ಹಾಗೂ ನಮ್ಮ ಹೆಚ್ಚಿನ ಸಂಖ್ಯೆಯ ಯುವಕ-ಯುವತಿಯರಿಗೆ ಉದ್ಯೋಗ ನೀಡುತ್ತದೆ. ಈ ಯೋಜನೆಗಳಿಗಾಗಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ," ಎಂದರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ದೇಶಾದ್ಯಂತ ಜೋರಾಗಿ ನಡೆಯುತ್ತಿದ್ದು, ಭಾರತೀಯ ಜನತಾ ಪಕ್ಷ (BJP) ಎರಡು ವಾರಗಳ 'ಸೇವಾ ಪಖ್ವಾಡ'ವನ್ನು ಆಯೋಜಿಸಿದ್ದು, ಈ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. (ANI)


