ಡಾ. ಎಪಿಜೆ ಅಬ್ದುಲ್ ಕಲಾಂ ಅವರು ತಮ್ಮ ಜೀವಿತಾವಧಿಯಲ್ಲಿ ಸರಳತೆಗೆ ಹೆಸರುವಾಸಿಯಾಗಿದ್ದರು. ತಮ್ಮ ನಿಧನದ ನಂತರ ಅವರು ಕುಟುಂಬಕ್ಕೆ ಬಿಟ್ಟುಹೋದ ಆಸ್ತಿ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸಾಮಾನ್ಯವಾಗಿ ಬಹುತೇಕರು ತಮ್ಮ ಮಕ್ಕಳಿಗೆ ಮರಿ ಮೊಮ್ಮಕ್ಕಳು ಕೂತು ಉಂಡರು ಕರಗದಷ್ಟು ಆಸ್ತಿ ಮಾಡಿ ಹೋಗುತ್ತಾರೆ. ಉಸಿರು ನಿಂತ ಮೇಲೆ ಜೊತೆಯಲ್ಲಿ ಯಾವುದನ್ನು ತೆಗೆದುಕೊಂಡು ಹೋಗಲಾಗದು ಎಂಬುದರ ಅರಿವಿದ್ದರೂ, ಅನೇಕರು ಜೀವನಪೂರ್ತಿ ಜಿಪುಣತನ ಮಾಡಿ ಆಸ್ತಿ ಮಾಡಿಟ್ಟಿರುತ್ತಾರೆ. ಮಕ್ಕಳು ಮರಿ ಮಕ್ಕಳು ಅದನ್ನು ಅನುಭವಿಸುತ್ತಾರೆ. ಆದರೆ ಭಾರತದ ನೆಚ್ಚಿನ ರಾಷ್ಟ್ರಪತಿಯಾಗಿದ್ದ ವಿಜ್ಞಾನಿ ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ಡಾ ಎಪಿಜೆ ಅಬ್ದುಲ್ ಕಲಾಂ ಅವರು ತಮ್ಮ ಕುಟುಂಬಕ್ಕಾಗಿ ಏನು ಬಿಟ್ಟು ಹೋಗಿದ್ದಾರೆ ಎಂದು ಗೊತ್ತಾ?

ತಮಿಳುನಾಡಿನ ರಾಮೇಶ್ವರಂನ ಮುಸ್ಲಿಂ ಕುಟುಂಬದಲ್ಲಿ ಆಕ್ಟೋಬರ್ 15, 1931ರಲ್ಲಿ ಜನಿಸಿದ ಅಬ್ದುಲ್ ಕಲಾಂ ಅವರು ಭೌತಶಾಸ್ತ್ರ ಹಾಗೂ ಸ್ಪೇಸ್ ಎಂಜಿನಿಯರಿಂಗ್ ಓದಿದ್ದು, ನಂತರದ 4 ದಶಕಗಳನ್ನು ವಿಜ್ಞಾನಿ ಹಾಗೂ ವಿಜ್ಞಾನ ಆಡಳಿತಗಾರನಾಗಿ ಕಳೆದಿದ್ದಾರೆ.

ಮುಖ್ಯವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ ಕೆಲಸ ಮಾಡಿದ ಅವರು ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಮಿಲಿಟರಿ ಕ್ಷಿಪಣಿ ಅಭಿವೃದ್ಧಿ ಕೆಲಸಗಳಲ್ಲಿ ನಿಕಟವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಡಾವಣಾ ವಾಹನ ತಂತ್ರಜ್ಞಾನದ ಅಭಿವೃದ್ಧಿಯ ಕುರಿತಾದ ಅವರ ಕೆಲಸಕ್ಕಾಗಿ ಅವರನ್ನು ಭಾರತದ ಕ್ಷಿಪಣಿ ಮನುಷ್ಯ (Missile Man of India) ಎಂದು ಕರೆಯಲಾಗುತ್ತಿತ್ತು . 1998 ರಲ್ಲಿ ಭಾರತ ನಡೆಸಿದ ಪೋಖ್ರಾನ್-II ಪರಮಾಣು ಪರೀಕ್ಷೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 1974 ರಲ್ಲಿ ಮೊದಲ ಪರಮಾಣು ಪರೀಕ್ಷೆಯ ನಂತರ ನಡೆದ ಎರಡನೇ ಪರೀಕ್ಷೆ ಆದಾಗಿತ್ತು .

ಹೀಗೆ ದೇಶದ ಹೆಮ್ಮೆಯ ಪುತ್ರ ಎನಿಸಿದ್ದ ಅಬ್ದುಲ್ ಕಲಾಂ ಅವರು 2015ರ ಜುಲೈ 27ರಂದು ಶಿಲ್ಲಾಂಗ್‌ನ ಐಐಎಂನಲ್ಲಿ ಉಪನ್ಯಾಸ ನೀಡುತ್ತಿದ್ದಾಗಲೇ ಹೃದಯಾಘಾತದಿಂದ ತಮ್ಮ 83ನೇ ವಯಸ್ಸಿನಲ್ಲಿ ತೀರಿಕೊಂಡರು. ಕಲಾಂ ಅವರು ನಿಧನರಾಗಿ 10 ವರ್ಷಗಳೇ ಕಳೆದಿವೆ. ಇಂದು ಅವರ 10ನೇ ಪುಣ್ಯಸ್ಮರಣೆ. ಹೀಗಿರುವಾಗ ತಮ್ಮ ಸಾವಿನ ನಂತರ ಅವರು ತಮ್ಮ ಕುಟುಂಬಕ್ಕಾಗಿ ಏನನ್ನು ಬಿಟ್ಟು ಹೋಗಿದ್ದಾರೆ ಎಂಬ ಕುತೂಹಲ ಅನೇಕರಿಗಿರುತ್ತದೆ. ಅದೇನು ಅಂತ ನೋಡೋಣ.

ಅಬ್ದುಲ್ ಕಲಾಂ ಅವರು ನಿಧನರಾದಾಗ ಅವರ ಬಳಿ 2,500 ಪುಸ್ತಕಗಳು, ಒಂದು ಕೈಗಡಿಯಾರ, ಆರು ಶರ್ಟ್‌ಗಳು, ನಾಲ್ಕು ಪ್ಯಾಂಟ್‌ಗಳು, ಮೂರು ಸೂಟ್‌ಗಳು ಮತ್ತು ಒಂದು ಜೊತೆ ಶೂ ಅಷ್ಟೇ ಇದ್ದವು. ಇದರ ಜೊತೆಗೆ 46 ಡಾಕ್ಟರೇಟ್ ಪದವಿ, ಒಂದು ಪದ್ಮಶ್ರೀ ಪ್ರಶಸ್ತಿ ಒಂದು ಪದ್ಮವಿಭೂಷಣ ಪ್ರಶಸ್ತಿ ಹಾಗೂ ಒಂದು ಭಾರತರತ್ನ ಅವರ ಬಳಿ ಇತ್ತು.

ಇದರ ಹೊರತಾಗಿ ಯಾವುದೇ ಐಷಾರಾಮಿ ವಸ್ತುಗಳಾಗಲಿ, ಮನೆಯಾಗಲಿ ಆಸ್ತಿಯಾಗಲಿ, ಟಿವಿ ಪ್ರಿಡ್ಜ್‌ ಕಾರುಗಳಾಗಲಿ ಅವರ ಬಳಿ ಇರಲಿಲ್ಲ. ಈಗ ಮಂತ್ರಿ ಶಾಸಕ,ಮುಖ್ಯಮಂತ್ರಿಯಾಗೋದು ಬೇಡ ಕನಿಷ್ಟ ಗ್ರಾಮ ಪಂಚಾಯಿತಿ ಸದಸ್ಯನೋ ಕಾರ್ಪೋರೇಟರ್‌ ಅಗಿದ್ದರು ಸಾಕು ಮತ್ತೊಂದು ಅವಧಿಯ ವೇಳೆಗೆ ಅವರ ಆಸ್ತಿ ದುಪ್ಪಟ್ಟಾಗಿರುತ್ತದೆ. ಹೀಗಿರುವಾಗ ಭಾರತದ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ ಅವರ ಅವಧಿ ಸೇರಿದಂತೆ ಐದು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಸೇವೆಯಲ್ಲಿ ಕಳೆದ ವ್ಯಕ್ತಿಯೊಬ್ಬರ ಬಳಿ ಕೊನೆಗಾಲದಲ್ಲಿ ಉಳಿದ ವಸ್ತುಗಳು ಇವು ಎಂದರೆ ನಿಜಕ್ಕೂ ಅಚ್ಚರಿಯಾಗದೇ ಇರುವುದಿಲ್ಲ. ಅವರ ಜೀವನ ಅವರ ಸರಳತೆಗೆ ಸಾಕ್ಷಿಯಾಗಿದೆ. ಇಂದು ಅವರಿಲ್ಲ, ಆದರೆ ಅವರನ್ನು ಭಾರತ ಎಂದಿಗೂ ಮರೆಯುವುದಿಲ್ಲ.