ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಅವರು 'ರಾಮ ಮುಸ್ಲಿಂ' ಎಂದು ಹೇಳಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋ ಹಳೆಯದು ಮತ್ತು ಎಡಿಟ್ ಮಾಡಲಾಗಿದೆ ಎಂದು ಅವರು ಹೇಳಿದ್ದು, ಇದು ಬಂಗಾಳ ಚುನಾವಣೆಗೆ ಮುನ್ನ ಟಿಎಂಸಿ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ನವದೆಹಲಿ (ಡಿ.19): ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಗುರುವಾರ 'ಹಿಂದೂ ನಂಬಿಕೆಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ' ಎಂಬ ಬಿಜೆಪಿಯ ಆರೋಪದ ಬಗ್ಗೆ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯ ಪ್ರದೀಪ್ ಭಂಡಾರಿ ಅವರು ಎಕ್ಸ್ನಲ್ಲಿ ಹಂಚಿಕೊಂಡಿರುವ ಪ್ರಶ್ನಾರ್ಹ ವೀಡಿಯೊ ಕಳೆದ ವರ್ಷ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣದ ಎಡಿಟೆಡ್ ರೂಪ ಎಂದು ಮಿತ್ರ ಹೇಳಿದ್ದಾರೆ.
"ಇದು 2024 ರ ಹಳೆಯ ವಿಡಿಯೋ... ಅವರು ಅದನ್ನು ಎಡಿಟ್ ಮಾಡಿ ಈಗ (ಮುಂದಿನ ವರ್ಷದ ಆರಂಭದಲ್ಲಿ ಬಂಗಾಳ ಚುನಾವಣೆಗೆ ಮೊದಲು) ಪ್ರಕಟಿಸಿದ್ದಾರೆ," ಎಂದು ಮಿತ್ರಾ ತಿಳಿಸಿದ್ದಾರೆ. ಬಿಜೆಪಿ ಕ್ಲಿಪ್ ಅನ್ನು ಎಡಿಟ್ ಮಾಡಿದೆ ಎಂದು ಆರೋಪಿಸಿದರು, "ಅವರು ಸಂಪೂರ್ಣ ವಿಡಿಯೋವನ್ನು ತೋರಿಸುತ್ತಿಲ್ಲ. ಅವರು ಅದನ್ನು ಪ್ರಕಟಿಸಿದರೆ ನಾನು ಈ ರೀತಿ ಏನನ್ನೂ ಹೇಳಿಲ್ಲ ಎನ್ನುವುದು ಅವರಿಗೂ ಗೊತ್ತಾಗುತ್ತದೆ' ಎಂದು ಹೇಳಿದ್ದಾರೆ.
35 ಸೆಕೆಂಡ್ನ ಕ್ಲಿಪ್ ಹಂಚಿಕೊಂಡಿದ್ದ ಬಿಜೆಪಿ
ಇದಕ್ಕೂ ಮುನ್ನ ಪ್ರದೀಪ್ ಭಂಡಾರಿ ತಮ್ಮ ಎಕ್ಸ್ ಖಾತೆಯಲ್ಲಿ 35 ಸೆಕೆಂಡುಗಳ ಕ್ಲಿಪ್ ಅನ್ನು ಪೋಸ್ಟ್ ಮಾಡಿ, 2011 ರಲ್ಲಿ ಗೆಲ್ಲುವವರೆಗೆ ಎಡಪಕ್ಷಗಳ ಭದ್ರಕೋಟೆಯಾಗಿದ್ದ ಕಮರ್ಹಟಿಯಿಂದ ಎರಡು ಬಾರಿ ಶಾಸಕರಾಗಿದ್ದ ಮಿತ್ರಾ, 'ರಾಮ ಮುಸ್ಲಿಂ... ಹಿಂದೂ ಅಲ್ಲ' ಎಂದು ಹೇಳಿದ್ದರು ಅನ್ನೋದನ್ನು ತಿಳಿಸಿದ್ದರು.
"ತೃಣಮೂಲ ಪಕ್ಷವು ಹಿಂದೂ ನಂಬಿಕೆಗಳ ಮೇಲೆ ದೈನಂದಿನ ದಾಳಿ, ಹಿಂದೂ ನಂಬಿಕೆ ಮತ್ತು ಬಂಗಾಳಿ ಜನರ ಸಂಪ್ರದಾಯಗಳನ್ನು ಅಪಹಾಸ್ಯ ಮಾಡುವ ಸ್ಥಿತಿಗೆ ಇಳಿದಿದೆ. ಮತ ಬ್ಯಾಂಕ್ ಅನ್ನು ಸಮಾಧಾನಪಡಿಸಲು ಅಗ್ಗದ ಪ್ರಚೋದನೆ... ಅದು (ಮುಖ್ಯಮಂತ್ರಿ) ಮಮತಾ ಬ್ಯಾನರ್ಜಿ ಅವರ ಏಕೈಕ ಆದ್ಯತೆಯಾಗಿದೆ" ಎಂದು ಭಂಡಾರಿ ಹೇಳಿದರು.
"ಇಂತಹ ಹೇಳಿಕೆಗಳು ಕೇವಲ ಅಜ್ಞಾನದಿಂದ ಮಾತ್ರ ಬರುವುದಿಲ್ಲ... ಅವು ರಾಜಕೀಯ ಪ್ರೋತ್ಸಾಹದಿಂದ ಬರುತ್ತವೆ. ಮಮತಾ ಬ್ಯಾನರ್ಜಿ ಮೌನವಾಗಿರಲು ಆರಿಸಿಕೊಂಡಾಗ, ಈ ಅವಮಾನಕ್ಕೆ ಅವರ ಅನುಮೋದನೆ ಇದೆ ಎಂಬುದು ಸ್ಪಷ್ಟವಾಗುತ್ತದೆ."
ತೃಣಮೂಲ-ಬಿಜೆಪಿ ನಡುವೆ ವಾಕ್ಸಮರ
ತೃಣಮೂಲ ಮತ್ತು ಬಿಜೆಪಿ ಚುನಾವಣೆಗೆ ಮುಂಚಿತವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿವೆ. ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಥವಾ SIR ಬಗ್ಗೆ ಈಗಾಗಲೇ ವಾಗ್ವಾದ ನಡೆಸಿವೆ.
ಈ ತಿಂಗಳು ಕೋಲ್ಕತ್ತಾಗೆ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿ ನೀಡಿದ್ದಾಗ ಉಂಟಾದ ಅವ್ಯವಸ್ಥೆಯ ಬಗ್ಗೆ ತೃಣಮೂಲ ಪಕ್ಷವೂ ಟೀಕೆಗೆ ಗುರಿಯಾಗಿದೆ; ಸರಿಯಾಗಿ ಯೋಜಿಸದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಾಲ್ಟ್ ಲೇಕ್ ಸಿಟಿ ಕ್ರೀಡಾಂಗಣ ಸಂಪೂರ್ಣ ಅಸ್ತವ್ಯಸ್ಥವಾಗಿ ಕಂಡಿತ್ತು.
'ಬಾಬರಿ ಮಸೀದಿ' ಯೋಜನೆ ಕೂಡ ಟಿಎಂಸಿ ಪಾಲಿಗೆ ಬಿಸಿತುಪ್ಪವಾಗಿ ಮಾರ್ಪಟ್ಟಿದೆ. ಈಗ ಅಮಾನತುಗೊಂಡಿರುವ ತೃಣಮೂಲ ಶಾಸಕ ಹುಮಾಯೂನ್ ಕಬೀರ್ ಅವರ ಅಯೋಧ್ಯೆಯಲ್ಲಿ ಕೆಡವಲಾದ ಮಸೀದಿಯ ರೀತಿಯದ್ದೇ ಇನ್ನೊಂದು ಮಸೀದಿಯನ್ನು ಮುರ್ಷಿದಾಬಾದ್ನಲ್ಲಿ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಇದು ಅತ್ಯಂತ ಆಕ್ರಮಣಕಾರಿಯಾಗಿ ನಡೆಯಲಿರಯವ ಚುನಾವಣೆಗೆ ಮತ್ತೊಂದು ಆಯಾಮವನ್ನು ಸೇರಿಸಿದೆ.


