ಬೆಳಗಾವಿ ಜಿಲ್ಲೆಯ ಮುರಗೋಡ ಠಾಣಾ ವ್ಯಾಪ್ತಿಯಲ್ಲಿ, 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. ಆರೋಪಿಗಳ ಜೀವ ಬೆದರಿಕೆಯಿಂದಾಗಿ 9 ದಿನಗಳ ನಂತರ ದೂರು ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು.

ಬೆಳಗಾವಿ (ಡಿ.02): ಬೆಳಗಾವಿ ಜಿಲ್ಲೆಯಲ್ಲಿ ಮನುಷ್ಯತ್ವ ಮರೆಯುವ ಹೇಯ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, 7ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾ*ಚಾರ ಎಸಗಿದ ಆಘಾತಕಾರಿ ಘಟನೆ ವರದಿಯಾಗಿದೆ. ನವೆಂಬರ್ 23 ರಂದು ಈ ಘಟನೆ ನಡೆದಿದ್ದರೂ, ಬಾಲಕಿಯ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಕಾರಣ ಪ್ರಕರಣವು ನಿನ್ನೆ ತಡವಾಗಿ ದಾಖಲಾಗಿದೆ.

ಹಿಟ್ಟು ಬೀಸಲು ಹೋದಾಗ ನಡೆದ ಕೃತ್ಯ:

ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ನಿವಾಸಿ ಅಪ್ರಾಪ್ತ ಬಾಲಕಿ, ನವೆಂಬರ್ 23 ರಂದು ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ಹಿಟ್ಟಿನ ಗಿರಣಿಗೆ ಹೋಗುತ್ತಿದ್ದಳು. ಇದೇ ಸಮಯದಲ್ಲಿ ಬಾಲಕಿಯನ್ನು ಹಿಂಬಾಲಿಸಿದ ಇಬ್ಬರು ಆರೋಪಿಗಳಾದ ಮಣಿಕಂಠ ದಿನ್ನಿಮನಿ (28) ಮತ್ತು ಈರಣ್ಣ ಸಂಕಮ್ಮನವರ ಎಂಬುವವರು ಆಕೆಯ ಮೇಲೆ ದಾಳಿ ನಡೆಸಿದ್ದಾರೆ. ಯಾರೂ ಇಲ್ಲದ ಏಕಾಂತದ ಪ್ರದೇಶವನ್ನು ಗಮನಿಸಿ, ಬಾಲಕಿಯನ್ನು ಬಲವಂತವಾಗಿ ರಸ್ತೆಯ ಪಕ್ಕದಲ್ಲಿದ್ದ ಕಬ್ಬಿನ ಗದ್ದೆಗೆ ಎಳೆದೊಯ್ದು ಈ ಇಬ್ಬರು ಸಾಮೂಹಿಕವಾಗಿ ಅತ್ಯಾ*ಚಾರವೆಸಗಿದ್ದಾರೆ. ಕೃತ್ಯದ ಬಳಿಕ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಜೀವ ಬೆದರಿಕೆಯಿಂದ ತಡವಾದ ದೂರು:

ಈ ಹೇಯ ಕೃತ್ಯ ನಡೆದ ಕೂಡಲೇ ಬಾಲಕಿ ವಿಷಯವನ್ನು ತನ್ನ ಕುಟುಂಬಸ್ಥರ ಗಮನಕ್ಕೆ ತಂದಿದ್ದಾಳೆ. ಆದರೆ, ಆರೋಪಿಗಳು ಬಾಲಕಿಯ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಭಯದಿಂದ ಕುಟುಂಬದವರು ಪ್ರಕರಣವನ್ನು ತಕ್ಷಣವೇ ದಾಖಲಿಸಲು ಹಿಂಜರಿದಿದ್ದರು ಎನ್ನಲಾಗಿದೆ. ಘಟನೆ ನಡೆದ 9 ದಿನಗಳ ಬಳಿಕ, ನೊಂದ ಕುಟುಂಬವು ಧೈರ್ಯ ಮಾಡಿ ನಿನ್ನೆ (ಡಿ.01) ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ದೂರು ದಾಖಲಿಸಿಕೊಂಡ ತಕ್ಷಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಈ ಕೃತ್ಯದ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ (POCSO Act) ಪ್ರಕರಣ ದಾಖಲಾಗಿದೆ. ಪ್ರಸ್ತುತ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಶೀಘ್ರವಾಗಿ ಬಂಧಿಸಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.