ಬೆಂಗಳೂರಿನ ಎಂ.ಜಿ. ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಊಟಕ್ಕೆ ಬಂದಿದ್ದ ಯುವತಿಯೊಬ್ಬರಿಗೆ ಮ್ಯಾನೇಜರ್ ರೇಪ್ ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹೋಟೆಲ್ ಆಡಳಿತ ಮಂಡಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಿದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು (ಏ.28): ಸಿಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಜನನಿಬಿಡ ಮತ್ತು ಪ್ರತಿಷ್ಠಿತ ಪ್ರದೇಶವಾದ ಎಂ.ಜಿ. ರಸ್ತೆಯ ಖಾಸಗಿ ಹೋಟೆಲ್‌ವೊಂದರಲ್ಲಿ ಯುವತಿಯೊಬ್ಬರ ಮೇಲೆ ಹೋಟೆಲ್ ಮ್ಯಾನೇಜರ್ ದರ್ಪ ತೋರಿರುವ ಘಟನೆ ನಡೆದಿದೆ. ಊಟಕ್ಕೆ ಬಂದಿದ್ದ ಯುವತಿಗೆ ನಿನ್ನ ರೇ*ಪ್ ಮಾಡೋದಾಗಿ ಬೆದರಿಕೆ ಹಾಕಿ, ಹಲ್ಲೆ ನಡೆಸಿರುವ ಆರೋಪದ ಮೇಲೆ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಘಟನೆಯ ವಿವರ:

ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಕೀರ್ತಿ ಎಂಬ ಯುವತಿ ತಮ್ಮ ಸ್ನೇಹಿತರೊಂದಿಗೆ ಎಂ.ಜಿ. ರಸ್ತೆಯಲ್ಲಿರುವ 'ಖಾಸಗಿ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ಹೋಟೆಲ್‌ನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಹೋಟೆಲ್ ಮ್ಯಾನೇಜರ್ ರವಿ ಎಂಬಾತ ಯುವತಿಯೊಂದಿಗೆ ಕಿರಿಕ್ ತೆಗೆದಿದ್ದಾನೆ. ಯಾವುದೇ ಕಾರಣವಿಲ್ಲದೆ ಏಕವಚನದಲ್ಲಿ ಮಾತನಾಡಲು ಶುರು ಮಾಡಿದ್ದಾನೆ.

'ನಿನ್ನನ್ನ ರೇ*ಪ್ ಮಾಡ್ತೀನಿ' ಎಂದು ಬೆದರಿಕೆ:

ಮ್ಯಾನೇಜರ್‌ನ ಅಸಭ್ಯ ವರ್ತನೆಯನ್ನು ಕೀರ್ತಿ ಅವರು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ಆರೋಪಿ ರವಿ, ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, 'ನಿನ್ನನ್ನು ರೇಪ್ ಮಾಡ್ತೀನಿ' ಎಂದು ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಯುವತಿಯ ಮೇಲೆ ಹಲ್ಲೆ ನಡೆಸಿರುವ ಆರೋಪಿ, ಆಕೆಯ ಬಟ್ಟೆ ಹರಿಯಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಯುವತಿಯ ಕೈಗೆ ಗಾಯಗಳಾಗಿವೆ.

ಸಿಸಿಟಿವಿ ಪುರಾವೆ ನಾಶಕ್ಕೆ ಯತ್ನ?

ಘಟನೆ ನಡೆದ ಬೆನ್ನಲ್ಲೇ ಕೀರ್ತಿ ಅವರು ಹಲಸೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆಯೇ ಹೋಟೆಲ್ ಆಡಳಿತ ಮಂಡಳಿಯು ಅಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು (CCTV Footage) ಡಿಲೀಟ್ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮ್ಯಾನೇಜರ್ ಮಾಡಿರುವ ಕೃತ್ಯವನ್ನು ಮುಚ್ಚಿ ಹಾಕಲು ಈ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.

ಪೊಲೀಸ್ ತನಿಖೆ ಚುರುಕು:

ಯುವತಿಯ ದೂರಿನ ಅನ್ವಯ ಹಲಸೂರು ಪೊಲೀಸರು ಮ್ಯಾನೇಜರ್ ರವಿ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಹೋಟೆಲ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸುತ್ತಿದ್ದು, ತಾಂತ್ರಿಕವಾಗಿ ಡಿಲೀಟ್ ಮಾಡಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಮರುಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲೇ ಮಹಿಳೆಯರಿಗೆ ಸುರಕ್ಷತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.