ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಗುಪ್ತ ಭೋಜನಕೂಟವು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಶೀಘ್ರದಲ್ಲೇ ದೆಹಲಿಯಿಂದ ಕರೆ ಬರಲಿದೆ ಎಂದು ಡಿಕೆಶಿ ತಮ್ಮ ಆಪ್ತರಿಗೆ ಸೂಚ್ಯವಾಗಿ ತಿಳಿಸಿದ್ದು, ಯಾವುದೇ ಕ್ಷಣದಲ್ಲಾದರೂ ಅವರು ಸಿಎಂ ಆಗುತ್ತಾರೆ ಎಂದು ಶಾಸಕ ಉದಯ ಕದಲೂರು ಹೇಳಿದ್ದಾರೆ.
ಬೆಂಗಳೂರು (ಡಿ.12): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರ ನೇತೃತ್ವದಲ್ಲಿ ನಡೆದ ಗುಪ್ತ ಭೋಜನಕೂಟ (ಡಿನ್ನರ್ ಮೀಟಿಂಗ್) ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ ಎನ್ನುತ್ತಲೇ, ಶಾಸಕರು ಮತ್ತು ಆಪ್ತರಿಗೆ ಡಿಕೆಶಿ ದೆಹಲಿಯತ್ತ ತಮ್ಮ ಚಿತ್ತವಿರುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಇತ್ತ, ಶಾಸಕ ಉದಯ ಕದಲೂರು ಅವರು 'ಯಾವುದೇ ಕ್ಷಣದಲ್ಲಾದರೂ ಡಿ.ಕೆ.ಶಿ ಸಿಎಂ ಆಗುತ್ತಾರೆ' ಎಂದು ನೀಡಿರುವ ಹೇಳಿಕೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಡಿನ್ನರ್ ಮೀಟಿಂಗ್ನಲ್ಲಿ ಡಿಕೆಶಿ ಸೂಚ್ಯ ಸಂದೇಶ:
ಡಿಕೆಶಿ ಅವರು ತಮ್ಮ ಆಪ್ತ ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಡಿನ್ನರ್ ಮೀಟಿಂಗ್ಗೆ ಸುಮಾರು ೪೩ ಶಾಸಕರು, ಸಚಿವರು ಮತ್ತು ಪರಿಷತ್ ಸದಸ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಗಣ್ಯರು ಹಾಜರಾಗಿದ್ದರು. ತಡವಾಗಿ ಆಗಮನ, ಔಪಚಾರಿಕ ಚರ್ಚೆ: ಕ್ಯಾಬಿನೆಟ್ ಸಭೆ ತಡವಾದ ಕಾರಣ ಡಿಕೆಶಿ ಅವರು ಭೋಜನಕೂಟ ಆರಂಭಗೊಂಡು ಮೂರು ತಾಸುಗಳ ಬಳಿಕ ಆಗಮಿಸಿದರು. ಆಗಮಿಸಿದ ನಂತರ ಪ್ರತಿಯೊಂದು ಟೇಬಲ್ ಬಳಿಯೂ ತೆರಳಿ ಶಾಸಕರೊಂದಿಗೆ ಆತ್ಮೀಯವಾಗಿ ಮಾತನಾಡಿದರು.
ಸಿಎಂ ಸ್ಥಾನದ ಪ್ರಸ್ತಾಪ:
ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಪರೋಕ್ಷವಾಗಿ ಮಾತನಾಡಿದ ಡಿಸಿಎಂ, ತಮ್ಮ ಮಾತುಕತೆಯ ಸಂದರ್ಭದಲ್ಲಿ "ಶೀಘ್ರದಲ್ಲಿಯೇ ದೆಹಲಿಯಿಂದ ಕರೆ ಬರಲಿದೆ" ಎಂಬ ಸೂಚ್ಯ ಸಂದೇಶವನ್ನು ಶಾಸಕರಿಗೆ ರವಾನಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆಯನ್ನು ಬಲಪಡಿಸಿದೆ. ಭೋಜನಕೂಟದಲ್ಲಿ ಕುಮಾರಸ್ವಾಮಿ ಮತ್ತು ಅಮಿತ್ ಶಾ ಭೇಟಿ, ಹಲವು ಡಿಸಿಸಿ ಬ್ಯಾಂಕ್ಗಳಲ್ಲಿ ಪಕ್ಷದ ಹಿಡಿತ ಸಾಧಿಸಿರುವ ಕುರಿತು ಸಹ ಡಿಕೆಶಿ ಉಲ್ಲೇಖಿಸಿದ್ದಾರೆ. ಈ ಭೋಜನಕೂಟದಲ್ಲಿ ಗೋವಾ ಮತ್ತು ಬೆಳಗಾವಿ ಮೂಲದ ಉದ್ಯಮಿಗಳು ಸಹ ಭಾಗವಹಿಸಿದ್ದು, ಡಿಕೆಶಿ ಜೊತೆ ಫೋಟೋ ಶೂಟ್ ನಡೆಸಿದ್ದಾರೆ. ಶಾಸಕರು ಮತ್ತು ಸಚಿವರ ಟೇಬಲ್ಗಳ ಬಳಿ ಬೇರೆಯವರಿಗೆ ಅವಕಾಶವಿರಲಿಲ್ಲ ಎಂಬುದು ಸಭೆಯ ಮಹತ್ವವನ್ನು ಸಾರಿ ಹೇಳುತ್ತದೆ.
ಡಿ.ಕೆ.ಶಿ ಸಿಎಂ ಆಗಬೇಕು, ಆಗ್ತಾರೆ: ಉದಯ ಕದಲೂರು ದಿಟ್ಟ ಹೇಳಿಕೆ:
ಡಿನ್ನರ್ ಮೀಟಿಂಗ್ನಲ್ಲಿ ಭಾಗವಹಿಸಿದ್ದ ಶಾಸಕ ಉದಯ ಕದಲೂರು ಅವರು ಬಹಿರಂಗವಾಗಿ ಮಾತನಾಡಿ, 'ನಾವೆಲ್ಲಾ ಊರು ಬಿಟ್ಟು ಬಂದಿದ್ದೇವಿ, ಅದಕ್ಕೆ ಡಿನ್ನರ್ಗೆ ಸೇರಿದ್ವಿ, ಅದರಲ್ಲಿ ತಪ್ಪಿಲ್ಲ' ಎಂದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ನೇರ ಹೇಳಿಕೆ ನೀಡಿದ್ದು, 'ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು. ಅವರು ಆಗ್ತಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಡಿ.ಕೆ. ಶಿವಕುಮಾರ್ ಜೊತೆ 140 ಶಾಸಕರು ಇದ್ದಾರೆ ಮತ್ತು ಅವರೇ ಎಲ್ಲರಿಗೂ ಬಿ ಫಾರಂ ಕೊಟ್ಟವರು ಎಂದು ಹೇಳುವ ಮೂಲಕ ಡಿಕೆಶಿ ಪರ ಶಾಸಕರ ಬೆಂಬಲವನ್ನು ಪ್ರದರ್ಶಿಸಿದ್ದಾರೆ.
ಹೈಕಮಾಂಡ್ ನಿರ್ಧಾರ:
ನಾಯಕತ್ವದ ಕುರಿತು ಹೇಳಿಕೆ ನೀಡದಂತೆ ಯಾರು ಹೇಳಿಲ್ಲ, ಈ ಬಗ್ಗೆ ಹೈಕಮಾಂಡ್ ಚರ್ಚೆ ಮಾಡಲಿದೆ ಎಂದೂ ಕದಲೂರು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ಡಿಕೆಶಿ ನೇತೃತ್ವದ ಈ ಡಿನ್ನರ್ ಮೀಟಿಂಗ್ ಮತ್ತು ಶಾಸಕರ ಬಹಿರಂಗ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗೆ ಮತ್ತಷ್ಟು ಇಂಧನ ತುಂಬಿದೆ. ಈ ಮೂಲಕ ರಾಜ್ಯದಲ್ಲಿ ಜನವರಿಯಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾಗಲಿದೆ ಎಂಬುದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಆವರೆಗೂ ಯಾವುದೇ ರಾಜಕೀಯ ಹೇಳಿಕೆ ಕೊಡದೇ ಡಿ.ಕೆ. ಶಿವಕುಮಾರ್ ಮೌನವಾಗಿರಲು ತೀರ್ಮಾನಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.


