CT Ravi: ಬಿಜೆಪಿ ಮುಖಂಡ ಸಿ.ಟಿ. ರವಿ, ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರ ಸಂಕಷ್ಟಗಳಿಗೆ ಸ್ಪಂದಿಸದೆ, ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗಿಲಿಗಿಲಿಯಂತಾ ಸೌಂಡ್ ಮಾಡಿಸ್ಕೊಂಡು ಕರ್ಕೊಂಡು ಬರ್ತಾರೆ ಎಂದರು.
ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸಿ.ಟಿ.ರವಿ, ರಾಜ್ಯ ಕಾಂಗ್ರೆಸ್ ಸರಕಾರ ಜನರ ಪಾಲಿಗೆ ಬದುಕಿದ್ದೂ ಸತ್ತಂತಾಗಿದೆ. ಜನರ ಸಂಕಷ್ಟಕ್ಕಾಗದ ಸರಕಾರ ಜನರ ಪಾಲಿಗೆ ಇದ್ದೂ ಸತ್ತಂತೆ ಎಂದು ವಾಗ್ದಾಳಿ ನಡೆಸಿದರು. ರೈತರ ಆತ್ಮ*ಹತ್ಯೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಕಬ್ಬು, ತೊಗರಿ, ಮೆಕ್ಕೆಜೋಳ, ಭತ್ತ ಬೆಳೆದ ರೈತರು, ಕಾಡು ಪ್ರಾಣಿಗಳ ಸಂಕಷ್ಟ, ಅರಣ್ಯ ಇಲಾಖೆಯ ಕಾಟದಿಂದ ರೈತರು ಹೈರಾಣಾಗಿದ್ದಾರೆ. ರೈತರು ಚಳುವಳಿಯ ದಾರಿ ಹಿಡಿದರೂ ಅತಿವೃಷ್ಠಿ ಪರಿಹಾರ ಸಿಕ್ಕಿಲ್ಲ. ರಾಜ್ಯ ಸರ್ಕಾರ ಯಾವುದೇ ಖರೀದಿ ಕೇಂದ್ರ ತೆರೆಯಲಿಲ್ಲ. ಕೇಂದ್ರ ಸರಕಾರ ನಿಗದಿ ಮಾಡಿದ ಎಫ್ಆರ್ಪಿ ಕೊಡುವ ಸಾಮರ್ಥ್ಯ ಹಾಗೂ ಯೋಗ್ಯತೆ ಸರಕಾರ ಕಳೆದುಕೊಂಡಿದೆ. ಈ ಸರಕಾರ ಕೇವಲ ದಲ್ಲಾಳಿಗಳ ಪಾಲಿಗೆ, ಲೂಟಿ ಹೊಡೆಯುವವರ ಪಾಲಿಗೆ ಬದುಕಿದೆ ಎಂದು ಆರೋಪಿಸಿದರು.
ಈ ಸರಕಾರ ರೈತರ ಪಾಲಿಗೆ ಬದುಕಿದ್ದೂ ಸತ್ತಂತೆ!
ಶೇ.63 ಪರ್ಸೆಂಟ್ ಅಂಡರ್ ಎಸ್ಟಿಮೇಟ್ ಮಾಡಿದ್ದು, ಗುತ್ತಿಗೆದಾರರು ಸರಕಾರದ ಕಮಿಷನ್ 80% ದಾಟಿದೆ ಅಂತಾರೆ. ಭ್ರಷ್ಟಾಚಾರ, ಬೆಲೆ ಏರಿಕೆ ಬಿಟ್ರೆ ಸರಕಾರ ಬೇರೆ ಯಾವ ಕಾರಣಕ್ಕೆ ಸುದ್ದಿಯಾಗಿದೆ ಎಂದು ಪ್ರಶ್ನಿಸಿದ ಸಿ.ಟಿ.ರವಿ, ನಾಟಿ ಕೋಳಿ ಚೆನ್ನಾಗಿದೆ ಅನ್ನೋದು ರಾಜ್ಯದ ಜನರು ಸಂಭ್ರಮ ಪಡೋ ಸುದ್ದೀನಾ ? ಡಿಕೆಶಿ, ಸಿದ್ಧರಾಮಯ್ಯ ಯಾವ ವಾಚ್ ಕಟ್ಟಿದ್ರು ಅನ್ನೋದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ಪಡೋ ಸುದ್ದಿನಾ ? ಒಳ್ಳೆ ರಸ್ತೆ ಮಾಡಿದ್ರೆ, ಕೈಗಾರಿಕೆ ತೆರೆದ್ರೆ ಇಂತದ್ದೆಲ್ಲಾ ಒಳ್ಳೆಯ ಸುದ್ದಿಯಾಗುತ್ತದೆ. ತುಂಗಭದ್ರ ಅಣೆಕಟ್ಟಿನ ಗೇಟ್ ಹಾಕುವ ಯೋಗ್ಯತೆ ಒಂದೂವರೆ ವರ್ಷದಿಂದ ಇಲ್ಲಾಂದ್ರೆ ಈ ಸರಕಾರ ರೈತರ ಪಾಲಿಗೆ ಬದುಕಿದ್ದೂ ಸತ್ತಂತೆ ಎಂದು ಹೇಳಿದರು.
ರಾಜ್ಯ ಸರಕಾರದಿಂದ ಅನುದಾನಗಳು ಬಿಡುಗಡೆಯಾಗುತ್ತಿದ್ದು, ಅನುಷ್ಠಾನಗೊಳ್ಳದೇ ಲೂಟಿಯಾಗ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ 187 ಕೋಟಿ ರೂ. ಬಿಡುಗಡೆಯಾಗಿತ್ತು. ಆದರೆ, ಅನುಷ್ಠಾನಗೊಳ್ಳದೇ, ಹಣ ಲೂಟಿಯಾಯ್ತು, ಕಾಂಗ್ರೆಸ್ ಚುನಾವಣೆಗೆ ಬಳಕೆಯಾಯ್ತು. ನೀವು ಪ್ರಾಮಾಣಿಕರಾಗಿದ್ರೆ ವಾಚ್ ಎಲ್ಲಾ ಗಿಫ್ಟ್ ಕೊಡ್ತಾರಾ ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದರು.
ನೀವು ಭ್ರಷ್ಟರಾಗಿದ್ದರೆ, ಭ್ರಷ್ಟ ವ್ಯವಸ್ಥೆ ಪೋಷಣೆ ಮಾಡ್ತಿದ್ರೆ ದೊಡ್ಡ ದೊಡ್ಡ ಖದೀಮರು, ಸಕಲಕಲಾವಲ್ಲಭರು ಇವರಿಗೆ ಯಾವುದು ಪ್ರಿಯ ಅಂತಾ ನೋಡ್ತಾರೆ. ಇವರಿಗೆ ವಾಚ್ ಕಂಡ್ರೆ ಇಷ್ಟ ಅಂದ್ರೆ ವಾಚ್ ತಗೊಂಡು ಬರ್ತಾರೆ, ಮೊಬೈಲ್ ಇಷ್ಟ ಅಂದ್ರೆ ಮೊಬೈಲ್ ತಗೊಂಡು ಬರ್ತಾರೆ. ಬಳೆ ಸದ್ದಿಗೆ ಇವರು ಅಲ್ಲಾಡ್ತಾರೆ ಅಂದ್ರೆ ಅದನ್ನೇ ಗಿಲಿಗಿಲಿಯಂತಾ ಸೌಂಡ್ ಮಾಡಿಸ್ಕೊಂಡು ಕರ್ಕೊಂಡು ಬರ್ತಾರೆ ಎಂದರು.
ಅವಿಶ್ವಾಸ ಮಂಡನೆಗೆ ಸಲಹೆ
ರಾಜ್ಯದ ಜನರ ವಿಶ್ವಾಸ ಸರಕಾರ ಕಳೆದುಕೊಂಡಿದ್ದು, ತಾಂತ್ರಿಕವಾಗಿ ಸದ್ಯ ನಂಬರ್ ಗೇಮ್ನಲ್ಲಿ ಈ ಸರಕಾರವಿದೆ. ರಾಜ್ಯದ ಜನರ ವಿಶ್ವಾಸ ಈ ಸರಕಾರದ ಮೇಲಿಲ್ಲ, ರಾಜ್ಯದ ಜನರ ವಿಶ್ವಾಸವಿದ್ರೆ ಅವರು ಡಿಕ್ಲೇರ್ ಮಾಡಲಿ. ಸಿ.ಟಿ.ರವಿ ಹೇಳಿದ ಚಾಲೆಂಜ್ ಸ್ವೀಕಾರ ಮಾಡಿ ನಾವು ಚುನಾವಣೆಗೆ ಹೋಗ್ತೀವಿಂತ ಹೇಳಲಿ. ಚುನಾವಣೆಗೆ ಹೋದ್ರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕೂಡಾ ಗೆಲ್ಲೋದು ಕಷ್ಟ. ನಾವು ಅವಿಶ್ವಾಸ ನಿರ್ಣಯ ಮಂಡಿಸುವುದರ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಕಾಂಗ್ರೆಸಿನಿಂದಲೇ ಕೆಲವರಿಂದ ಅವಿಶ್ವಾಸ ಮಂಡನೆಗೆ ಸಲಹೆ ಬಂದಿದ್ದು, ನಮ್ಮ ತಾಕತ್ತು ತೋರಿಸ್ತೇವೆ ಅಂದಿದ್ದಾರೆ. ಸದ್ಯ ಆ ನಿರ್ಣಯ ತೆಗೆದುಕೊಂಡಿಲ್ಲ, ಜನರು ವಿಶ್ವಾಸ ಕಳೆದುಕೊಂಡಿರುವುದರಿಂದ ಬೀದಿಯಲ್ಲಿ ಚಳುವಳಿ ಮಾಡ್ತಿದ್ದಾರೆ ಎಂದು ಹೇಳಿದರು.
ಇಲ್ಲಿ ಒಳ್ಳೆಯ ನಾಟಿ ಕೋಳಿ ಅಡುಗೆ ಮಾಡಲಾಗುವುದು
ನಿಮ್ಮ ಕಡೆ ಒಳ್ಳೇ ಕೋಳಿ ಇದ್ಯಾ ? ವಿಧಾನಸಭಾ ಅಧಿವೇಶನ ಬಿಟ್ಟು ಕಾಂಗ್ರೆಸ್ ಮುಖಂಡರು ಬರ್ತಾರೆ. ಇವರ ಕಣ್ಣಲ್ಲಿ ನೀರಿಲ್ಲ, ಕಷ್ಟದಲ್ಲಿರುವವರ ಪಾಲಿಗೆ ಇವರ ಕಣ್ಣಲ್ಲಿ ನೀರು ಬರಲ್ಲ. ಒಳ್ಳೆಯ ಕೋಳಿಯಿದ್ರೆ ಇವರು ಬಾಯಲ್ಲಿ ನೀರು ಇಳಿಸಿಕೊಂಡು ಬರ್ತಾರೆ. ನಿಮಗೆ ಅನುದಾನ ಬೇಕಂದ್ರೆ ಇಲ್ಲಿ ಒಳ್ಳೆಯ ನಾಟಿ ಕೋಳಿ ಅಡುಗೆ ಮಾಡಲಾಗುವುದು ಅಂತಾ ಕರೆಯಿರಿ. ದಲ್ಲಾಳಿಗಳು ಯಾರಿಗೆ ಯಾವ ಸೌಂಡ್ ಇಷ್ಟ ಅಂತಾ ಪತ್ತೆ ಮಾಡಿರ್ತಾರೆ, ಆಯಾ ಸೌಂಡಿಗೆ ತಕ್ಕಂತೆ ತಯಾರಾಗಿ ಬಂದಿರ್ತಾರೆ. ನಿಮಗೆ ಲೈವ್ ಬ್ಯಾಂಡ್ ಅಂದ್ರೆ ಲೈವ್ ಬ್ಯಾಂಡ್, ಹಳ್ಳಿ ವಾದ್ಯಕ್ಕೆ ಕುಳಿತೀರಿ ಅಂದ್ರೆ ಹಳ್ಳಿ ವಾದ್ಯಕ್ಕೆ ಕರೆದುಕೊಂಡು ಬರ್ತಾರೆ. ಅವರಿಗೆ ಯಾವ ವಾದ್ಯ ಇಷ್ಟ ಆ ವಾದ್ಯವನ್ನು ಕರೆದುಕೊಂಡು ಬರ್ತಾರೆ, ಯಾವ ವಾದ್ಯ ಇಷ್ಟ ಅಂತಾ ಹೇಳಿದ್ರೆ ಸಾಕು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


