ನಾರಿ ಶಕ್ತಿ ವಂದನಾ ಮಸೂದೆಗೆ ಉಂಟಾದ ಸೋಲು ಪ್ರಜಾಪ್ರಭುತ್ವದ ಕರಾಳ ದಿನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮಹಿಳಾ ಕುಲಕ್ಕೆ ಅಪಮಾನ ಮಾಡಿವೆ ಎಂದು ಆರೋಪಿಸಿದ ಅವರು, ಭವಿಷ್ಯದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಲಿದೆ ಎಂದರು..

ಬೆಂಗಳೂರು (ಏ.18) ನಾರಿ‌ ಶಕ್ತಿ‌ ವಂದನಾ ಮಸೂದೆಗೆ ಸೋಲುಂಟಾಗಿರುವುದು ಭಾರತದ ಪ್ರಜಾ ಪ್ರಭುತ್ವದ ವ್ಯವಸ್ಥೆಯ ಕರಾಳ‌ ದಿನವಾಗಿದೆ. ಇಂದಿನ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಕೇವಲ‌ ಭಾರತೀಯ ನಾರಿ‌ಕುಲಕ್ಕಷ್ಟೇ ಅಲ್ಲ‌, ಇಡೀ ವಿಶ್ವದ ಮಹಿಳಾ ಕುಲವನ್ನು‌ ಅಪಮಾನಿಸಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. 

ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ನೈಜ ಉದ್ದೇಶವನ್ನು ಸ್ವಾತಂತ್ರ್ಯಾನಂತರದಿಂದಲೂ ಮೆಟ್ಟಿ ನಿಲ್ಲುವುದು, ಸರ್ವಾಧಿಕಾರ ಮೆರೆಯುವುದು‌, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ. ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅದನ್ನು ಸ್ವೇಚ್ಛಾಚಾರದಿಂದ ಕಾಂಗ್ರೆಸ್ ಬಳಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ನಾರಿ ಶಕ್ತಿ ವಂದನಾ ಮಸೂದೆಗೆ ಸೋಲಿಗೆ ಕಿಡಿ

ಪ್ರಧಾನಿ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಸ್ವಾತಂತ್ರ್ಯದ ನೈಜತೆ ಹಾಗೂ ಸಂವಿಧಾನದ ಶಕ್ತಿಯನ್ನು ನಾರಿ ಕುಲಕ್ಕೆ ಸಮರ್ಪಿಸಬೇಕೆಂಬ ಮಹತ್ವಾಕಾಂಕ್ಷೆಯ ಮಸೂದೆಗೆ ಹಿನ್ನೆಡೆಯುಂಟಾಗಿರುವುದು ಕೇವಲ ತಾತ್ಕಾಲಿಕವಷ್ಟೇ. ಇಡೀ ದೇಶದ ಮಹಿಳಾ‌ಶಕ್ತಿ ಇಂಡೀ ಒಕ್ಕೂಟಕ್ಕೆ ಭವಿಷ್ಯತ್ತಿನಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. 

ಅತೀ ಶೀಘ್ರದಲ್ಲಿ ಲಿಂಗ ಸಮಾನತೆ, ಪ್ರಜಾ ಪ್ರಭುತ್ವದ ಸುಂದರತೆ ಅರಳಲಿದೆ, ಸಂವಿಧಾನದ ಶಕ್ತಿ‌ ಮೆರೆಯಲಿದೆ, ಮಹಿಳಾ ಮೀಸಲಾತಿ ವಿಜೃಂಬಿಸಲಿದೆ ಎಂದು ಹೇಳಿದ್ದಾರೆ.