ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!

ಬೆಳಗಾವಿಯಲ್ಲಿ, ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಓಡಿಹೋದ ಮಗಳನ್ನು, ಕುಟುಂಬದ ಮರ್ಯಾದೆಗಾಗಿ ಪೋಷಕರೇ ಹತ್ಯೆ ಮಾಡಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಯುವತಿಯನ್ನು ಪತ್ತೆಹಚ್ಚಿ, ವಿಷವುಣಿಸಿ ಕೊಂದು, ಸಾಕ್ಷ್ಯನಾಶಕ್ಕಾಗಿ ಶವವನ್ನು ಸುಟ್ಟುಹಾಕಿದ್ದಾರೆ.

Share this Video
  • FB
  • Linkdin
  • Whatsapp

ಬೆಳಗಾವಿ: ಹೆತ್ತವರಿಗೆ ಮಕ್ಕಳೇ ಆಸ್ತಿ, ಮಕ್ಕಳೇ ಪ್ರಾಣ. ಹೆಣ್ಣುಮಗಳನ್ನಂತೂ ದೇವತೆಯಂತೆ ಕಂಡು, ಸಂಸ್ಕಾರ ನೀಡಿ ಬೆಳೆಸುತ್ತಾರೆ. ಆದರೆ, ಅದೇ ಹೆತ್ತವರು ತಮ್ಮ ಮರ್ಯಾದೆಗಾಗಿ ಹೆತ್ತ ಮಗಳನ್ನೇ ಹತ್ಯೆ ಮಾಡಿದರೆ? ಇಂತಹದ್ದೇ ಒಂದು ಮೈನಡುಗಿಸುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಮದುವೆಯಾದ ಎರಡೇ ತಿಂಗಳಿಗೆ ಗಂಡನ ಮನೆ ಬಿಟ್ಟು ಪ್ರಿಯಕರನ ಜೊತೆ ಓಡಿಹೋದಳು ಎಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ವಿವಾಹಿತೆಯನ್ನು ಕೊಲೆ ಮಾಡಿ, ಗುಟ್ಟಾಗಿ ಶವವನ್ನೂ ಸುಟ್ಟು ಹಾಕಿರುವ ಆಘಾತಕಾರಿ ಸತ್ಯ ಈಗ ಹೊರಬಿದ್ದಿದೆ.

10 ವರ್ಷದ ಪ್ರೀತಿ ಮತ್ತು ವಿರೋಧ:

ಹುಕ್ಕೇರಿ ತಾಲೂಕಿನ ನದಿಗುಡಿ ಕ್ಷೇತ್ರದ 24 ವರ್ಷದ ಸತ್ಯವ್ವ ಸಂತೋಷ ಹೆಳವಿ ಈ ಮರ್ಯಾದೆಗೇಡು ಹತ್ಯೆಗೆ ಬಲಿಯಾದ ದುರ್ದೈವಿ. ಸತ್ಯವ್ವ ಅದೇ ಗ್ರಾಮದ ಕೃಷ್ಣಾ ಸಹದೇವ ಪಾಟೀಲ ಎಂಬುವವನನ್ನು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಇಬ್ಬರೂ ಒಂದೇ ಗ್ರಾಮದವರಾಗಿದ್ದರಿಂದ ಚಿಕ್ಕಂದಿನಿಂದಲೂ ಜೊತೆಯಲ್ಲಿ ಆಡಿ ಬೆಳೆದವರು. ಆದರೆ, ಕೃಷ್ಣಾ ಅನ್ಯಜಾತಿಯವನು ಎಂಬ ಕಾರಣಕ್ಕೆ ಸತ್ಯವ್ವಳ ಪೋಷಕರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಒಲ್ಲದ ಮನಸ್ಸಿನ ಮದುವೆ ಮತ್ತು ಪರಾರಿ:

ಸತ್ಯವ್ವಳಿಗೆ 20 ವರ್ಷ ತುಂಬುತ್ತಿದ್ದಂತೆ ಪೋಷಕರು ಆಕೆಯ ಪ್ರೀತಿಯನ್ನು ಕಾಲಡಿ ತುಳಿದು, ಬಲವಂತವಾಗಿ ರಾಯಬಾಗ ತಾಲೂಕಿನ ಹಣಬರಟ್ಟಿಯ ಸಂತೋಷ ಹೆಳವಿ ಎಂಬುವವನ ಜೊತೆ 4 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಪೋಷಕರ ಒತ್ತಾಯಕ್ಕೆ ಮಣಿದು ಮದುವೆಯಾದ ಸತ್ಯವ್ವ, ಗಂಡನ ಮನೆಯಲ್ಲಿ ಕಳೆದಿದ್ದು ಕೇವಲ ಎರಡು ತಿಂಗಳು ಮಾತ್ರ. ಪ್ರಿಯಕರ ಕೃಷ್ಣಾನನ್ನು ಮರೆಯಲಾಗದ ಸತ್ಯವ್ವ, ಎರಡೇ ತಿಂಗಳಲ್ಲಿ ಆತನ ಜೊತೆ ಮನೆ ಬಿಟ್ಟು ಪರಾರಿಯಾಗಿದ್ದಳು.

ಮರ್ಯಾದೆಗಾಗಿ ನಡೆದ ಸಂಚು:

ಮಗಳು ತನ್ನ ಜಾತಿಯವನಲ್ಲದ ಹುಡುಗನ ಜೊತೆ ಓಡಿಹೋಗಿದ್ದು ಕುಟುಂಬದ ಮರ್ಯಾದೆಗೆ ಧಕ್ಕೆ ತಂದಿದೆ ಎಂದು ಆಕೆಯ ಮನೆಯವರು ಆಕ್ರೋಶಗೊಂಡಿದ್ದರು. ಕಳೆದ ನಾಲ್ಕು ತಿಂಗಳಿಂದ ಆಕೆಗಾಗಿ ತೀವ್ರ ಹುಡುಕಾಟ ನಡೆಸಿದ್ದ ಕುಟುಂಬಕ್ಕೆ, ಮಾರ್ಚ್ 13ರಂದು ಸತ್ಯವ್ವ ಮಹಾರಾಷ್ಟ್ರದಲ್ಲಿ ಪ್ರಿಯಕರನ ಜೊತೆ ಇರುವುದು ತಿಳಿದುಬಂದಿದೆ. ಕೂಡಲೇ ಅಲ್ಲಿಗೆ ಹೋದ ಸತ್ಯವ್ವಳ ಚಿಕ್ಕಪ್ಪ ಪ್ರಕಾಶ ಭೀಮಪ್ಪ ಹೆಳವರ, ಸಹೋದರ ಶಾನೂರ ಸದಾಶಿವ ಮತ್ತು ಭಾವ ಮೊರಬದ ಕಲ್ಲಪ್ಪ ಮಾಯಪ್ಪ, ಆಕೆಯನ್ನು ಮನವೊಲಿಸುವ ನಾಟಕವಾಡಿ ಮಹಾರಾಷ್ಟ್ರದ ಶಿರೋಳಕ್ಕೆ ಕರೆದುಕೊಂಡು ಹೋಗಿದ್ದಾರೆ.

ಮಧ್ಯರಾತ್ರಿ ವಿಷವಿಕ್ಕಿ ಹತ್ಯೆ:

ಶಿರೋಳದ ಟೆಂಟ್‌ನಲ್ಲಿ ಸತ್ಯವ್ವಳನ್ನು ಕೂಡಿಹಾಕಿದ ಕುಟುಂಬಸ್ಥರು, ಆಕೆಗೆ ಮಗದೊಮ್ಮೆ ತಮ್ಮದೇ ಜಾತಿಯ ಬೇರೆ ಹುಡುಗನ ಜೊತೆ ಮದುವೆ ಮಾಡುವುದಾಗಿ ಹೇಳಿದರು. ಆದರೆ, ಸತ್ಯವ್ವ ತನ್ನ ಪ್ರಿಯಕರನನ್ನೇ ಮದುವೆಯಾಗುವುದಾಗಿ ಹಠ ಹಿಡಿದಾಗ, ಕೆರಳಿದ ಕಿರಾತಕರು ಮಧ್ಯರಾತ್ರಿ ಆಕೆಗೆ ಬಲವಂತವಾಗಿ ವಿಷ ಕುಡಿಸಿದ್ದಾರೆ. ಸತ್ಯವ್ವ ಪ್ರಾಣ ಬಿಡುತ್ತಿದ್ದಂತೆಯೇ, ಯಾರಿಗೂ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಅರಗದ ಸ್ಮಶಾನದಲ್ಲಿ ಶವವನ್ನು ಸುಟ್ಟು ಹಾಕಿ ಸಾಕ್ಷ್ಯನಾಶ ಮಾಡಿದ್ದಾರೆ.

ಪ್ರಿಯಕರನ ದೂರಿನಿಂದ ಹೊರಬಂತು ಸತ್ಯ:

ಸತ್ಯವ್ವಳನ್ನು ಕರೆದುಕೊಂಡು ಹೋದ ಕುಟುಂಬದವರು ಆಕೆಯನ್ನು ಏನು ಮಾಡಿರಬಹುದು ಎಂಬ ಅನುಮಾನ ಪ್ರಿಯಕರ ಕೃಷ್ಣಾ ಸಹದೇವ ಪಾಟೀಲನಿಗೆ ಬಂದಿದೆ. ಆಕೆ ನಾಪತ್ತೆಯಾದ ಬಗ್ಗೆ ಅನುಮಾನಗೊಂಡು ಕೃಷ್ಣಾ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಯಮಕನಮರಡಿ ಠಾಣೆ ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಸತ್ಯವ್ವಳ ಪೋಷಕರ ನಡವಳಿಕೆ ಮೇಲೆ ಅನುಮಾನ ಬಂದಿದೆ. ಪೋಷಕರನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಮರ್ಯಾದೆಗಾಗಿ ಮಗಳನ್ನೇ ಕೊಂದ ಭೀಕರ ಸತ್ಯವನ್ನು ಅವರು ಒಪ್ಪಿಕೊಂಡಿದ್ದಾರೆ.

ಸದ್ಯ ಪೊಲೀಸರು ಹತ್ಯೆಯಲ್ಲಿ ಭಾಗಿಯಾಗಿದ್ದ ಚಿಕ್ಕಪ್ಪ, ಸಹೋದರ ಮತ್ತು ಭಾವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮುಚ್ಚಿಹೋಗಿದ್ದ ಈ ಮರ್ಯಾದೆಗೇಡು ಹತ್ಯೆ ಪ್ರಕರಣವನ್ನು ಭೇದಿಸಿದ ಯಮಕನಮರಡಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Related Video