ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅತ್ಯಾಚಾ*ರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದೆ. ನಟಿ ರಮ್ಯಾ 'ಎಲ್ಲಾ ಮಹಿಳೆಯರಿಗೂ ನ್ಯಾಯ ಸಿಕ್ಕಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುವುದು.

ಹಾಸನ/ಬೆಂಗಳೂರು (ಆ.1): ಮನೆ ಕೆಲಸದಾಕೆಯ ಮೇಲೆ ಅತ್ಯಾಚಾ*ರ ಮಾಡಿದ ಆರೋಪದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪು ಹೊರಬಂದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ನಟಿ ರಮ್ಯಾ (ದಿವ್ಯ ಸ್ಪಂದನ) ಅವರು ಸಂತಸ ವ್ಯಕ್ತಪಡಿಸುತ್ತಾ, 'ಎಲ್ಲಾ ಮಹಿಳೆಯರಿಗೂ ನ್ಯಾಯ ಸಿಕ್ಕಿದೆ' ಎಂಬ ಭಾವನಾತ್ಮಕ ಪೋಸ್ಟ್‌ ಹಾಕಿದ್ದಾರೆ.

ತೀರ್ಪು ಪ್ರಕಟ: ಕಣ್ಣೀರು ಹಾಕಿದ ಪ್ರಜ್ವಲ್

ಪ್ರಜ್ವಲ್ ವಿರುದ್ಧದ ಕೇಸ್‌ನ ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ತೀರ್ಪು ನೀಡಿದ್ದು, ಐಪಿಸಿ 376(2)(k), 376(2)(n), 354(a)(b)(c), 506 ಮತ್ತು 201 ಸೆಕ್ಷನ್‌ಗಳಡಿ ಗಂಭೀರ ಆರೋಪಗಳನ್ನು ಸಾಬೀತುಪಡಿಸಲಾಗಿದೆ. ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ 66(E) ಅಡಿಗೂ ಕೇಸ್ ದಾಖಲಾಗಿತ್ತು. ಶಿಕ್ಷೆಯ ಪ್ರಮಾಣವನ್ನು ನಾಳೆ (ಆ.2) ಪ್ರಕಟಿಸಲಾಗುತ್ತದೆ ಎಂದು ಆದೇಶಿಸಿದರು.

ಇನ್ನು ಒಬ್ಬ ರಾಜಕೀಯ ನಾಯಕ ಹಾಗೂ ಪ್ರಬಲ ವ್ಯಕ್ತಿ ಎಸಗಿದ ಅಪರಾಧಿ ಕೃತ್ಯದ ಬಗ್ಗೆ ಕೇವಲ 14 ತಿಂಗಳಲ್ಲಿ ಕೋರ್ಟ್ ತೀರ್ಪು ಪ್ರಕಟಿಸಿದೆ. ನ್ಯಾಯಾಂಗ ವ್ಯವಸ್ಥೆಯ ತ್ವರಿತ ಕಾರ್ಯವೈಖರಿ ಪ್ರಶಂಸೆಗೂ ಪಾತ್ರವಾಗಿದೆ. ತೀರ್ಪು ಪ್ರಕಟಗೊಂಡ ತಕ್ಷಣ ಕೋರ್ಟ್ ಒಳಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದರು. ಇನ್ನು ಕೋರ್ಟಿನ ಆವರಣದಲ್ಲಿ ಈ ಕೇಸಿನ ತೀರ್ಪನ್ನು ಆಲಿಸಲು ನೂರಾರು ವಕೀಲರು ಕಿಕ್ಕಿರಿದು ತುಂಬಿದ್ದರು. ಪ್ರಜ್ವಲ್ ಕಣ್ಣೀರು ಹಾಕುತ್ತಾ ಕೋರ್ಟ್‌ನಿಂದ ಹೊರನಡೆಯುವ ದೃಶ್ಯ ಕಂಡುಬಂದಿತು.

ರಮ್ಯಾ ಪೋಸ್ಟ್‌ನಲ್ಲಿ ರಾಜಕೀಯ ಸಂದೇಶವಿದೆಯೇ?

ಈ ಕೇಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ, ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ 'ಎಲ್ಲ ಮಹಿಳೆಯರಿಗೂ ನ್ಯಾಯ ಸಿಕ್ಕಿದೆ' ಎಂದು ಬರೆಯುವ ಮೂಲಕ ಈ ವಿಷಯವನ್ನು ಜನತೆಯ ಗಮನಕ್ಕೆ ತಂದಿದ್ದಾರೆ. ಕೆಲವರು ಇದನ್ನು ಮಹಿಳೆಯರ ಪರವಾಗಿ ನಟಿ ಸಂದೇಶ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಮತ್ತೆ ಕೆಲವರು ನಟಿ ರಮ್ಯಾ ಹೇಳಿಕೆಯನ್ನು ಕಾಂಗ್ರೆಸ್‌ನವರು ನೀಡುತ್ತಿರುವ ರಾಜಕೀಯ ದ್ವೇಷದ ನುಡಿಗಳು ಎಂದು ಹೇಳುತ್ತಿದ್ದಾರೆ.

ಹಾಸನದ ಬಿಜೆಪಿ ಮುಖಂಡರ ಪ್ರತಿಕ್ರಿಯೆ

ಹಾಸನ ಮೂಲದ ಹಿರಿಯ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಪ್ರತಿಕ್ರಿಯೆ ನೀಡುತ್ತಾ, 'ಈ ತೀರ್ಪು ಅನಿವಾರ್ಯವಾಗಿತ್ತು. ಎಸ್‌ಐಟಿ ಸಮರ್ಪಕ ಸಾಕ್ಷ್ಯವನ್ನು ನೀಡಿತ್ತು. ಇದೀಗ ಕೋರ್ಟ್‌ನಲ್ಲಿ ಪ್ರಜ್ವಲ್ ಕಣ್ಣೀರು ಹಾಕಿರಬಹುದು. ಆದರೆ, ಅವರ ಕಿರುಕುಳದಿಂದ ಪ್ರಕರಣದ ಹಿಂದೆ ಅದೆಷ್ಟು ಕಣ್ಣೀರು ಹಾಕಿರಬಹುದು ಎಂಬ ಪ್ರಶ್ನೆ ಇದೀಗ ಸಮಾಜಕ್ಕೆ ಕಾಡುತ್ತಿದೆ' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದ ತೀರ್ಪು, ಕೇವಲ ಕಾನೂನಿನ ಜಯವಲ್ಲ, ರಾಜಕೀಯ ತಾರತಮ್ಯ ಮತ್ತು ಶೋಷಣೆಯ ವಿರುದ್ಧದ ಮುಗ್ಧ ಮಹಿಳೆಯರ ಗೆಲುವು ಎಂಬ ಸಂದೇಶವನ್ನೂ ನೀಡಿದೆ.

ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, 'ಈ ಪ್ರಕರಣವನ್ನು ಜೆಡಿಎಸ್-ಬಿಜೆಪಿ ಸಂಬಂಧ ಕಡಿದುಕೊಳ್ಳುವ ರಾಜಕೀಯ ಚರ್ಚೆಗೂ ದಾರಿ ಮಾಡಿಕೊಟ್ಟಿವೆ. 'ಇಂತಹ ಘಟನೆಗೆ ರಾಜಕೀಯ ನಿವೃತ್ತಿ ಅತ್ಯಾವಶ್ಯಕ' ಕೂಡಲೇ ಪ್ರಜ್ವಲ್ ರಾಜಕೀಯ ನಿವೃತ್ತಿ ಘೋಷಣೆ ಮಾಡಬೇಕು. ಬಿಜೆಪಿಯವರು ಇಂತಹ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ಮಾಡುವ ಬದಲು, ಜೆಡಿಎಸ್‌ನೊಂದಿಗೆ ಇರುವ ಮೈತ್ರಿ ಕಡಿದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.