ಸಜಾ ಬಂಧಿಗಳು ಸಲ್ಲಿಸುವ ಅಧಿಕ ಸಂಖ್ಯೆಯ ಪರೋಲ್‌ ಅರ್ಜಿಗಳಿಂದ ನ್ಯಾಯಾಲಯದ ಮೇಲೆ ಹೊರೆ ಹೆಚ್ಚಾಗುತ್ತಿರುವ ಬಗ್ಗೆ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಈ ಅರ್ಜಿಗಳನ್ನು ಜೈಲು ಅಧಿಕಾರಿಗಳೇ ಕಾನೂನು ಪ್ರಕಾರ ವಿಲೇವಾರಿ ಮಾಡಿದರೆ ಹೊರೆ ಕಡಿಮೆಯಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

ಬೆಂಗಳೂರು (ಡಿ.16) ಪರೋಲ್‌ ಕೋರಿ ಸಜಾ ಬಂಧಿಗಳು ಸಲ್ಲಿಸುವ ಮನವಿಗಳ ಸಂಬಂಧ ಜೈಲು ಅಧಿಕಾರಿಗಳೇ ಸೂಕ್ತ ಆದೇಶ ಹೊರಡಿಸಿದರೆ, ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪರೋಲ್‌ ಮಂಜೂರಾತಿಗೆ ಕೋರಿದ ಸುಮಾರು 60 ಅರ್ಜಿಗಳು ಸೋಮವಾರ ಒಂದೇ ದಿನ ವಿಚಾರಣೆಗೆ ನಿಗದಿಯಾಗಿರುವುದನ್ನು ಕಂಡು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ಮಧ್ಯಾಹ್ನದ ಕಲಾಪದ ವೇಳೆ ನ್ಯಾಯಮೂರ್ತಿಗಳು ಪರೋಲ್‌ ಮಂಜೂರಾತಿ ಕೋರಿದ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡರು. ಒಂದೂವರೆ ಗಂಟೆ ಸಮಯದಲ್ಲಿ 25ಕ್ಕೂ ಅಧಿಕ ಪರೋಲ್‌ ಅರ್ಜಿಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡಿದರು. ಸಂಜೆ 4.50 ಆದರೂ ಪರೋಲ್‌ ಅರ್ಜಿಗಳ ವಿಚಾರಣೆ ಅಂತ್ಯವಾಗಿರಲಿಲ್ಲ. ಈ ಹಂತದಲ್ಲಿ ಇನ್ನೆಷ್ಟು ಅರ್ಜಿಗಳಿವೆ? ಇನ್ನೂ ಮುಗಿದಿಲ್ಲವೇ? ಎಂದು ಸರ್ಕಾರಿ ವಕೀಲರನ್ನು ಕೇಳಿದ ನ್ಯಾಯಮೂರ್ತಿಗಳು, ಬಳಿಕ ವಿಚಾರಣಾ ಪಟ್ಟಿಯಲ್ಲಿನ ಪರೋಲ್‌ ಅರ್ಜಿಗಳ ಸಂಖ್ಯೆ ಗಮನಿಸಿದರು.

ಆಗ 60 ಅರ್ಜಿಗಳು ವಿಚಾರಣೆಗೆ ನಿಗದಿಯಾಗಿರುವುದನ್ನು ಗಮನಕ್ಕೆ ಬಂತು. ಅದಕ್ಕೆ ಸರ್ಕಾರಿ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಇದೇನ್ರಿ 60 ಅರ್ಜಿಗಳಿವೆ. ಇಷ್ಟೆಲ್ಲಾ ಅರ್ಜಿಗಳನ್ನು ವಿಚಾರಣೆ ನಡೆಸಬೇಕಾದರೆ ಇಡೀ ದಿನದ ಸಮಯ ಬೇಕಾಗುತ್ತದೆ. ಜೈಲು ಅಧಿಕಾರಿಗಳೇ, ಪರೊಲ್‌ ಕೋರಿದ ಅರ್ಜಿಗಳನ್ನು ಪರಿಗಣಿಸಿ ಕಾನೂನು ಪ್ರಕಾರ ಆದೇಶಿಸಬೇಕು. ಇದರಿಂದ ನ್ಯಾಯಾಲಯಕ್ಕೆ ಬರುವ ಅರ್ಜಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇಲ್ಲವಾದರೆ ನ್ಯಾಯಾಲಯದ ಮೇಲಿನ ಹೆಚ್ಚು ಹೊರೆಯಾಗುತ್ತದೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ಸರ್ಕಾರಿ ವಕೀಲರಿಗೆ ನಿರ್ದೇಶಿಸಿದರು.

ಕೈದಿ 11 ವರ್ಷ ನಾಪತ್ತೆ ಆಗಿದ್ದಕ್ಕೆ ಪರೋಲ್‌ ನಕಾರ

ಈ ಮಧ್ಯೆ ಪರೋಲ್‌ ಕೋರಿ ಸಜಾ ಬಂಧಿಯೋರ್ವನ ಪತ್ನಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲರು ಹಾಜರಾಗಿ, 90 ದಿನಗಳ ಪರೋಲ್‌ ಮಂಜೂರಾತಿಗೆ ಕೋರಿದರು. ಆಗ ನ್ಯಾಯಮೂರ್ತಿಗಳು, ಜೈಲು ಅಧಿಕಾರಿಗಳು ಏಕೆ ಪರೋಲ್‌ ನಿರಾಕರಿಸಿದ್ದಾರೆ ಎಂದು ಪ್ರಶ್ನಿಸಿದರು. ವಕೀಲರು ಉತ್ತರಿಸಿ, ಈ ಹಿಂದೆ 30 ದಿನಗಳ ಕಾಲ ಪರೋಲ್‌ ಮೇಲೆ ಬಿಡುಗಡೆಯಾಗಿದ್ದ ಕೈದಿ 11 ವರ್ಷ ತಲೆಮರೆಸಿಕೊಂಡಿದ್ದರು. ಕಳೆದ ವರ್ಷವಷ್ಟೇ ಪೊಲೀಸರು ಆತನನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಿದ್ದಾರೆ ಎಂದರು. ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, 30 ದಿನ ಪರೋಲ್‌ ನೀಡಿದ್ದಕ್ಕೆ 11 ವರ್ಷ ಕೈದಿ ತಲೆಮರೆಸಿಕೊಂಡಿದ್ದಾರೆ. ಇದೀಗ ಪರೋಲ್‌ ನೀಡಿದರೆ ಮತ್ತೆ 11 ವರ್ಷ ನಾಪತ್ತೆಯಾಗುತ್ತಾರೆ. ಅದಕ್ಕೆ ಅವಕಾಶ ಕೊಡಲಾಗುವುದಿಲ್ಲ. ಈ ಕೈದಿ ಪರೋಲ್‌ಗೆ ಅರ್ಹನಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದರು.